Advertisement

ಶತಮಾನದ “ಬೆಳಗು’

10:11 AM Feb 02, 2020 | Lakshmi GovindaRaj |

ವರಕವಿ ದ.ರಾ. ಬೇಂದ್ರೆ ಹುಟ್ಟಿ (ಜ.31) ಇದೀಗ 125ನೇ ವರ್ಷದ ಸಂಭ್ರಮ. ಅವರ ಕಲ್ಪನೆಯೊಡಲಿನಿಂದಲೇ ಜನ್ಮತಳೆದ “ಬೆಳಗು’ ಎಂಬ ಕವಿತೆಗೂ ನೂರು ಮೀರಿದ ವಯಸ್ಸು. ಕಾಲಗಳೆಷ್ಟೇ ಉರುಳಿದರೂ, ಕವಿಯೊಬ್ಬ ತನ್ನ ಕಾವ್ಯದೊಟ್ಟಿಗೆ ಹೇಗೆ ಜೀವಿಸಿರಬಲ್ಲ ಎನ್ನುವುದರ ಒಂದು ಜೀವಂತ ಸಾಕ್ಷಿ ಬೇಂದ್ರೆ ಮತ್ತು “ಬೆಳಗು’ ಕವಿತೆ…

Advertisement

ಬೇಂದ್ರೆಯವರು ಬೆಳಗು ಪದ್ಯ ಬರೆದು ನೂರು ವರ್ಷಗಳೇ ಆದವು. ಆದರೂ ಕಾಲದ ಭಾರ ಆ ಕವಿತೆಯ ಮೇಲೆ ಬಿದ್ದಿಲ್ಲ. ಅದು ಯಾವತ್ತೋ ಬೇಂದ್ರೆ ಬರೆದಿದ್ದು. ಧಾರವಾಡದ ಅತ್ತಿಕೊಳ್ಳದ ಸೂರ್ಯೋದಯದ ಆಸ್ವಾದನಾ ಫ‌ಲವಾಗಿ ಅಂದು ಎಂದೋ ಉದಿಸಿದ್ದು ಎಂದು ಆ ಕವಿತೆ ಈಗ ಓದುವಾಗ ನನಗೆ ಅನಿಸುತ್ತಾ ಇಲ್ಲ. ಕಲೆಯ ಸ್ವಭಾವವೇ ಹಾಗೆ ಎಂದು ಕಾಣುತ್ತದೆ. ಕಲೆಗೆ ಮುಪ್ಪು ಹಿಡಿಯುವುದಿಲ್ಲ. ಅದು ಸದಾ ವರ್ತಮಾನದ ಅನುಭವವಾಗಿಯೇ ತೋರುವುದು. ಸದ್ಯೋಜಾತಾ ಎನ್ನುತ್ತಾರಲ್ಲ ಅದು ಕಲೆಯ ಆತ್ಮಭಾವ.

ಬೆಳಗು ಒಂದು ಕಾರ್ಯಚೇಷ್ಟೆಯ ಆರಂಭದ ಬಿಂದುವೆಂಬಂತೆ ಕವಿತೆಯ ಮಂಡನೆಯಿದೆ. (ಲೋಕದ ಚೇಷ್ಟೆಗೆ ರವಿ ಬೀಜವಾದಂತೆ- ಅಕ್ಕಮಹಾದೇವಿ). ಕವಿತೆ ಓದುವಾಗ ಈಗ ಕಣ್ಮುಂದೆ ಬೇಂದ್ರೆ ಕಂಡ ಬೆಳಗು ಪುನರ್ಭವಿಸುತ್ತದೆ. ಆದರೆ, ಆ ಬೆಳಗ್ಗಿಗೆ ನಾನು ನೋಡುತ್ತಾ ಬಂದ ಎಷ್ಟೋ ಬೆಳಗುಗಳು ಹೆಗಲು ಕೊಟ್ಟು ಎತ್ತಿಹಿಡಿಯುತ್ತಿವೆ. ಹೀಗೆ ನನ್ನ ಬೆಳಗು ಬೇಂದ್ರೆಯ ಬೆಳಗಿನೊಂದಿಗೆ ಕರಗಿಹೋಗುತ್ತದೆ.

ಬೆಳಗು ಎಂಬುದು ಅಂತರಂಗ ಬಹಿರಂಗಗಳಿಂದ ನಾವು ನಮ್ಮೊಳಕ್ಕೆ ಬಾಚಿ ತಬ್ಬಿಕೊಳ್ಳಬೇಕಾದಂಥ ದಿವ್ಯಾನುಭವ. ಕಣ್ಣಿಂದ ನೋಡುತ್ತಾ; ಕಿವಿಯಿಂದ ಕೇಳುತ್ತಾ; ಮೂಗಿನಿಂದ ಮೂಸುತ್ತಾ; ಸ್ಪರ್ಶದಿಂದ ದಕ್ಕಿಸಿಕೊಳ್ಳುತ್ತಾ; ಜಿಹೆಯಿಂದ ಆಸ್ವಾದಿಸುತ್ತಾ, ಕೊನೆಗೆ ಹಾಗೆ ತುಂಬಿ ತುಂಬಿ ಬಂದ ಅನುಭವವನ್ನು ಅಂತರಂಗದಲ್ಲಿ ಆತ್ಮಸ್ಥ ಮಾಡಿಕೊಳ್ಳುತ್ತಾ, ಆಗ ಅದು ಬರೀ ಬೆಳಗಲ್ಲ; ಶಾಂತಿ ರಸವೇ ಪ್ರೀತಿಯಿಂದ ಮೈತುಂಬಿಕೊಂಡ ಪೂರ್ಣಾನುಭವ ಆದೀತು.

ಅನುಭವವೊಂದನ್ನು ಸಮಗ್ರವಾಗಿ ತಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಬೆಳಗು ಕವಿತೆ ನಮಗೆ ಬೋಧಿಸುತ್ತಾ ಇದೆ. ಅದನ್ನು ನವೋದಯದ ಪ್ರದುರ್ಭವದ ಗೂಟಕ್ಕೆ ಕಟ್ಟಿಹಾಕುವ ಅಗತ್ಯವಿಲ್ಲ. ಯಾವುದೇ ಕವಿತೆಯು ನಮ್ಮ ಇವತ್ತಿನ ಬದುಕನ್ನು ಸ್ವಾದ್ಯಗೊಳಿಸದೆ ಹೋದಲ್ಲಿ ಅಂಥ ಕವಿತೆ ಎಲ್ಲ ಕಾಲಕ್ಕೂ ಸಲ್ಲುವ ಕವಿತೆ ಆಗಲಾರದು. ಹಾಗೆ ನೋಡಿದರೆ, ದಿವ್ಯವಾದ ಯಾವುದೇ ಅನುಭೂತಿಗೆ ಚಿರಂಜೀವತ್ವವನ್ನು ಪ್ರದಾನಿಸುವುದೇ ಕಲೆಯ ಮೂಲ ಧರ್ಮ. ಬೆಳಗು ಕವಿತೆ ಅದನ್ನು ಮಾಡುತ್ತದೆ ಎಂದೇ ಅದು ಕನ್ನಡದ ಒಂದು “ಅಪೂರ್ವ’ ಕವಿತೆ. ಕಾಲದ ಇತಿಮಿತಿ ದಾಟಿಕೊಳ್ಳದೆ, ಕಲೆ ಕಲೆಯೇ ಆಗಲಾರದು. ಕಲೆಗೆ ಮೃತ್ಯುಂಜಯತ್ವ ದಕ್ಕುವುದೇ ಅದರ ಸದ್ಯತನದಿಂದ.

Advertisement

ಬೇಂದ್ರೆ ಹೆಸರು ಹಾಕಿಕೊಂಡಿರಲಿಲ್ಲ!: ದ.ರಾ. ಬೇಂದ್ರೆ ಅವರ ಬೆಳಗು ಕವಿತೆ ಮೊದಲು ಪ್ರಕಟಗೊಂಡಿದ್ದು, “ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. 1920-21ರ ಸುಮಾರಿನಲ್ಲಿ ಎಂದು ವಾಮನ ಬೇಂದ್ರೆ ಆ ಸಂದರ್ಭವನ್ನು ಉಲ್ಲೇಖೀಸಿದ್ದಾರೆ. “ಬೆಳಗು ಕನ್ನಡದ ಮೊದಲ ಭಾವಗೀತೆ. ಆ ಪದ್ಯ ಪ್ರಕಟಗೊಂಡಾಗ ಬೇಂದ್ರೆ ತಮ್ಮ ಹೆಸರನ್ನು ಹಾಕಿಕೊಂಡಿರಲಿಲ್ಲ. ಸದಾನಂದಿಯಾದ ಜಂಗಮನೊಬ್ಬನ ಒಂದು ಬೆಳಗಿನಲ್ಲಿ… ಎಂದು ಬರೆದುಕೊಂಡಿದ್ದರು’ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ, ಶ್ಯಾಮಸುಂದರ ಬಿದರಕುಂದಿ.

ಬೆಳಗು
ಮೂಡಲ ಮನೆಯಾ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣನೆರಕವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಹೋಯ್ತೋ- ಜಗವೆಲ್ಲಾ ತೊಯ್ದಾ.

ರತ್ನದ ರಸದಾ ಕಾರಂಜೀಯೂ
ಪುಟಪುಟನೆ ಪುಟಿದು
ತಾನೇ- ಪುಟಪುಟನೇ ಪುಟಿದು
ಮಘಮ ಸುವಾ ಮುಗಿದ ಮೊಗ್ಗೀ
ಪಟಪಟನೆ ಒಡೆದು
ತಾನೇ- ಪಟಪಟನೇ ಒಡೆದು.

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತದ ಬಿಂದು
ಕಂಡವು- ಅಮೃತ–ದ ಬಿಂದು
ಯಾರಿರಿಸಿರುವರು ಮುಗಿಲ ಮೇಲಿಂ
ದಿಲ್ಲಿಗೇ ತಂದು
ಈಗ- ಇಲ್ಲಿಗೇ ತಂದು.

ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ- ಮೈಯೆಲ್ಲ ಸವರಿ.

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು- ಹಕ್ಕಿಗಳಾ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು- ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹಾ
ಸ್ಪಶಾ- ಪಡೆದೀತೀ ದೇಹಾ,
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ- ದೀ ಮನಸಿನ ಗೇಹಾ.

ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣಾ
ಕಣ್ಣಿಗೆ ಕಾಣದೋ ಬಣ್ಣಾ
ಶಾಂತೀರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ- ಬೆಳಗಲ್ಲೋ ಅಣ್ಣಾ.

* ಎಚ್‌.ಎಸ್‌. ವೆಂಕಟೇಶಮೂರ್ತಿ, ಹಿರಿಯ ಕವಿ

Advertisement

Udayavani is now on Telegram. Click here to join our channel and stay updated with the latest news.

Next