ಗದಗ: ಸೊಸೆ ಮಾಡಿದ ಮೋಸಕ್ಕೆ ಬದುಕು ಬೀದಿಗೆ ಬಂದಿದ್ದು, ನನಗಾಗಿರುವ ಅನ್ಯಾಯಕ್ಕೆ ಸಮಾಜದ ಯಾವುದೇ ವ್ಯಕ್ತಿ, ಅಧಿಕಾರಿಗಳಿಂದ ನ್ಯಾಯ ಸಿಕ್ಕಿಲ್ಲ. ಆದಕಾರಣ, ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಆದಿತ್ಯ ನಗರದ ನಿವಾಸಿ ಅನುಸೂಯ ಬಸವಂತಪ್ಪ ಕರಕಿಕಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಮಗನಿಗೆ ಪಾರ್ವತೆವ್ವ ಹುನಗುಂದ ಎಂಬ ಹುಡುಗಿ ನೋಡಿ ವಿವಾಹ ಮಾಡಲಾಗಿತ್ತು. ಮದುವೆಯಾದ ಮೂರು ತಿಂಗಳ ಕಾಲ ಇಬ್ಬರೂ ಚೆನ್ನಾಗಿಯೇ ಸಂಸಾರ ನಡೆಸಿಕೊಂಡಿದ್ದರು. ಸೊಸೆ ಪಾರ್ವತಿ ಸಾರಿಗೆ ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಮನೆಕಟ್ಟಿಸಲು ಮನೆಯ ಕಾಗದಪತ್ರಗಳನ್ನು ಕೊಡುವಂತೆ ನನ್ನಲ್ಲಿ ಕೇಳಿಕೊಂಡಿದ್ದಳು. ನಾನು ಕೊಡಲು ಒಪ್ಪದಿದ್ದಾಗ ನನಗೆ ಗೊತ್ತಾಗದಂತೆ ಮನೆಯ ಕಾಗದಪತ್ರಗಳನ್ನು ತೆಗೆದುಕೊಂಡು ಹೋಗಿ ಹುಬ್ಬಳ್ಳಿಯಲ್ಲಿರುವ ಖಾಸಗಿ ಬ್ಯಾಂಕ್‌ನಿಂದ 11 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾಳೆ ಎಂದು ದೂರಿದರು.
ಪಾರ್ವತಿ ಉದ್ಯೋಗದಲ್ಲಿದ್ದು ಆಕೆಯ ವೇತನದ ಆಧಾರದ ಮೇಲೆ ಸಾಲ ಪಡೆದುಕೊಂಡಿದ್ದಾಳೆ. ಅದಕ್ಕೆ ಆಧಾರವಾಗಿ ನಮ್ಮ ಮನೆಯ ಕಾಗದ ಪತ್ರಗಳನ್ನು ಬ್ಯಾಂಕ್‌ಗೆ ನೀಡಿದ್ದಾಳೆ. ಸಾಲ ಪಡೆದ ಬಳಿಕ ತನ್ನ ವೇತನ ಜಮೆ ಆಗುವ ಬ್ಯಾಂಕ್ ಖಾತೆಯನ್ನು ಬದಲಾಯಿಸಿದ್ದಾಳೆ. ಅಲ್ಲದೇ ಸಾಲ ಪಡೆದ ದಿನದಿಂದ ಈವರೆಗೆ ಒಂದು ರೂಪಾಯಿ ಸಾಲ ಮರುಪಾವತಿಸಿಲ್ಲ. ಇಷ್ಟು ವರ್ಷಗಳ ಕಾಲ ಸಾಲ ಪಡೆದ ಪಾರ್ವತಿ ವಿರುದ್ಧ ಕ್ರಮವಹಿಸದ ಬ್ಯಾಂಕ್ ಅಧಿಕಾರಿಗಳು ಏಕಾಏಕಿ ಪೊಲೀಸರ ಜತೆಗೆ ಬಂದು ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಸಾಲ ತುಂಬಿದರೆ ಮಾತ್ರ ಮನೆ ವಾಪಸ್ ನೀಡುವುದಾಗಿ ಹೇಳಿದ್ದಾರೆ ಎಂದು ಅಳಲು ತೋಡಿಕೊಂಡರು.
ಬ್ಯಾಂಕ್ ಅಧಿಕಾರಿಗಳು ಬಂದಾಗಲೇ ನಮ್ಮ ಮನೆಯ ಕಾಗದಪತ್ರಗಳನ್ನು ಆಧಾರವಾಗಿಟ್ಟು ಬ್ಯಾಂಕ್‌ನಲ್ಲಿ ಸಾಲಪಡೆದಿರುವ ವಿಚಾರ ಗೊತ್ತಾಗಿದೆ. ನಮಗೆ ನ್ಯಾಯ ಕೊಡಿಸುವಂತೆ ಶಾಸಕರು, ಸಚಿವರು, ಸಂಸದರು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕೋರಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ನಮಗೆ ನ್ಯಾಯ ಸಿಗುವ ಭರವಸೆಯೇ ಹೊರಟು ಹೋಗಿದೆ. ಸ್ವಂತ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಸಾಕಷ್ಟು ನೊಂದು, ಬದುಕಿನಲ್ಲಿ ಭರವಸೆ ಕಳೆದುಕೊಂಡಿರುವುದರಿಂದ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಎಲ್ಲ ದಾಖಲೆ ಪತ್ರಗಳನ್ನು ಒದಗಿಸಿದರೆ, ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ನೊಂದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರು ದೂರುದಾರ ಮಹಿಳೆ ಅನುಸೂಯ ಬಸವಂತಪ್ಪ ಕರಕಿಕಟ್ಟಿ ಅವರಿಗೆ ತಿಳಿಸಿದರು.
ಇದನ್ನೂ ಓದಿ: Mundagod: ಕುರಿ ಸಾಕಾಣಿಕೆ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್… 78 ಕುರಿಗಳು ಸಜೀವ ದಹನ