ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ರಾಜ್ಯಗಳಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಗೆದ್ದಿದೆ. ಗುಜರಾತಿನಲ್ಲಿ ಸತತ ಆರನೇ ಸಲ ಅಧಿಕಾರಕ್ಕೇರಿದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕೈಯಿಂದ ಅಧಿಕಾರ ಕಸಿದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯೆಂದು ಪರಿಗಣಿಸಿ ತೀವ್ರ ಸೆಣಸಾಟ ನಡೆಸಿದ್ದವು.
ಅಂತಿಮವಾಗಿ ಅಮಿತ್ ಶಾ ಮತ್ತು ಮೋದಿ ಜೋಡಿಯ ತಂತ್ರಗಾರಿಕೆಯ ಎದುರು ಕಾಂಗ್ರೆಸ್ ತಲೆಬಾಗಿರುವಂತೆ ಕಂಡರೂ ಫಲಿತಾಂಶದ ಒಳಸುಳಿಗಳು ಬೇರೆಯೇ ಇವೆ. ಅದರಲ್ಲೂ ಗುಜರಾತ್ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅನೇಕ ಪಾಠಗಳನ್ನು ಕಲಿಸಿದೆ. ಇನ್ನೊಂದು ಅವಧಿಗೆ ಅಧಿಕಾರ ದಕ್ಕಿತು ಎಂದು ಬಿಜೆಪಿ ಬೀಗುತ್ತಿದ್ದರೂ ಅದನ್ನು ಪರಿಪೂರ್ಣ ಗೆಲುವು ಎಂದು ಒಪ್ಪಿಕೊಳ್ಳಲು ಕೆಲವು ಬಿಜೆಪಿ ನಾಯಕರೇ ಹಿಂದೇಟು ಹಾಕುತ್ತಿದ್ದಾರೆ. ಇದೇ ಮೊದಲ ಸಲ ಬಿಜೆಪಿಯ ಸ್ಥಾನಗಳ ಸಂಖ್ಯೆ ಎರಡಂಕಿಗೆ ಇಳಿದಿದೆ. ಮತಗಳಿಕೆಯ ಪ್ರಮಾಣದಲ್ಲಿ ತುಸು ಹೆಚ್ಚಳವಾಗಿದ್ದರೂ ಚುನಾವಣೆಯಲ್ಲಿ ಅಂತಿಮವಾಗಿ ಎಷ್ಟು ಸ್ಥಾನ ದಕ್ಕಿತು ಎನ್ನುವುದೇ ಮುಖ್ಯವಾಗುತ್ತದೆ. 2012ರಲ್ಲಿ 115 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಸಲ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೇ ವೇಳೆ ಕಾಂಗ್ರೆಸ್ ಸ್ಥಾನ ಮತ್ತು ಮತಗಳಿಕೆ ಎರಡರಲ್ಲೂ ಪ್ರಗತಿ ಸಾಧಿಸಿ ತನ್ನಲ್ಲಿನ್ನೂ ಹೋರಾಟದ ಕಸುವು ಉಳಿದುಕೊಂಡಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಲವೇ ಸ್ಥಾನಗಳ ಅಂತರ ಇದ್ದು, ಈ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯೇ ಆಗಿದ್ದರೆ ಬಿಜೆಪಿ ಫಲಿತಾಂಶವನ್ನು ಎಚ್ಚರಿಕೆ ಕರೆಗಂಟೆ ಎಂಬುದಾಗಿ ಪರಿಗಣಿಸುವುದು ಅನಿವಾರ್ಯ.
ಬಿಜೆಪಿಯ ನಿರ್ವಹಣೆ ಕುಸಿಯಲು ಹಲವು ಕಾರಣಗಳನ್ನು ಹೇಳಬಹುದು. 22 ವರ್ಷಗಳ ನಿರಂತರ ಆಳ್ವಿಕೆ ನಡೆಸಿದ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಎದುರಾಗುವುದು ಸಹಜ ಬೆಳವಣಿಗೆ. ಅಂತೆಯೇ ಈ ಸಲ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಎಂಬ ಅಂಶಗಳು ಪ್ರಮುಖವಾಗಿದ್ದವು. ಈ ಯುವ ನಾಯಕರನ್ನು ಬುಟ್ಟಿಗೆ ಹಾಕಿಕೊಂಡ ಕಾಂಗ್ರೆಸ್ ತಂತ್ರಗಾರಿಕೆ ಫಲ ನೀಡಿದಂತೆ ಕಾಣುತ್ತದೆ. ಸತತ ಸೋಲುಗಳು ಎದುರಾದರೂ ಕಂಗೆಡದೆ ಮುಂಚೂಣಿಯಲ್ಲಿ ನಿಂತು ಹೋರಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಆಕ್ರಮಣಕಾರಿ ಪ್ರಚಾರ ತಂತ್ರವೂ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಪೂರಕವಾಗಿ ವರ್ತಿಸಿದೆ. ಮೋದಿಯ ಬಹಳ ಪ್ರಸಿದ್ಧವಾಗಿರುವ ಗುಜರಾತ್ ಮಾದರಿ ಈ ಸಲ ಬಿಜೆಪಿಗೆ ಹೆಚ್ಚಿನ ಪ್ರಯೋಜನಕ್ಕೆ ಬಂದಿಲ್ಲ. ಗುಜರಾತ್ ಮಾದರಿ ಎನ್ನುವುದು ವಿಫಲ ಎಂದು ಸಾಧಿಸಿ ತೋರಿಸುವುದರಲ್ಲಿ ವಿಪಕ್ಷಗಳು ಯಶಸ್ವಿಯಾಗಿರುವುದು ಬಿಜೆಪಿ ಪಾಲಿಗೆ ಮೈನಸ್ ಆದ ಅಂಶ. ಮುಖ್ಯವಾಗಿ ಮೋದಿ ಪ್ರಧಾನಿಯಾದ ಬಳಿಕ ರಾಜ್ಯದ ಆಡಳಿತ ಸೂತ್ರ ದಿಕ್ಕುಗೆಟ್ಟದ್ದು ಎದ್ದು ಕಾಣುತ್ತಿರುವ ಅಂಶ. ವಿಜಯ್ ರೂಪಾನಿಯಿಂದ ಪ್ರಬಲ ನಾಯಕತ್ವ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಚುನಾವಣೆ ಸಂದರ್ಭದಲ್ಲೇ ಸಾಬೀತಾಗಿತ್ತು. ಹೀಗಾಗಿ ಮೋದಿ ಮತ್ತು ಅವರ ಸಂಪುಟದ ಬಹುತೇಕ ಎಲ್ಲ ಸಚಿವರು ಗುಜರಾತಿನಲ್ಲೇ ಠಿಕಾಣಿ ಹೂಡಬೇಕಾಯಿತು. ಮೋದಿ ಸುಮಾರು 40 ರ್ಯಾಲಿಗಳಲ್ಲಿ ಭಾಗವಹಿಸಿದ್ದರು ಎನ್ನುವುದೇ ಈ ಗೆಲುವಿಗಾಗಿ ಬಿಜೆಪಿ ಎಷ್ಟು ತಿಣುಕಾಡಿತ್ತು ಎನ್ನುದನ್ನು ತಿಳಿಸುತ್ತದೆ. ಅಂತಿಮವಾಗಿ ಮೋದಿಯ ವರ್ಚಸ್ಸಿನಿಂದ ಮಾತ್ರ ಗುಜರಾತಿನಲ್ಲಿ ಬಿಜೆಪಿಯ ಮಾನ ಉಳಿದಿದೆ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಒಂದು ವೇಳೆ ಬಿಜೆಪಿಗೆ ಈ ಸಲ ಸರಕಾರ ರಚಿಸಲು ಸಾಧ್ಯವಾಗದೆ ಹೋಗಿರುತ್ತಿದ್ದರೆ ಅದು ನೀಡುವ ಸಂದೇಶವೇ ಬೇರೆಯಾಗಿರುತ್ತಿತ್ತು. ಆದರೆ ಸತತ 22 ವರ್ಷಗಳ ಬಳಿಕವೂ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ ಎನ್ನುವುದು ಬಿಜೆಪಿ ಪಾಲಿನ ಹೆಗ್ಗಳಿಕೆ.
ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಹೀನಾಯವಾಗಿ ಸೋತಿದ್ದರೂ ಅಲ್ಲಿ ಕಳೆದುಕೊಂಡದ್ದನ್ನು ಸ್ವಲ್ಪಮಟ್ಟಗೆ ಗುಜರಾತಿನಲ್ಲಿ ಗಳಿಸಿಕೊಂಡಿದೆ. ಮುಖ್ಯವಾಗಿ ನಾಯಕತ್ವ ಪರೀಕ್ಷೆಯಲ್ಲಿ ರಾಹುಲ್ ಗಾಂಧಿ ತೇರ್ಗಡೆಯಾಗಿದ್ದಾರೆ. ಖಂಡಿತ ಇದು ಕಾಂಗ್ರೆಸ್ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂಬರುವ ಚುನಾವಣೆಗಳನ್ನು ರಾಹುಲ್ ಗಾಂಧಿಯ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್‌ಗೆ ಹೊಸ ಹುರಪು ತುಂಬಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಗೆ ಪ್ರಬಲ ಎದುರಾಳಿ ಎಂದು ರಾಹುಲ್ ಗಾಂಧಿಯನ್ನು ಬಿಂಬಿಸಲು ಬೇಕಾದ ಬಲವಾದ ಕಾರಣವೊಂದು ಕಾಂಗ್ರೆಸ್‌ಗೆ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ಸೋಲಿನಲ್ಲೂ ಗೆಲುವಿನ ನಗೆ ಬೀರುತ್ತಿದೆ. ಕಾಂಗ್ರೆಸ್ ಪುನರುಜ್ಜೀವನಕ್ಕೆ ಗುಜರಾತ್ ಚುನಾವಣೆಯೇ ನಾಂದಿ ಹಾಡಿದೆ ಎನ್ನಬಹುದು. ಏನೇ ಆಗಿದ್ದರೂ ಕಾಂಗ್ರೆಸ್ ಮುಕ್ತಗೊಳಿಸುವ ಬಿಜೆಪಿಯ ಹಂಬಲಕ್ಕೆ ಗುಜರಾತ್ ಚುನಾವಣೆಯೇ ತಣ್ಣೀರು ಎರಚಿದೆ. ಹಾಗೆಂದು ಜಾತಿಗಳ ಸಮೀಕರಣದ ಬಲವಿಲ್ಲದಿದ್ದರೆ ಕಾಂಗ್ರೆಸ್‌ಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ವಾಸ್ತವ. ಹೀಗಾಗಿ ಎರಡೂ ಪಕ್ಷಗಳು ಫಲಿತಾಂಶದ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.