Advertisement
ಹಾಲಾಡಿಯಿಂದಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ) ನಿರ್ವಹಿಸುತ್ತಿದೆ. ಯೋಜನೆ ಆರಂಭಗೊಳ್ಳುವಾಗ 2017ರಲ್ಲಿ ಕೆಯುಐಡಿಎಫ್ಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಎರಡು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಂಡು ಉಡುಪಿ ನಗರದ ಜನತೆಗೆ ನೀರು ಲಭ್ಯವಾಗಲಿದೆ ಎಂದು ಭರವಸೆ ನೀಡಿದ್ದರು.
ಹಾಲಾಡಿಯಿಂದ ಬಜೆಗೆ ನೀರನ್ನು ಪೂರೈಸಿ ಬಜೆಯಲ್ಲಿ ನೀರನ್ನು ಶುದ್ದೀಕರಣಗೊಳಿಸಿ ಅಲ್ಲಿಂದ ಉಡುಪಿಗೆ ನೀರು ಪೂರೈಸುವುದು ಯೋಜನೆಯ ಉದ್ದೇಶ. ಪೈಪ್‌ಲೈನ್ ಹಾದು ಹೋಗಿರುವ ಗ್ರಾ.ಪಂ.ಗಳಿಗೆ ಉಚಿತವಾಗಿ ನೀರು ಕೊಡಲು ನಿರ್ಧರಿಸಲಾಗಿತ್ತು. ಹಾಲಾಡಿಯಿಂದ ಬಜೆಯವರೆಗೆ ಪೈಪ್‌ಲೈನ್ ಹಾದುಹೋಗುವ ಗ್ರಾಮೀಣ ಭಾಗದ ಜನರು ನಮಗೂ ಶುದ್ಧೀಕರಿಸಿದ ನೀರುಬೇಕು ಎಂದು ಪಟ್ಟು ಹಿಡಿದು ಅರ್ಜಿ ಸಮಿತಿಗೆ ಮನವಿ ಮಾಡಲಾಯಿತು. ಪರಿಣಾಮ ಶುದ್ಧೀಕರಣ ಘಟಕವನ್ನು ಹಾಲಾಡಿ ಭರತ್ಕಲ್‌ನಲ್ಲಿ ರೂಪಿಸುವ ಬಗ್ಗೆ ಅರ್ಜಿ ಸಮಿತಿ ಸೂಚಿಸಿದ ಮೇರೆಗೆ ಶುದ್ಧೀಕರಣ ಘಟಕವನ್ನು ಭರತ್‌ಕಲ್‌ನಲ್ಲಿ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇದಕ್ಕೆ 4 ಎಕ್ರೆ ಜಾಗದ ಖರೀದಿ ಪ್ರಕ್ರಿಯೆ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಈ ವರ್ಷ ಡಿಸೆಂಬರ್ ಅಥವಾ ಬೇಸಗೆ ಒಳಗೆ ವಾರಾಹಿ ನೀರು ನಗರಕ್ಕೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಅದಕ್ಕೆ ಪುಷ್ಟಿ ಕೊಡುವಂತೆ ಕೆಲವು ಕೆಲಸಗಳು ವಿಳಂಬವಾಗಿ ಸಾಗುವ ಹಂತದಲ್ಲಿದೆ. ಹಾಲಾಡಿಯಿಂದ ಭರತ್‌ಕಲ್‌ಗೆ ಪೈಪ್‌ಲೈನ್ ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಇಲ್ಲಿ ಖಾಸಗಿ ಮತ್ತು ಅರಣ್ಯ ಇಲಾಖೆ ಭೂಮಿ ಪರಾಭಾರೆ ಮಾಡಿಕೊಳ್ಳಬೇಕು. ಇದಕ್ಕೆ ಇನ್ನೂ ಸಹ ಒಪ್ಪಿಗೆ ಸಿಕ್ಕಿಲ್ಲ. ಅಲ್ಲದೆ ಮಡಿಸಾಲು, ಸೀತಾ, ವಾರಾಹಿ, ಸ್ವರ್ಣಾ, ಬೆನಗಲ್ ಹೊಳೆಯನ್ನು ಪೈಪ್‌ಲೈನ್ ಕ್ರಾಸಿಂಗ್ ಮಾಡಬೇಕು. ಇದರಲ್ಲಿ ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿ ಇದೆ. ಸ್ವರ್ಣಾ ನದಿ ಶೀಂಬ್ರಾದಲ್ಲಿ ಈಗಾಗಲೆ ನಿರ್ಮಾಣಗೊಂಡ ಸೇತುವೆಯಲ್ಲಿ ಪೈಪ್‌ಲೈನ್ ತರುವ ಯೋಜನೆ ಇತ್ತು. ಇಲ್ಲಿ ಪೈಪ್‌ಲೈನ್ ರೂಪಿಸಿಲು ಲೋಕೋಪಯೋಗಿ ಇಲಾಖೆ ಒಪ್ಪಿಗೆ ನೀಡಿಲ್ಲ. ಇದಕ್ಕೆ ಮೇಲ್ಮನವಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲದಿದ್ದರೆ ಸೇತುವೆ ನಿರ್ಮಾಣ ಅನಿವಾರ್ಯ. ಇದಕ್ಕೆ ಕನಿಷ್ಠ ಒಂದು ವರ್ಷವಾದರೂ ಬೇಕು ಎನ್ನಲಾಗುತ್ತಿದೆ. ಒಟ್ಟಾರೆ ಯೋಜನೆ ಪೂರ್ಣಗೊಳ್ಳಲು ಎರಡು ವರ್ಷವಾದರೂ ಹಿಡಿಯಬಹುದು ಎನ್ನಲಾಗುತ್ತಿದೆ. ಅಧಿಕಾರಿಗಳು ಈ ಬೇಸಗೆಯೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
Advertisement
ಎಷ್ಟು ಕೆಲಸ ಬಾಕಿ ಇದೆ ? ಭರತ್‌ಕಲ್‌ನಲ್ಲಿ ನಿರ್ಮಿಸಲಾಗುವ ಡಬ್ಲ್ಯುಟಿಪಿ ಘಟಕದ ಸಿವಿಲ್ ವರ್ಕ್ ಪೂರ್ಣಗೊಂಡಿಲ್ಲ. ಶೇ.40 ಮಾತ್ರ ಕೆಲಸವಾಗಿದೆ. ಘಟಕ ಅನುಷ್ಠಾನ, ಯಂತ್ರೋಪಕರಣ ಅಳವಡಿಕೆ ಸಹಿತ ಸಾಕಷ್ಟು ಕಾಮಗಾರಿ ನಡೆಯುವುದು ಇನ್ನೂ ಬಾಕಿ ಇದೆ. ನಗರಕ್ಕೆ ನೀರು ಪೂರೈಸುವಾಗ ಒಟ್ಟು ಐದು ಹೊಳೆಗಳಲ್ಲಿ ಪೈಪ್‌ಲೈನ್ ಸಾಗಬೇಕಿದೆ. ಕಿರಿದಾದ ಸೇತುವೆ ಮಾದರಿಯಲ್ಲಿ ಸಪೋರ್ಟಿಂಗ್ ಸೇತುವೆ ನಿರ್ಮಿಸಿ ಪೈಪ್ ಅಳವಡಿಸಬೇಕು. ಈ ಕೆಲಸ ಇನ್ನೂ ನಡೆದಿಲ್ಲ. ಪ್ರಸ್ತುತ ಉಡುಪಿ ನಗರದಲ್ಲಿ ಶೇ.80 ರಷ್ಟು ಪೈಪ್‌ಲೈನ್ ಕೆಲಸ ಪೂರ್ಣಗೊಂಡಿದೆ. ಮಣಿಪಾಲ ಅಂಗನವಾಡಿ, ಅನಂತನಗರ, ಇಂದ್ರಾಳಿ, ಮಂಚಿ, ಸಂತೆಕಟ್ಟೆ, ಮಿಶನ್ ಕಂಪೌಂಡ್ , ಕಕ್ಕುಂಜೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದ್ದು, ಕಕ್ಕುಂಜೆ ಹೊರತುಪಡಿಸಿ ಮತ್ತೆಲ್ಲವೂ ಅಂತಿಮಗೊಂಡಿದೆ. ಪೈಪ್‌ಲೈನ್ ವರ್ಕ್ ಶೀಘ್ರ ಪೂರ್ಣ
ಉಡುಪಿ ನಗರದ ವಾರಾಹಿ ಯೋಜನೆ ಪೈಪ್‌ಲೈನ್, ಸಿವಿಲ್‌ವರ್ಕ್ ಕಾಮಗಾರಿ ಶೀಘ್ರ ಮುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕ ಸಭೆ ಕರೆದು ಅಧಿಕಾರಿಗಳು, ಎಂಜಿನಿಯರ್‌ಗಳ ಜತೆಗೆ ಚರ್ಚಿಸಿದ್ದೇನೆ. ಈ ವರ್ಷ ಡಿಸೆಂಬರ್ ಒಳಗೆ ನಗರಕ್ಕೆ ನೀರು ಪೂರೈಸಬೇಕು ಎಂದು ಸೂಚನೆ ನೀಡಿದ್ದೇನೆ. ಕಾಮಗಾರಿಗೆ ಇರುವ ಅಡೆತಡೆಗಳ ಬಗ್ಗೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ನಗರಕ್ಕೆ ನೀರು ಪೂರೈಸುವ ಈ ಯೋಜನೆ ವ್ಯವಸ್ಥಿತವಾಗಿ ಕಾಮಗಾರಿ ನಡೆಸಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿರಂತರ ಪರಿಶೀಲನೆ ನಡೆಸುತ್ತೇನೆ.
-ಯಶ್‌ಪಾಲ್ ಸುವರ್ಣ,
ಶಾಸಕರು. ಉಡುಪಿ. -ಅವಿನ್ ಶೆಟ್ಟಿ