Advertisement
ಮಾನವ ಹೇಗೆ ಊಸರವಳ್ಳಿಯ ಹಾಗೇ ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾನೋ ಹಾಗೇನೇ ಅವನ ಜೀವನವು ದೇವರ ಇಚ್ಛೆಯಂತೆ ದಿನಕ್ಕೊಂದು ಕಡೆಗೆ ವಾಲುತ್ತಿರುತ್ತದೆ. ಆದರೆ ನಮ್ಮಲ್ಲಿರುವ ನಂಬಿಕೆ, ಆತ್ಮವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಯಾಕೆಂದರೆ ನಮ್ಮ ಪ್ರಯತ್ನಗಳೇ ಬದುಕನ್ನು ಬದ ಲಾಯಿಸುವ ಶಕ್ತಿಯುಳ್ಳದ್ದು. ಇದು ನಮ್ಮಲ್ಲಿ ಇರುತ್ತದೆ. ಬದುಕಿನ ಸೂಕ್ಷ್ಮ ವಿಷಯಗಳನ್ನು ಗಮನಿಸಿದಾಗಲೇ ನಮ್ಮವರು ಯಾರು?, ಹೊರಗಿನವರು ಯಾರು? ಎಂದು ತಿಳಿಯುತ್ತದೆ.
Related Articles
Advertisement
ಬಂಡೆಕಲ್ಲು ಕೂಡಾ ಶಿಲ್ಪಿಯ ಉಳಿಯ ಏಟಿಗೆ ತನ್ನ ಮೂಲ ಸ್ವರೂಪವನ್ನು ತೊರೆದು ಸುಂದರ ಮೂರ್ತಿಯಾಗುತ್ತದೆ. ಜೀವ ಇಲ್ಲದಿರುವ ಕಲ್ಲೇ ಅಷ್ಟು ಸುಂದರವಾದ ರೂಪ ಪಡೆಯುವಾಗ ಜೀವ ಇರುವ ನಾವು ಸುಂದರ ಬದುಕನ್ನು ಮತ್ತೆ ರೂಪಿಸಲು ಶ್ರಮ ಪಡುವಲ್ಲಿ ತಪ್ಪಿಲ್ಲ. ನಂಬಿಕೆ, ಆತ್ಮವಿಶ್ವಾಸವೇ ಭರವಸೆಯ ಮೂಲ. ಇವೆರಡನ್ನೂ ನಾವು ಕಳೆದುಕೊಂಡದ್ದೇ ಆದಲ್ಲಿ ಭರವಸೆಯ ಆಶಾಕಿರಣ ಮೂಡುವುದಾದರೂ ಹೇಗೆ? ನಾವು ನಮ್ಮ ಮನಸ್ಸಿನಲ್ಲಿ ಯಾವುದೇ ತೆರನಾದ ಕೀಳರಿಮೆ ಬೆಳೆಸಿಕೊಂಡು ಕೈಕಟ್ಟಿ ಕುಳಿತಲ್ಲಿ ನಾವು ಬದುಕಿ ಪ್ರಯೋಜನವಾದರೂ ಏನು? ಒಂದಿಷ್ಟು ಭರವಸೆ, ಹೊಂಗನಸುಗಳೊಂದಿಗೆ ಗುರಿ ಸಾಧನೆಯತ್ತ ಪ್ರಯತ್ನದ ಮೂಲಕ ಶ್ರಮಿಸಿದ್ದೇ ಆದಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತದೆ.
ನನ್ನವರು ಅಂತ ನನಗೆ ಯಾರೂ ಇಲ್ಲ ಅನ್ನೋ ಭಾವನೆ ಮನಸ್ಸಿನಲ್ಲಿ ಬಂದಾಗ ನನಗೆ ನಾನೇ ಎಲ್ಲ ಅನ್ನೋ ಆತ್ಮವಿಶ್ವಾಸವನ್ನು ಹೊಂದಿರಬೇಕೇ ಹೊರತು ನನಗಾರೂ ಇಲ್ಲ ಅಂತ ಚಿಂತೆ ಪಡಬಾರದು… ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ. ಮನಸ್ಸು ಅಂಜುತ್ತದೆ ಅಷ್ಟೇ. ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠ ಕಲಿಯಬಹುದು.
- ಯಶೋಧಾ ಲತೀಶ್, ಸುಳ್ಯ