Advertisement
ಅದಕ್ಕೂ ಮಿಗಿಲಾಗಿ ಹೌದು, ಸೌಂದರ್ಯಕ್ಕೆ ಇನ್ನೊಂದು ಹೆಸರೇ ಆಕಾಶವೆಂಬ ಭಾವ ಮೂಡುತ್ತಿರುವುದು ಅಶಯ ವೆನ್ನೋಣ. ಗ್ರಹಣ ಭೂಮಿ, ಸೂರ್ಯ, ಚಂದ್ರರ ನಡುವಿನ ನಮಗೆ ತೋರುವ ನೆರಳು-ಬೆಳಕಿನ ಆಟ. ಕೇವಲ ತೋರಿಕೆ ಎನ್ನುವುದನ್ನು ಮನಗಾಣದೆ ಸೂರ್ಯ ಚಂದ್ರನನ್ನು ಅಥವಾ ಚಂದ್ರ ಸೂರ್ಯನನ್ನು ನುಂಗುತ್ತದೆ ಎಂಬ ಪರಿಭಾವನೆ ಅರ್ಥಹೀನ. ಸೂರ್ಯನನ್ನು ದೀರ್ಘ ವೃತ್ತಾಕಾರದ ಪಥಗಳಲ್ಲಿ ಪರಿವರಿಸುವ ಗ್ರಹಗಳು ಅಥವಾ ಇತರ ಆಕಾಶ ಕಾಯಗಳು ಧರೆಯನ್ನು ಸಮೀಪಿಸುವುದು ಸಹಜ. ಖಗೋಳೀಯ ವಿದ್ಯಮಾನಗಳಿಗೂ ನಮಗೆ ಒದಗಬಹುದಾದ ಅನಿಷ್ಟ, ಕೇಡುಗಳಿಗೂ ಏನೇನೂ ಸಂಬಂಧವಿಲ್ಲ ಎಂಬ ತಥ್ಯ ಜನವರ್ಗಕ್ಕೆ ಅರಿವಾಗಿರುವುದು ಧನಾತ್ಮಕ ಬೇಳವಣಿಗೆ.
Related Articles
Advertisement
ನಮ್ಮ ನೆಲದ ಭಾಷೆಯಲ್ಲೇ ನಮ್ಮ ಶಬ್ದಾವಳಿಯಲ್ಲೇ ವಿಜ್ಞಾನವನ್ನು ಸಂವಹಿಸುವುದು ಶ್ರೇಷ್ಠತಮ ಮಾರ್ಗ. ನಮ್ಮ ಗಾದೆ, ಒನಪು, ಒಗಟುಗಳನ್ನು ಸಂದಭೋಚಿತವಾಗಿ ಉಪಯೋಗಿಸಿಕೊಂಡು ವಿಜ್ಞಾನವನ್ನು ಜನರಿಗೆ ಆಪ್ತವಾಗಿಸುವ ಕಲೆ ಅನುಪಮ. ಕನ್ನಡದಲ್ಲಿ ಸಂವಾದಿ ಪದಗಳು ಅಲಭ್ಯ ವೆನ್ನುವುದು ಹುಸಿ. ಕೆಲ ಸಂದರ್ಭಗಳಲ್ಲಿ ಇಂಗ್ಲಿಷಿನ ಪದಗಳನ್ನು ಯುಕ್ತವಾಗಿ ಹಾಗೇ ಉಳಿಸಿಕೊಂಡರೂ ಆಯಿತು. ಬೆಳ್ಳಾವೆ ವೆಂಕಟನಾರಾಯಣಪ್ಪ, ಆರ್. ಎಲ್. ನರಸಿಂಹಯ್ಯ, ಜೆ. ರ್. ಲಕ್ಷ್ಮಣ ರಾವ್, ಜಿ.ಟಿ. ನಾರಾಯಣ ರಾವ್ ಮುಂತಾದ ಅಗ್ರಮಾನ್ಯ ವಿಜ್ಞಾನ ಸಾಹಿತಿಗಳು ಈ ವಿಧಾನದಲ್ಲೇ ಯಶಸ್ಸುಗಳಿಸಿದ್ದು.
ಅದಕ್ಕೂ ಹಿಂದೆ ವಿಜ್ಞಾನದಲ್ಲಿ ಕನ್ನಡ ಪುಸ್ತಕಗಳು ಬರುತ್ತಿರಲಿಲ್ಲ ಎಂದಲ್ಲ. ಇಂಗ್ಲಿಷೊಂದೇ ವಿಜ್ಞಾನ ಹೊರುವ ಅಂಬಾರಿಯೆಂಬ ಭ್ರಮೆ ಅವನ್ನು ಪರಾಮರ್ಶಿಸಿ ಆಗಬೇ ಕಾದ್ದೇನು ಎನ್ನುವ ಅನಾಸಕ್ತಿ ಬಿತ್ತಿತ್ತು. ಜರ್ಮನಿ, ಫ್ರಾನ್ಸ್, ಚೀನಾ, ಕೊರಿಯ, ಥಾಯ್ಲೆಂಡ್ ಇತ್ಯಾದಿ ದೇಶಗಳಲ್ಲಿ ಇಂಗ್ಲಿಷಿ ನಿಂದ ಆಯಾ ಮಣ್ಣಿನ ಭಾಷೆಗೆ ಕ್ಷಿಪ್ರವಾಗಿ ವಿಜ್ಞಾನ ಪ್ರಗತಿಯ ವಿವರಗಳು ಸಂದಿರುತ್ತವೆ. ಭಾರತದಲ್ಲಿ ವಿವಿಧ ಭಾಷೆಗಳಿರುವ ಕಾರಣ ಈ ಪ್ರಕ್ರಿಯೆ ತಡವಾದರೂ ಸರಿಯೆ ಆಗಬೇಕು. ನಮ್ಮ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾಷಾಂತರ, ನಿರೂಪಣೆಗೆಂದೇ ಪ್ರತ್ಯೇಕ ಘಟಕಗಳು ಏರ್ಪಟ್ಟಲ್ಲಿ ಕಾರ್ಯಗತಿ ಸುಗಮ. ಒಬ್ಬ ವಿಜ್ಞಾನಿ ಎಷ್ಟೇ ಪ್ರತಿಭಾವಂತನಿರಲಿ ಆತ ತನ್ನ ಸಂಶೋಧನೆ ° ಜನಸಾಮಾನ್ಯರಿಗೆ ನಾಟುವಂತೆ ವಿವರಿಸಿದಾಗ ಮಾತ್ರ ಜನಪ್ರಿಯನೆನ್ನಿಸಿಯಾನು. ಪ್ರಖ್ಯಾತ ಖಗೋಳ ವಿಜ್ಞಾನಿ ಹಾಗೂ ವಿಜ್ಞಾನ ಬರಹಗಾರ ದಿವಂಗತ ಕಾರ್ಲ್ ಸಗಾನ್ “ನಮ್ಮ ಪ್ರಶ್ನೆಗಳ ಧೈರ್ಯ ಹಾಗೂ ನಮ್ಮ ಉತ್ತರಗಳ ಆಳ ಜಗತ್ತನ್ನು ವಿಶಿಷ್ಟವಾಗಿಸಿದೆ’ ಎಂದು ನುಡಿದಿದ್ದಾರೆ. ತಮ್ಮ ಶಾರೀರಿಕ ನ್ಯೂನತೆ ಮೀರಿ ಅಸಾಮಾನ್ಯ ಸಂಶೋಧನೆ ನಡೆಸಿದ್ದಲ್ಲದೆ ಆಡುಭಾಷೆಯಲ್ಲೇ ವಿಜ್ಞಾನ ಪ್ರಸರಿಸಿದ ಈಚೆಗೆ ಕಾಲವಾದ ಮಹಾನ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಎಂಬ ವಿಶ್ವಮತಿ ಒಂದು ಮಾದರಿ. ಮಾತೃಭಾಷೆಗೆ ಹೊರತಾಗಿ ಯಾವುದೇ ಭಾಷೆಯಲ್ಲಿ ಜ್ಞಾನ-ವಿಜ್ಞಾನ ಕಲಿಕೆ ಹಿತಕರವಾಗಿರದು.
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಭವ್ಯ ಇತಿಹಾಸವಿದೆ. ನಮ್ಮ ನಾಡಿನ ವಿಶ್ವವಿದ್ಯಾನಿಲಯಗಳು ತಂತಮ್ಮ ಪ್ರಸಾರಾಂಗಗಳಿಂದ ವಿಜ್ಞಾನ ಗ್ರಂಥಗಳನ್ನು, ನಿಯತ ಕಾಲಿಕಗಳನ್ನು ಹೊರತರಲು ಮುಂದಾಗಿದ್ದು ಪ್ರಮುಖ ಮಜಲು. ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಂಘ ಸಂಸ್ಥೆಗಳಲ್ಲಿ ವಿವಿಧ ವಿಜ್ಞಾನದ ವಿಷಯಗಳ ಮೇಲೆ ತಜ್ಞರ ಭಾಷಣ, ನಂತರ ಭಾಷಣದ ಸಾರವನ್ನು ಕಿರು ಹೊತ್ತಿಗೆಗಳ ರೂಪದಲ್ಲಿ ಪ್ರಕಟಿಸಿ ಬಹು ಅಗ್ಗದ ದರದಲ್ಲಿ ಮಾರಾಟ- ಈ ಯೋಜನೆ ಆಬಾಲವೃದ್ಧರನ್ನೆಲ್ಲ ವಿಜ್ಞಾನ ಸಾಕ್ಷರರನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಂದು ವಿಜ್ಞಾನವನ್ನು ಸಮರ್ಥವಾಗಿ ಕನ್ನಡದಲ್ಲಿ ಅಭಿವ್ಯಕ್ತಿಸುವ ಬರಹಗಾರರ ಪಡೆಯೇ ಇದೆ. ಕರ್ನಾಟಕ ವಿಜ್ಞಾನ ಪರಿಷತ್ತು ಕಮ್ಮಟಗಳನ್ನು ಏರ್ಪಡಿಸುವ ಮೂಲಕ ಯುವ ವಿಜ್ಞಾನ ಲೇಖಕರನ್ನು ಉತ್ತೇಜಿಸುತ್ತಿದೆ. ಬಾಲವಿಜ್ಞಾನ ಮಾಸಿಕ ಹೊರತರುತ್ತಿದೆ. ಹಲವು ಗ್ರಂಥಗಳನ್ನು ಪ್ರಕಟಿಸಿದೆ. ವಿಜ್ಞಾನಕ್ಕೆಂದೇ ಒಂದು ನಿಘಂಟನ್ನು ಕೊಟ್ಟಿದೆ. ನವ ಕರ್ನಾಟಕ ಪ್ರಕಾಶನವಂತೂ ವ್ಯಾಪಕವಾಗಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ಗಂಥಗಳ ಪ್ರಕಟಣೆಗೆ ಒತ್ತು ನೀಡಿದೆ. “ವಿಜ್ಞಾನ ಪದಕೋಶ’ ಹೊರ ತಂದಿರುವುದು ಸಂಸ್ಥೆಯ ಅನನ್ಯ ಸಾಧನೆ.
ಇದು ವಿಶ್ವಕೋಶದಂತಿದ್ದು ಲೇಖಕರಿಗೆ ಬರೆಯಲು ಪ್ರೇರಣೆ ನೀಡುತ್ತದೆ. ಇಷ್ಟೆಲ್ಲ ಕೈಂಕರ್ಯ ಸಾರ್ಥಕವಾಗುವುದು ಕನ್ನಡ ಓದುಗವರ್ಗ ವೃದ್ಧಿಸಿದಾಗ. ಯಾವಾಗ ವಿಜ್ಞಾನ ಸಂಗತಿಗಳು ನಮ್ಮ ನೆಲಭಾಷೆಯಲ್ಲಿ ನಿಲುಕುವುದೋ ಆಗ ತಾನೇ ತಾನಾಗಿ ಕಾರ್ಯ-ಕಾರಣ ನಂಟು ಗ್ರಾಹ್ಯವಾದೀತು. ವಿವೇಚನೆ ಮೊನಚಾಗಿ ಮೂಢ ನಂಬಿಕೆಗಳು, ಅಂಧಾಚರಣೆಗಳು ಶಮನಗೊಂಡಾವು. ಕನ್ನಡದಲ್ಲೇ ಆಲೋಚಿಸಿ ಕನ್ನಡದಲ್ಲೇ ಬರೆಯವ ಜಾಯಮಾನ ನಮ್ಮದಾದೀತು. ಆಭಾಸವಾಗುವುದು ಚಿಂತಿಸುವ ಭಾಷೆ, ದಾಖಲಿಸುವ ಭಾಷೆ ಬೇರೆ ಬೇರೆಯಾದಾಗ. ಒಂದು ಉಕ್ತಿ ಮನನೀಯವಾಗಿದೆ: “ನೀವು ನಿಮ್ಮ ಅಜ್ಜಿಗೆ ನಾಜೂಕಾಗಿ ಮನಮುಟ್ಟುವಂತೆ ವಿಜ್ಞಾನ ಅಂಶವೊಂದನ್ನು ವಿವರಿಸುವವರೆಗೆ ಅದು ನಿಮಗೇ ಅರ್ಥವಾಗಿಲ್ಲವೆಂದೇ ಹೇಳಬೇಕಾಗುತ್ತದೆ’.
ಬಿಂಡಿಗನವಿಲೆ ಭಗವಾನ್