ರಾಯಚೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ ಖಂಡಿಸಿ ನಗರದ ಜೆಸಿ ಭವನದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಒಂದು ದಿನದ ವಿಚಾರ ಸಂಕಿರಣ ನಡೆಸಲಾಯಿತು.
ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ 1927ರ ಡಿ.25ರಂದು ಮನಸ್ಮೃತಿ ದಹಿಸಿದ್ದರ ಸ್ಮರಣಾರ್ಥ ಹಲವೆಡೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ವಕೀಲ ರಾಜಾ ಪಾಂಡುರಂಗ ತಮ್ಮ ವಿಚಾರ ಮಂಡಿಸಿ, ಸಂವಿಧಾನ ಪ್ರತಿಯೊಬ್ಬರಿಗೂ ತಮ್ಮ ಇಚ್ಛೆಯ ಧರ್ಮ ಆರಾಧಿಸುವ, ಅನುಸರಿಸುವ ಹಕ್ಕು ನೀಡಿದೆ. ಆದರೆ, ಸರ್ಕಾರ ಮತಾಂತರ ನಿಷೇಧ ಮಸೂದೆ ಹೆಸರಲ್ಲಿ ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ತರಲು ಮುಂದಾಗಿದೆ. ಮತಾಂತರ ಆಗುವುದು ವ್ಯಕ್ತಿಯ ವೈಯಕ್ತಿಕ ನಿರ್ಧಾರ. ಇದಕ್ಕೆ ಕಾನೂನಿನ ಕಡಿವಾಣದ ಅಗತ್ಯವಿಲ್ಲ. ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಈ ಮಸೂದೆ ಜಾರಿ ಹಿಂದೆ ಸರ್ಕಾರದ ದುರುದ್ದೇಶ ಅಡಗಿದೆ ಎಂದರು.
ಬಲವಂತದ ಮತಾಂತರ ತಡೆಯಲು ಕಾನೂನು ರೂಪಿಸುವುದಾಗಿ ಹೇಳುವ ರಾಜ್ಯ ಸರ್ಕಾರ ಶೋಷಿತ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ಹುನ್ನಾರ ನಡೆಸಿದೆ. ಇಂಥ ಮಸೂದೆ ಅವಶ್ಯಕತೆ ಇದೆಯಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಶರಣ ಬಸವಣ್ಣ, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಅಪಮಾನ ಮಾಡಿರುವುದಕ್ಕೆ ಖಂಡನೆ ವ್ಯಕ್ತವಾಯಿತು. ರಾಜ್ಯ ಸರ್ಕಾರ ದಲಿತರಿಗೆ ಕೃಷಿ ಕಾರ್ಮಿಕರಿಗೆ ಸರ್ಕಾರಿ ಗೋಮಾಳ ಪರಂಪೋಕು ಹೆಚ್ಚುವರಿ ಜಮೀನು ಹಂಚಬೇಕು, ಮಹಿಳೆಯರ ಮದುವೆ ವಯಸ್ಸನ್ನು 18 ವರ್ಷದಿಂದ 21 ವರ್ಷಗಳಿಗೆ ಹೆಚ್ಚಿಸಿದ ಕಾಯ್ದೆ ಕೇಂದ್ರ ಸರ್ಕಾರ ಹಿಂಪಡೆಯುವಂತೆ ಒತ್ತಾಯಿಸಲಾಯಿತು.
ಈ ವೇಳೆ ಚಂದ್ರಶೇಖರ ಗೋರೆಬಾಳ, ಎಸ್.ಮಾರೆಪ್ಪ, ಶ್ರೀನಿವಾಸ ಕಲವಲದೊಡ್ಡಿ, ಎಂ.ಆರ್. ಭೇರಿ, ಮಾರೆಪ್ಪ ಹರವಿ, ಕೆ.ಇ. ಕುಮಾರ ಇದ್ದರು.