Advertisement

Mangaluru: ಹುಲಿ ವೇಷ ಬಣ್ಣಗಾರಿಕೆ ಹಿಂದಿದೆ ಶ್ರದ್ಧೆ, ಭಕ್ತಿ, ವಿಜ್ಞಾನ!

12:34 PM Oct 04, 2024 | Team Udayavani |

ಮಹಾನಗರ: ಪಟ್ಟೆ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ ತರಹೇವಾರಿ ಪಿಲಿಗಳ ಲೋಕವನ್ನು ವರ್ಣರಂಜಿತಗೊಳಿಸುವ ನಿಜವಾದ ಶಕ್ತಿ ಬಣ್ಣಗಾರಿಕೆ! ಬಣ್ಣವಿದ್ದರೆ ಮಾತ್ರ ಪಿಲಿ ವೇಷಕ್ಕೆ ರೂಪ ಹಾಗೂ ಗೌರವ.

Advertisement

ಬಣ್ಣ ಹಾಕುವುದು ಒಂದು ಕುಶಲ ಕಲೆಗಾರಿಕೆ
50 ವರ್ಷದಿಂದ ಮಂಗಳೂರಿನಲ್ಲಿ ಹುಲಿ ವೇಷಕ್ಕೆ ಬಣ್ಣ ಹಾಕುತ್ತಿರುವ ಉಮೇಶ್‌ ಬೋಳಾರ್‌ ಅವರ ಪ್ರಕಾರ ‘ಹಿಂದೆ ಭತ್ತದ ಕೃಷಿ ಆದ ಬಳಿಕ ಪಿಲಿಪಂಜಿ ಗೊಬ್ಬು ಎಂದು ಮಾಡುತ್ತಿದ್ದರು. ಎರಡು ಮೂರು ಜನ ಮಾತ್ರ ಆಗ ಇದ್ದರು. ಆಗ ಅರಸಿನ, ರಕ್ತ ಚಂದನ ಅರೆದು ದೀಪದ ಮಸಿಗೆ ಎಣ್ಣೆ ಮಿಶ್ರಣ ಮಾಡಿ ಕೈಯಲ್ಲೇ ಗೆರೆ ಎಳೆಯುವ ಕ್ರಮ ಇತ್ತು. ನಂತರ ಅಗಸೆಕಾಯಿಯ ಬೀಜವನ್ನು ಕಲ್ಲಿನಲ್ಲಿ ಅರೆದು ಬಣ್ಣ ಹಚ್ಚಲಾಗುತ್ತಿತ್ತು. ಆವಾಗ ಬಣ್ಣ ಹಚ್ಚಲು ಕೆಲವೊಮ್ಮೆ ಒಂದು ದಿನ ಕೂಡ ಆಗುತ್ತಿತ್ತು. ಈಗ ಹುಲಿ ವೇಷಧಾರಿಗಳು ಅಧಿಕ ಹಾಗೂ ಸಮಯದ ಒತ್ತಡದ ಕಾರಣದಿಂದ ಬಣ್ಣವನ್ನು ಸ್ಪ್ರೇ ಮಾಡಲಾಗುತ್ತದೆ’ ಎನ್ನುತ್ತಾರೆ.

ದೇಹ ತಂಪಾಗಿರಬೇಕು
ಹುಲಿ ವೇಷ ಹಾಕುವವರು ದೇಹವನ್ನು ಹೆಚ್ಚು ತಂಪಾಗಿ ಇಟ್ಟಿರಬೇಕು. ದೇಹ ತಂಪಾಗದಿದ್ದರೆ ಬಣ್ಣ ಸರಿಯಾಗಿ ಅಂಟುವುದಿಲ್ಲ. ಹಲವು ದಿನ ಬಣ್ಣದಲ್ಲೇ ಇರುವುದರಿಂದ ದೇಹ ತಂಪಾಗದಿದ್ದರೆ ಚರ್ಮಕ್ಕೂ ಸಮಸ್ಯೆ ಎನ್ನುತ್ತಾರೆ ಉಮೇಶ್‌ ಬೋಳಾರ್‌.

ದೇಹಕ್ಕೆ ಒಪ್ಪುವ ಹುಲಿವೇಷ
ಕಳೆದ 35 ವರ್ಷಗಳಿಂದ ಹುಲಿವೇಷಕ್ಕೆ ಬಣ್ಣ ಹಾಕುತ್ತಿರುವ ಸುನಿಲ್‌ ಕೋಡಿಕಲ್‌ ಪ್ರಕಾರ, ಹುಲಿ ವೇಷಕ್ಕೆ ಬಣ್ಣ ಹಾಕುವುದು ಒಂದು ಸರಸ್ವತಿ ವಿದ್ಯೆ. ಶ್ರದ್ದೆಯಿಂದ ನಡೆಸುವ ಕೆಲಸ ಇದು. ಬಣ್ಣ ಹಾಕುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಹುಲಿ ವೇಷಧಾರಿಯ ಚರ್ಮಕ್ಕೆ ಸಮಸ್ಯೆ ಆಗಬಹುದು. ಮೊದಲಿಗೆ ಮೊದಲು ಹಳದಿ ಮತ್ತು ಬಿಳಿ ಬಣ್ಣ ಹಾಕಲಾಗುತ್ತದೆ. ಬಳಿಕ ಇತರ ಬಣ್ಣ. ದೇಹ ನೋಡಿಕೊಂಡು ಆತನಿಗೆ ಒಪ್ಪುವಂತಹ ಹುಲಿ ವೇಷ ಹಾಕಲಾಗುತ್ತದೆ. ದೇವರ ದಯೆ ಇದ್ದರೆ ಎಲ್ಲವೂ ಸಾಂಗವಾಗಿ ನಡೆಯುತ್ತದೆ. ಅದಕ್ಕೆ ಶುದ್ದಾಚಾರ ಬೇಕು.

Advertisement

ವೇಷಧಾರಿಗೆ ಸಾಲು ಸಾಲು ಸವಾಲು

  • ಬಣ್ಣ ಹಾಕುವಾಗ ವೇಷಧಾರಿ ಮೂರು ಗಂಟೆ ಕಾಲ ಎರಡು ಕೈಯನ್ನು ಅಗಲಿಸಿ ಉದ್ದದ ಕೋಲಿನ ಮೇಲೆ ಇಟ್ಟು ನಿಂತೇ ಇರಬೇಕು. ಯಾಕೆಂದರೆ, ಹಾಕಿದ ಬಣ್ಣ ಹಾಗೇ ಒಣಗಬೇಕು.
  • ಕೆಲವರ ದೇಹದಲ್ಲಿ ಪೈಂಟ್‌ ಕೆಲವೇ ಗಂಟೆಯಲ್ಲಿ ಒಣಗಿದರೆ, ಇನ್ನೂ ಕೆಲವರ ದೇಹದಲ್ಲಿ ಸುಮಾರು ತಾಸು ಕಾಯಬೇಕು.
  • ದಿನವಿಡೀ ಕುಣಿಯುವ ವೇಷಧಾರಿ ಸಂಜೆ ಮನೆಗೆ ಹೋಗುವುದಿಲ್ಲ. ಬದಲಾಗಿ, ರಂಗ್‌ಗೆ ನಿಂತ ಜಾಗದಲ್ಲಿ ಬಣ್ಣ ತೆಗೆಯದೆಯೇ ಮಲಗುತ್ತಾನೆ.
  • ವೇಷಧಾರಿ ಬಾಳೆ ಎಲೆ, ತೆಂಗಿನ ಮಡಲ್‌ ಅಥವಾ ಹಳೆಯ ಚಾಪೆಯ ಮೇಲೆ ಮಲಗುವುದು ಕ್ರಮ. ಮಲಗುವಾದ ದೇಹದ ಪೈಂಟ್‌ ಹೋಗಬಾರದು ಎಂದಿದೆ. ಕೆಲವು ಕಡೆ ಹೋದರೆ ಟಚಪ್‌ ಮಾಡಲಾಗುತ್ತದೆ.
  • ಹುಲಿ ವೇಷದ ಅಬ್ಬರ ನೋಡಲು ಬಹಳಷ್ಟು ಚಂದ. ಆದರೆ ಅದರ ಹಿಂದಿನ ಒದ್ದಾಟದ ಬಗ್ಗೆ ಅವರಿಗೆ ಮಾತ್ರ ಗೊತ್ತು.
  • ಬೆಳಗ್ಗಿನಿಂದ ಸಂಜೆಯವರೆಗೆ ಕುಣಿದು ಆಯಾಸಗೊಂಡವರಿಗೆ ರಾತ್ರಿ, ಛಳಿ, ಜ್ವರದ ಸಮಸ್ಯೆ ಇರುತ್ತದೆ. ಕೈಕಾಲು ಬಗ್ಗಿಸಲಾಗದಷ್ಟು ನೋವು.
  • ಕೆಲವರು ನಿದ್ದೆಯಿಂದ ಎದ್ದು ವಿಚಿತ್ರವಾಗಿ ನಡುಗುವುದೂ ಉಂಟು; ಹೀಗಾಗಿ ವೇಷಧಾರಿ ಕೈಗೆ ಸಣ್ಣ ನವಿಲುಗರಿ-ಲಿಂಬೆಹುಲಿ ಕಟ್ಟಲಾಗುತ್ತದೆ.

‘ಅಪ್ಪೆ ಪಿಲಿತ ಮಂಡೆ’ ಅತ್ಯಂತ ಪವಿತ್ರ
‘ಅಪ್ಪೆ ಪಿಲಿತ ಮಂಡೆ’ ಪವಿತ್ರ ಎಂದು ಹುಲಿ ವೇಷಧಾರಿಗಳು ನಂಬಿಕೊಂಡು ಬಂದಿದ್ದಾರೆ. ಅದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ಅದಕ್ಕೆ ಸ್ವಲ್ಪ ಹಾನಿಯಾದರೆ ಅದನ್ನು ಬಳಸುವುದಿಲ್ಲ. ಮತ್ತು ಹಾನಿಯಾದ ಅಪ್ಪೆ ಪಿಲಿಯ ಮಂಡೆಯನ್ನು ಅತ್ಯಂತ ಪವಿತ್ರವಾಗಿ ತಾಸೆಯ ಶಬ್ದದೊಂದಿಗೆ ತೆಗೆದುಕೊಂಡು ಹೋಗಿ ಮಣ್ಣಿನಲ್ಲಿ ಹೂಳಲಾಗುತ್ತದೆ. ಶವಸಂಸ್ಕಾರ ಕ್ರಮದಂತೆಯೇ ಇದನ್ನು ಕೂಡ ಸಂಪ್ರದಾಯ ಪ್ರಕಾರವಾಗಿ ಮಾಡಲಾಗುತ್ತದೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next