Advertisement
ಉತ್ತರದ 7 ಕ್ಷೇತ್ರಗಳಲ್ಲೂ ಗೆಲುವು ಖಚಿತ ಎಂಬ ಅಚಲ ವಿಶ್ವಾಸ ಬಿಜೆಪಿಗಿರಲಿಲ್ಲ. ಈ ರೀತಿ ದಯನೀ ಯ ವಾಗಿ ನೆಲಕಚ್ಚುತ್ತೇವೆಂದು ಕಾಂಗ್ರೆಸ್ ಸಹ ಅಂದು ಕೊಂಡಿರಲಿಲ್ಲ. ಆದರೆ, ಚುನಾವಣೆ ಪ್ರಚಾರ ವೇಳೆ ಸಿಎಂ ಯಡಿಯೂರಪ್ಪ ಪ್ರಯೋಗಿಸಿದ ಆ ಅಸ್ತ್ರ ಚುನಾವಣೆಯ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು. ರಾಜಕೀಯ ವಿರೋಧಿಗಳಿಗೆ ಆಘಾತ ಮೂಡಿಸಿತು.
Related Articles
Advertisement
ಸಿಎಂ ಬಳಸಿದ ಟ್ರಂಪ್‌ಕಾರ್ಡ್: ಸಿಎಂ ಯಡಿ ಯೂರಪ್ಪ ವೀರಶೈವ-ಲಿಂಗಾಯತ ಸಮಾಜ ಎಂದಿಗೂ ನನ್ನ ಕೈ ಬಿಡುವುದಿಲ್ಲ. ಸಿಎಂ ಸ್ಥಾನದಿಂದ ಕೆಳಗಿಸುವ ಅವಕಾಶವನ್ನು ಸಮಾಜ ನೀಡದು ಎಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಯೋಗಿಸಿದ ಭಾವನಾತ್ಮಕ ರೂಪದ ಲಿಂಗಾಯತ ಟ್ರಂಪ್‌ಕಾರ್ಡ್, ಏಳು ಕ್ಷೇತ್ರಗಳ ಮೇಲೂ ತನ್ನದೇ ಪರಿಣಾಮ ಬೀರಿತ್ತು.
ಕಾಗವಾಡದ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಸಿಎಂ ಹಾಗೂ ಸಚಿವ ಜಗದೀಶ ಶೆಟ್ಟರ, ಮತದಾನದ ಮೂರು ದಿನ ಮೊದಲು ಸುಮಾರು 100-120 ಪ್ರಮುಖ ಲಿಂಗಾಯತ ನಾಯಕರ ಸಭೆ ನಡೆಸಿ ಮಹತ್ವದ ಸಂದೇಶ ರವಾನಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅವರೊಂದಿಗೆ ಹೊಂದಾಣಿಕೆ ರಾಜಕೀಯ ಸಂಬಂಧ ಗಳನ್ನು ಮುರಿದು ಪಕ್ಷದ ಪರವಾಗಿಸುವ ಜಾಣ್ಮೆ ತೋರಿದ್ದರು. ಇದು ಕಾಂಗ್ರೆಸ್ ಕಡೆ ವಾಲಬಹುದಾಗಿದ್ದ ಗೆಲುವುನ್ನು ಬಿಜೆಪಿ ಕಿತ್ತುಕೊಂಡಿತು. ಅಷ್ಟೇ ಅಲ್ಲ, ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು.
ಅಥಣಿ ಹಾಗೂ ಕಾಗವಾಡದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವುದು ಬೇಡ ಎಂಬ ಬೆಂಬಲಿಗರು, ಅಭಿಮಾನಿಗಳ ಅನಿಸಿಕೆಗಳನ್ನು ಬದಿಗೊತ್ತಿ ಎಲ್ಲರನ್ನೂ ಪಕ್ಷದ ಪರವಾಗಿ ಕೆಲಸಕ್ಕಿಳಿಯುವಂತೆ ಮಾಡಿದ್ದು ಸಹ ಎರಡು ಕ್ಷೇತ್ರಗಳ ಗೆಲುವು ಸುಲಭವಾಗಿಸಿತು.
ಕೈ ಹಿಡಿದ “ಪಕ್ಷ ಮೊದಲು’ ಎಂಬ ಅಸ್ತ್ರ: ಹಾವೇರಿ ಜಿಲ್ಲೆ ಹಿರೇಕೆರೂರು, ರಾಣಿಬೆನ್ನೂರು ಕ್ಷೇತ್ರದಲ್ಲೂ ಇದೇ ಲಿಂಗಾಯತ ಟ್ರಂಪ್ ಕಾರ್ಡ್ ಪರಿಣಾಮಕಾರಿಯಾಗಿ ಬಳಸಲಾಯಿತು. ರಾಣಿಬೆನ್ನೂರಿನಲ್ಲಿ ಲಿಂಗಾಯತ ಸಿಎಂ ಜತೆಗೆ, ಪಕ್ಷದೊಳಗಿನ ಅಸಮಾಧಾನ ತಣಿಸಲು “ಪಕ್ಷ ಮೊದಲು’ ಎಂಬ ಅಸ್ತ್ರದೊಂದಿಗೆ ಕಷ್ಟದ ಸ್ಥಿತಿ ಸುಲಭವಾಯಿತು.
ಇಲ್ಲಿ ಯಡಿಯೂರಪ್ಪ ನಾಮಬಲ ಜತೆಗೆ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಅವರ ಶ್ರಮವೂ ಸಾಕಷ್ಟಿದೆ. ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ವರ್ತನೆಯಿಂದ ಮುನಿಸಿಕೊಂಡಿದ್ದ ವೀರಶೈವ-ಲಿಂಗಾಯತ ಸಮಾಜದವರನ್ನು ಸ್ಥಳೀಯ ಮುಖಂಡರ ಸಭೆ ನಡೆಸಿ, ಅಭ್ಯರ್ಥಿಗಿಂತ ಸಮಾಜದ ನಾಯಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖ ನೋಡಿ ಎಂದು ಮುನಿಸು ಶಮನಗೊಳಿಸಲಾಗಿತ್ತು.
ಕಾಂಗ್ರೆಸ್ ಎಡವಿದ್ದೆಲ್ಲಿ?: ಬಿಜೆಪಿಯ ಈ ಸಂಘಟಿತ ಯತ್ನಗಳಿಗೆ ತದ್ವಿರುದ್ಧ ಎನ್ನುವಂತೆ ಕಾಂಗ್ರೆಸ್‌ನಲ್ಲಿ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಒಂದೆರಡು ಕಡೆ ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರಾವ ನಾಯಕರೂ ಪ್ರಚಾರಕ್ಕಿಳಿಯಲಿಲ್ಲ. ಮತ ಸೆಳೆಯಬಹುದಾದ ಯಾವುದೇ ತಂತ್ರಗಾರಿಕೆ ಮಾಡಲಿಲ್ಲ.
ಕಾಂಗ್ರೆಸ್‌ನಲ್ಲಿ ಅನೇಕ ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬುದಕ್ಕಿಂತ ಸೋಲಿಸುವುದು ಹೇಗೆಂಬ ನಿಟ್ಟಿನಲ್ಲಿಯೇ ಹೆಚ್ಚು ಯತ್ನಗಳು ನಡೆದವು. ಜೆಡಿಎಸ್ ಗೋಕಾಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿತ್ತಾದರೂ ಅದು ಕೇವಲ ಒಂದೆರಡು ಸಲದ ಪ್ರಚಾರಕ್ಕೆ ಸೀಮಿತವಾಗಿದ್ದು ಬಿಟ್ಟರೆ ಅಭ್ಯರ್ಥಿ ಪರ ಮಹತ್ವದ ಯತ್ನಗಳು ಕೈಗೊಳ್ಳಲಿಲ್ಲ. ಇದೆಲ್ಲದರ ಲಾಭ ತನ್ನದಾಗಿಸಿಕೊಂಡ ಬಿಜೆಪಿ ಕೊನೆ ಗಳಿಗೆಯಲ್ಲಿ ತನ್ನೆಲ್ಲ ಶ್ರಮವನ್ನು ವಿನಿಯೋಗಿಸಿ ಉತ್ತಮ ಫಸಲು ಪಡೆಯಿತು.
* ಅಮರೇಗೌಡ ಗೋನವಾರ