Advertisement
ಪುತ್ತೂರು: ಬೆಲೆ ಕಡಿಮೆಯಾಗಿದ್ದಾಗ ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿ ಸರಕಾರ ಭಾರೀ ಒತ್ತಡದ ಬಳಿಕ ಕೊನೆಗೊಮ್ಮೆ ಬೆಂಬಲ ಬೆಲೆ ಘೋಷಿಸುವುದು ಸಾಮಾನ್ಯ. ಆದರೆ ಕೇರಳ ರಾಜ್ಯವು ಗೇರುಬೀಜದ ಬೆಲೆಯನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಗೆ ನಿಗದಿಗೊಳಿಸಿದ್ದರಿಂದ ಅಲ್ಲಿನ ಗೇರು ಸಂಸ್ಕರಣಾ ಘಟಕಗಳು ಇದನ್ನೇ ಮಾನದಂಡವಾಗಿರಿಸಿಕೊಂಡು ಬೆಳೆಗಾರರನ್ನು ಶೋಷಿಸಲಾರಂಭಿಸಿವೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಹೂ ಬಿಟ್ಟು ಜನವರಿ ತಿಂಗಳಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು ಕಳೆದ ವರ್ಷದಂತೆ ಈ ಬಾರಿಯೂ ತಡವಾಗಿ ಹೂ ಬಿಟ್ಟು ಈಗ ನಿಧಾನವಾಗಿ ಫಸಲು ತುಂಬಿಕೊಳ್ಳುತ್ತಿವೆ. ಡಿಸೆಂಬರ್ ತಿಂಗಳ ವರೆಗೂ ಸುರಿದ ಮಳೆಯಿಂದ ಗೇರು ಮರಗಳು ಹೂ ಬಿಡಲು ತಡವಾಗಿದೆ. ಆರಂಭದಲ್ಲಿ ಚಳಿ, ಅನಂತರ ಸೆಕೆಯ ವಾತಾವರಣ ಗೇರು ಫಸಲಿಗೆ ಪೂರಕ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ವಾತಾವರಣ ಬಿಸಿ ಏರಿದಂತೆ ಗೇರು ಫಸಲು ಹೆಚ್ಚುತ್ತದೆ ಎಂಬುದು ಗೇರು ಕೃಷಿ ತಜ್ಞರ ಅಭಿಪ್ರಾಯ. ಪ್ರಸ್ತುತ ಇದೇ ರೀತಿಯ ವಾತಾವರಣ ಇದೆ.
Related Articles
ಗೇರು ಮರ ಹೂಬಿಟ್ಟ ಬಳಿಕ ಅಂದರೆ ಫೆಬ್ರವರಿ, ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಒಂದೆರಡು ಸಾಮಾನ್ಯ ಮಳೆಯಾದರೆ ಗೇರು ಬೀಜ ಫಸಲು ಹೆಚ್ಚಾಗುತ್ತದೆ. ಆದರೆ ನಿರಂತರ ಮಳೆ ಸುರಿದರೆ, ಮೋಡ
ಇದ್ದರೆ ಅಥವಾ ಮಂಜಿನ ವಾತಾವರಣ ಹೆಚ್ಚಿದ್ದರೆ ಹೂವು ಕರಟಿ ಫಸಲು ಕಡಿಮೆಯಾಗುತ್ತದೆ. ಈ ಬಾರಿ ಫೆಬ್ರವರಿಯಲ್ಲಿ
ಸಣ್ಣ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಗೇರು ಕೃಷಿಗೆ ಲಾಭವೇ ಆಗಿದೆ. ಮುಂದೆ ಹತ್ತನಾವ (ಪತ್ತನಾಜೆ) ತನಕ ಮಾರುಕಟ್ಟೆಯಲ್ಲಿ ಗೇರುಬೀಜ ಖರೀದಿಯಾಗುವುದರಿಂದ ದೊಡ್ಡ ಪ್ರಮಾಣದ ಮಳೆ ಬಾರದಿದ್ದರೆ ಹೆಚ್ಚು ಗೇರು ಫಸಲು ಕೈಹಿಡಿಯುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.
Advertisement
ಉಳ್ಳಾಲ ತಳಿಗಳಿಗೆ ಬೇಡಿಕೆಕರಾವಳಿ ಭಾಗದಲ್ಲಿ ಊರಿನ ತಳಿಗಳ ಜತೆಗೆ ಉಳ್ಳಾಲ-3, ಭಾಸ್ಕರ, ವಿಆರ್‌ಐ 3 ಮೊದಲಾದ ತಳಿಗಳಿವೆ. ಉಳ್ಳಾಲ-3 ತಳಿ ಮಾತ್ರ ಬೇಗ ಹೂ ಬಿಡುತ್ತವೆ. ಉಳಿದವು ಸ್ವಲ್ಪ ತಡವಾಗುತ್ತವೆ. ಈ ತಳಿಗಳಲ್ಲಿ ಉತ್ತಮ ಫಸಲು ಬರುವುದರಿಂದ ಇದಕ್ಕೆ ಬೇಡಿಕೆಯೂ ಹೆಚ್ಚಿದೆ. ಇಲ್ಲೊಂದು ರೀತಿ, ಅಲ್ಲೊಂದು ರೀತಿ
ಬೆಂಬಲ ಬೆಲೆಯಿಂದ ಬೆಳೆಗಾರರಿಗೆ ಉಪಕಾರವಾಗಬೇಕಿತ್ತು. ಆದರೆ ಇಲ್ಲಿ ಅಪಕಾರವಾಗಿದೆ. ಕಚ್ಚಾ ಗೇರುಬೀಜಕ್ಕೆ ಮಳೆ ಬಿದ್ದ ಮೇಲೆ ಬೆಲೆಯೇ ಇಲ್ಲದಂತಾಗುತ್ತದೆ. ಆದುದರಿಂದ ಯಾವುದೇ ಬೆಳೆಗಾರ ಅಂತಹ
ಅಪಾಯವನ್ನು ಎದುರಿಸಲು ಸಿದ್ಧನಾಗಿರುವುದಿಲ್ಲ. ಇದನ್ನು ಗೇರು ಉತ್ಪನ್ನಗಳ ಸಂಸ್ಕರಣಾ ಘಟಕಗಳವರು ಚೆನ್ನಾಗಿ ತಿಳಿದಿದ್ದು, ಆ ದಾಳವನ್ನು ಈಗ ಉರುಳಿಸುತ್ತಿದ್ದಾರೆ. ದಾಖಲೆ ನಿರ್ಮಿಸಿದ ಗೇರು
2015ನೇ ಸಾಲಿನಲ್ಲಿ 80ರಿಂದ 90 ರೂ.ಗೆ ಖರೀದಿಯಾಗಿದ್ದ ಗೇರುಬೀಜ 2016ನೇ ಸಾಲಿನಲ್ಲಿ ಗರಿಷ್ಠ 120-130 ರೂ. ತನಕವೂ ಖರೀದಿಯಾಗಿದೆ. 2017ನೇ ಸಾಲಿನಲ್ಲಿ ಆರಂಭದಲ್ಲೇ ಮಾರುಕಟ್ಟೆಯಲ್ಲಿ 150 ರೂ.ಗೆ ಖರೀದಿಯಾಗಿದೆ. 2015ರ ಮೊದಲು 50 ರೂ.ಗಿಂತ ಕೆಳಗಿನ ದರದಲ್ಲಿ ಹೊಯ್ದಾಡುತ್ತಿದ್ದ ಗೇರುಬೀಜ ದರ ಕಳೆದ 4 ವರ್ಷಗಳಿಂದ ಏರಿಕೆ ಹಾದಿಯಲ್ಲೇ ಸಾಗಿ 150 ರೂ. ತನಕ ತಲುಪಿ ದಾಖಲೆ ನಿರ್ಮಿಸಿತ್ತು. ರಬ್ಬರ್, ಅಡಿಕೆ ಮಧ್ಯೆ ಅಳಿದುಳಿದ ಗೇರು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಈಗ ಮತ್ತೆ ಕೇರಳ ಲಾಬಿ ಚಿಂತೆಯನ್ನು ಮೂಡಿಸಿದೆ. – ರಾಜೇಶ್ ಪಟ್ಟೆ