Advertisement

ನಮ್ಮ ಮೆಟ್ರೋಗೆ ಸಾಲದ ಭರವಸೆ

12:49 AM May 09, 2019 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಹೊರವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗಗಳಿಗೆ ಹಣಕಾಸಿನ ನೆರವು ನೀಡಲು ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಭರವಸೆ ನೀಡಿದ್ದು, ಕ್ರಮವಾಗಿ ಆಗಸ್ಟ್‌ ಮತ್ತು ನವೆಂಬರ್‌ನಲ್ಲಿ ಇವೆರಡೂ ಮಾರ್ಗಗಳಿಗೆ ಟೆಂಡರ್‌ ಕರೆಯಲು ಅನುಮೋದನೆ ದೊರೆಯುವ ಸಾಧ್ಯತೆ ಇದೆ.

Advertisement

ಈ ಸಂಬಂಧ ಎರಡು ದಿನಗಳ ಕಾಲ ಬ್ಯಾಂಕ್‌ ಅಧಿಕಾರಿಗಳು ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದೊಂದಿಗೆ ಎರಡು ದಿನಗಳ ಕಾಲ ನಿರಂತರ ಸಭೆ ನಡೆಯಿತು. ಎರಡೂ ಮಾರ್ಗಗಳಲ್ಲಿ ಮೆಟ್ರೋ ನಿರ್ಮಾಣಕ್ಕೆ ಬ್ಯಾಂಕ್‌ ಒಟ್ಟಾರೆ 3,600 ಕೋಟಿ ರೂ. ಆರ್ಥಿಕ ನೆರವು ನೀಡಲು ಒಪ್ಪಿಗೆ ನೀಡಿದೆ. ಈ ಮೂಲಕ ಟೆಂಡರ್‌ ಹಾದಿ ಸುಗಮವಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ 2023ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿ ಇದೆ.

“19 ಕಿ.ಮೀ. ಉದ್ದದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌. ಪುರ ನಡುವಿನ ಮಾರ್ಗಕ್ಕೆ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಹಾಗೂ 38 ಕಿ.ಮೀ. ಉದ್ದದ ಕೆ.ಆರ್‌. ಪುರ- ಹೆಬ್ಟಾಳ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಕ್ಕೆ ನವೆಂಬರ್‌ನಲ್ಲಿ ಅನುಮೋದನೆ ನೀಡುವ ಭರವಸೆ ಕೊಟ್ಟಿದೆ. ಈ ಅಂತಾರಾಷ್ಟ್ರೀಯ ಬ್ಯಾಂಕ್‌ನಿಂದ 3,600 ಕೋಟಿ ರೂ. ಸಾಲದ ರೂಪದಲ್ಲಿ ದೊರೆಯಲಿದೆ.

ಇದಲ್ಲದೆ, ಜೈಕಾ (ಜಪಾನ್‌ ಇಂಟರ್‌ನ್ಯಾಷನಲ್‌ ಕೋ-ಆಪರೇಷನ್‌ ಏಜೆನ್ಸಿ)ದಿಂದಲೂ ಸುಮಾರು 3,500 ಕೋಟಿ ರೂ. ಸಾಲ ಕೇಳಲಾಗಿದೆ. ಇದರಿಂದ ಸುಮಾರು 7,100 ಕೋಟಿ ರೂ. ದೊರೆಯಲಿದೆ. ಹೀಗೆ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಗರಿಷ್ಠ 7,500 ಕೋಟಿ ರೂ. ಕ್ರೋಡೀಕರಿಸಬೇಕು ಎನ್ನುವುದು ನಮ್ಮ ಗುರಿ ಆಗಿತ್ತು. ಹೆಚ್ಚು-ಕಡಿಮೆ ನಾವು ಅಂದುಕೊಂಡಂತೆ ನೆರವು ಸಿಕ್ಕಿದೆ’ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇs… ವಿಶ್ವಾಸ ವ್ಯಕ್ತಪಡಿಸಿದರು.

ಹೊರವರ್ತುಲ ರಸ್ತೆ ಮಾರ್ಗವು 5,994 ಕೋಟಿ ರೂ. ಯೋಜನಾ ವೆಚ್ಚ ಒಳಗೊಂಡಿದ್ದು, 13 ನಿಲ್ದಾಣಗಳು (ಮೂಲ ಯೋಜನೆ ಪ್ರಕಾರ) ಬರಲಿವೆ. ಮೊದಲ ಹಂತದಲ್ಲಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮಹದೇವಪುರದವರೆಗೆ ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗುವುದು. ಈ ಹಿಂದೆ ಇಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲು ಉದ್ದೇಶಿಸಲಾಗಿತ್ತು. ಬಳಿಕ ರದ್ದುಗೊಳಿಸಲಾಯಿತು. ಈ ಸಂಬಂಧ ಮಹದೇವಪುರದವರೆಗಿನ ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದದ್ದು ಮುಂದಿನ ಎರಡು ತಿಂಗಳಲ್ಲಿ ಮುಗಿಯಲಿದೆ.

Advertisement

ಅದೇ ರೀತಿ, ವಿಮಾನ ನಿಲ್ದಾಣ ಮಾರ್ಗದಲ್ಲಿ ಕಸ್ತೂರಿನಗರದಿಂದ ಹೆಬ್ಟಾಳದವರೆಗೆ ಸಮೀಕ್ಷೆ ಕಾರ್ಯ ನಡೆದಿದ್ದು, 15 ದಿನಗಳಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಬೀಳಲಿದೆ. ಇಲ್ಲಿ ಎರಡನೇ ಹಂತದಲ್ಲಿ ಹೆಬ್ಟಾಳದಿಂದ ವಿಮಾನ ನಿಲ್ದಾಣದವರೆಗೆ ಟೆಂಡರ್‌ ಕರೆಯಲಾಗುವುದು. ಒಟ್ಟಾರೆ 38 ಕಿ.ಮೀ. ಉದ್ದದ ಮಾರ್ಗದಲ್ಲಿ 17 ನಿಲ್ದಾಣಗಳು ಬರಲಿವೆ. 10,584 ಕೋಟಿ ಮೊತ್ತದ ಯೋಜನೆ ಇದಾಗಿದೆ. “ಈ ಎರಡೂ ಮಾರ್ಗಗಳಿಗೆ ಈಗಾಗಲೇ ಇರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಶೇ. 30ರಷ್ಟು ಅನುದಾನ ದೊರೆಯಲಿದೆ. ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ಮಾಹಿತಿ ನೀಡಿದರು.

ಏನು ವಿಶೇಷ?: ಏಷಿಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಈ ಹಿಂದೆ “ನಮ್ಮ ಮೆಟ್ರೋ’ ಸೇರಿದಂತೆ ದೇಶದ ಯಾವುದೇ ಮೆಟ್ರೋ ಯೋಜನೆಗಾಗಿ ಆರ್ಥಿಕ ನೆರವು ನೀಡಿರಲಿಲ್ಲ. ಭಾರತ ಸೇರಿದಂತೆ ಏಷಿಯಾದ ಹಲವು ದೇಶಗಳಿಗೆ ಬ್ಯಾಂಕ್‌ ನೆರವು ನೀಡಿದೆ. ಅಷ್ಟೇ ಯಾಕೆ, ರಾಜ್ಯದ ವಿವಿಧ ಯೋಜನೆಗಳಿಗೂ ಸಾಲ ಕೊಟ್ಟಿದೆ. ಆದರೆ, ಮೆಟ್ರೋ ಯೋಜನೆಗಾಗಿ 3,500 ಕೋಟಿ ನೀಡಲು ಮುಂದೆಬಂದಿರುವುದು ಇದೇ ಮೊದಲು. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ನೀಡುವ ಸಾಲ ದೀರ್ಘಾವಧಿ ಜತೆಗೆ ಕಡಿಮೆ ಬಡ್ಡಿದರ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಯೋಜನೆಗೆ ಇದು ಸ್ವಾಗತಾರ್ಹ ಬೆಳವಣಿಗೆ.

ಜೈಕಾ ಬಡ್ಡಿ ದರ ಕಡಿಮೆ: ದೇಶದ ಮುಂಬೈ-ಹೈದರಾಬಾದ್‌ ನಡುವಿನ ಹೈ-ಸ್ಪೀಡ್‌ ರೈಲು ಯೋಜನೆಗೆ ಜೈಕಾ ಆರ್ಥಿಕ ನೆರವು ನೀಡಲು ಒಪ್ಪಂದ ಮಾಡಿಕೊಂಡಿದೆ. ಅದರ ಬಡ್ಡಿದರ ತುಂಬಾ ಕಡಿಮೆ ಇದ್ದು, ಶೇ.0.1ರಷ್ಟಿದೆ ಎನ್ನಲಾಗಿದೆ. ಅಲ್ಲದೆ, ದೀರ್ಘಾವಧಿಯ ಸಾಲವೂ ಇದಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಟ್ರ್ಯಾಕಿಂಗ್‌, ಸಿಗ್ನಲಿಂಗ್‌ ಸೇರಿದಂತೆ ಯೋಜನೆಯ ಸಿಸ್ಟ್‌ಂ ಕಾಮಗಾರಿಗೆ ಅಗತ್ಯ ಇರುವ ಉಪಕರಣಗಳು, ತಜ್ಞರು ಜಪಾನ್‌ ಮೂಲದವರಾಗಿರುತ್ತಾರೆ. ಸಿವಿಲ್‌ ಕಾಮಗಾರಿ ಮಾತ್ರ ಇಲ್ಲಿಯದ್ದೇ ಆಗಿರುತ್ತದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next