Advertisement

ಮೂರು ಮೈತ್ರಿ ಸರ್ಕಾರಗಳ ಆಯುಷ್ಯವೂ ಗಟ್ಟಿ ಇರಲಿಲ್ಲ

11:31 PM Jul 14, 2019 | Lakshmi GovindaRaj |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಮೂರು ಮೈತ್ರಿ ಸರ್ಕಾರಗಳು ಅಧಿಕಾರ ನಡೆಸಿವೆಯಾದರೂ ಅವುಗಳ ಆಯುಷ್ಯ “ಗಟ್ಟಿ’ಯಾಗಿರಲಿಲ್ಲ. ಜತೆಗೆ, ಆಯಾ ಪಕ್ಷಗಳಿಗೆ ಬಂಡಾಯ ಬೆಂಬಿಡದಂತೆ ಕಾಡಿತ್ತು.

Advertisement

2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ, ಆ ನಂತರದ ಬಿಜೆಪಿ-ಜೆಡಿಎಸ್‌ ಸರ್ಕಾರ, ಆದಾದ ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫ‌ಲಿತಾಂಶದಿಂದ ರಚನೆಗೊಂಡ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಗಳು ಮೈತ್ರಿ ಸರ್ಕಾರದ ಪ್ರಯೋಗ ಕಷ್ಟ ಎಂಬುದಕ್ಕೆ ಸಾಕ್ಷಿ.

ಜತೆಗೆ, 1978ರಿಂದಲೂ ಬಹುಮತದ ಸರ್ಕಾರಗಳಲ್ಲೂ ಪಕ್ಷಗಳ ಆಂತರಿಕ ಭಿನ್ನಮತ ಭುಗಿಲೆದ್ದು, ಮುಖ್ಯಮಂತ್ರಿಗಳ ಬದಲಾವಣೆ ಆಗಿದೆ. ರಾಜಕೀಯ ಧ್ರುವೀಕರಣದ ಭಾಗವಾಗಿ ದೇವರಾಜ ಅರಸು, ಎಚ್‌.ಡಿ.ದೇವೇಗೌಡ, ಎಸ್‌.ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟುವ ಸಾಹಸಕ್ಕೂ ಕೈ ಹಾಕಿದ್ದರು. ಆದರೆ, ಯಾರೂ ಯಶಸ್ವಿಯಾಗಿರಲಿಲ್ಲ.

2004ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 65, ಜೆಡಿಎಸ್‌ 58, ಬಿಜೆಪಿ 79 ಸ್ಥಾನ ಗಳಿಸಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿ, ಜೆಡಿಎಸ್‌ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾದರು. ಆದರೆ, 2006ರ ವೇಳೆಗೆ ಸಿದ್ದರಾಮಯ್ಯ ಹಾಗೂ ದೇವೇಗೌಡರ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಉಂಟಾಗಿ ಸಿದ್ದರಾಮಯ್ಯ ಅವರು ಅಹಿಂದ ಹೋರಾಟ ಆರಂಭಿಸಿದ್ದರಿಂದ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಆಗ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ 46 ಶಾಸಕರು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಂಡಾಯ ಎದ್ದು, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರು. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು.

Advertisement

20 ತಿಂಗಳ ನಂತರ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಒಪ್ಪಂದವಾಗಿತ್ತು. ಆದರೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ನಿರಾಕರಿಸಿದಾಗ ಬಿಜೆಪಿ ಬೆಂಬಲ ವಾಪಸ್‌ ಪಡೆಯಿತು. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಆಗ ಜೆಡಿಎಸ್‌ ವಿರುದ್ಧ ವಚನಭ್ರಷ್ಟರು ಎಂದು ಆರೋಪ ಕೇಳಿ ಬಂತು.

ಇದರ ನಡುವೆ ಜೆಡಿಎಸ್‌ನವರು ಎಂ.ಪಿ.ಪ್ರಕಾಶ್‌ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಈ ಮಧ್ಯೆ ಮತ್ತೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸಹ ಸ್ವೀಕರಿಸಿದರು.

ಆದರೆ, ಕೇಂದ್ರದ ಬಿಜೆಪಿ ನಾಯಕರು ನಮ್ಮ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಜೆಡಿಎಸ್‌ನವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಎಸ್‌ವೈ ವಿರುದ್ಧ ಮತ ಹಾಕಿದರು. ಹೀಗಾಗಿ, ಯಡಿಯೂರಪ್ಪ ಪದಚ್ಯುತಗೊಂಡು ಮತ್ತೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ, ಮತ್ತೆ ಚುನಾವಣೆ ನಡೆಯಿತು. 2008ರಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿತು.

ಬಹುಮತದ ಸರ್ಕಾರದಲ್ಲೂ “ಅನಿಶ್ಚಿತತೆ’: ಮೈತ್ರಿ ಸರ್ಕಾರದಲ್ಲಷ್ಟೇ ಅಲ್ಲ, ಬಹುಮತ ಸರ್ಕಾರದಲ್ಲೂ ಭಿನ್ನಮತ, ಬಂಡಾಯದಿಂದ ಸರ್ಕಾರಕ್ಕೆ ಕಂಟಕವಾದ, ಮುಖ್ಯಮಂತ್ರಿಗಳು ಬದಲಾವಣೆಯಾದ ಉದಾಹರಣೆಗಳೂ ಇವೆ. 1978ರಲ್ಲಿ ದೇವರಾಜ ಅರಸು ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಭಿನ್ನಮತದ ಕಾರಣ ಸರ್ಕಾರ ಪತನಗೊಂಡು, 1988ರಲ್ಲಿ ಆರ್‌. ಗುಂಡೂರಾವ್‌ ಮುಖ್ಯಮಂತ್ರಿಯಾದರು.

1989ರಲ್ಲಿ ಕಾಂಗ್ರೆಸ್‌ ಪಕ್ಷವು 178 ಸ್ಥಾನ ಗಳಿಸಿ ವೀರೇಂದ್ರ ಪಾಟೀಲ್‌ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತಾದರೂ ಭಿನ್ನಮತದ ಕಾರಣ ಎಸ್‌.ಬಂಗಾರಪ್ಪ, ಆನಂತರ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು. ಅದೇ ರೀತಿ, 1994ರಲ್ಲಿ ಜನತಾದಳ 115 ಸ್ಥಾನ ಗಳಿಸಿ ಎಚ್‌.ಡಿ.ದೇವೇಗೌಡರ ನೇತೃತ್ವದ ಸರ್ಕಾರ ರಚನೆಯಾಯಿತಾದರೂ 1996ರಲ್ಲಿ ಅವರು ಪ್ರಧಾನಿಯಾದ ನಂತರ ಜೆ.ಎಚ್‌.ಪಟೇಲ್‌ ಅವರು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಭಿನ್ನಮತ ತಾರಕಕ್ಕೇರಿ ಪಕ್ಷವೇ ಇಬ್ಭಾಗವಾಗುವ ಹಂತ ತಲುಪಿತು.

ಇನ್ನು, 2008ರಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ಆರು ಪಕ್ಷೇತರರ ಜತೆಗೂಡಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತಾದರೂ ಗಣಿ ಹಗರಣ, ಪಕ್ಷೇತರ ಶಾಸಕರ ಅನರ್ಹತೆಯಿಂದಾಗಿ ಉಂಟಾದ ಅಸ್ಥಿರತೆಯಿಂದ ಯಡಿಯೂರಪ್ಪ ಅಧಿಕಾರ ತ್ಯಜಿಸಿ ಡಿ.ವಿ.ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಗಳಾಗಿ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಐದೂ ವರ್ಷ ಶಾಸಕರ ರೆಸಾರ್ಟ್‌ ವಾಸ, ಆಪರೇಷನ್‌ ಕಮಲ ಕಾರ್ಯಾಚರಣೆಯಿಂದ ರಾಜಕೀಯ ಅನಿಶ್ಚಿತತೆ ಮುಂದುವರಿದೇ ಇತ್ತು.

ಬಾಟ್ಲಿಂಗ್‌ ಹಗರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ: ಇದರ ನಡುವೆಯೂ 1983ರಲ್ಲಿ ಜನತಾ ಪಕ್ಷ 95 ಸ್ಥಾನ ಗಳಿಸಿ, ಬಿಜೆಪಿಯ 18 ಶಾಸಕರ ಬೆಂಬಲದೊಂದಿಗೆ ಜನತಾಪಕ್ಷ ನೇತೃತ್ವದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ್ದರು. 1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾಪಕ್ಷಕ್ಕೆ 28 ಸ್ಥಾನಗಳ ಪೈಕಿ ಕೇವಲ 4 ಸ್ಥಾನ ಬಂದಿದ್ದಕ್ಕೆ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆಗೆ ಹೋದರು. 1985ರಲ್ಲಿ ಜನತಾಪಕ್ಷ 139 ಸ್ಥಾನ ಗಳಿಸಿ ಮತ್ತೆ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿತಾದರೂ ನಂತರ ಬಾಟ್ಲಿಂಗ್‌ ಹಗರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದರು.

1988ರಲ್ಲಿ ಎಸ್‌.ಆರ್‌.ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆ ಸರ್ಕಾರ ಪತನಗೊಳಿಸುವ ಯತ್ನ ನಡೆದು ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ನಂತರ ಸುಪ್ರೀಂಕೋರ್ಟ್‌ವರೆಗೂ ಹೋಗಿ ನಂತರ ವಿಧಾನಸಭೆಯಲ್ಲೇ ಸರ್ಕಾರದ ಬಹುಮತ ಸಾಬೀತಾಗಬೇಕು ಎಂದು ತೀರ್ಪು ಬಂತು. ಅಂದಿನಿಂದ ಯಾವುದೇ ರಾಜ್ಯದಲ್ಲಿ ಇಂತಹ ಸಮಸ್ಯೆಯಾದರೂ ಎಸ್‌.ಆರ್‌. ಬೊಮ್ಮಾಯಿ ಪ್ರಕರಣ ಎಂದೇ ಕರೆಯಲಾಗುತ್ತದೆ. ಆಗ ಎಸ್‌.ಆರ್‌.ಬೊಮ್ಮಾಯಿ ಸರ್ಕಾರ ಪತನವಾಗಲು ಎಚ್‌.ಡಿ.ದೇವೇಗೌಡರು ಕಾರಣ ಎಂಬ ಆರೋಪವೂ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next