Advertisement

ಕಷ್ಟಗಳಿಂದಲೇ ಬದುಕಿಗೆ ಅನುಭವದ ಪಾಠ

03:46 PM Jul 09, 2018 | |

ಎಷ್ಟೋ ಸಂಬಂಧಗಳು ನಾವು ಹುಟ್ಟುವಾಗಲೇ ನಮ್ಮೊಂದಿಗೆ ಬೆಸೆದಿದ್ದರೆ, ಮತ್ತೆ ಕೆಲವನ್ನು ನಾವು ಬೆಸೆಯುತ್ತಾ ಹೋಗುತ್ತೇವೆ. ಯಾವುದೂ ಶಾಶ್ವತವಲ್ಲ ಎಂಬುದು ನಮ್ಮ ಒಳಮನಸ್ಸಿಗೆ ಗೊತ್ತಿದ್ದರೂ ಮತ್ತೆಮತ್ತೆ ಈ ಬಂಧನಗಳ ಸುಳಿಯೊಳಗೆ ಸಿಲುಕುತ್ತೇವೆ, ಅದನ್ನು ನಾವು ಇಷ್ಟ ಪಡುತ್ತೇವೆ. ಎಷ್ಟೇ ಕಷ್ಟಗಳು ಬಂದರೂ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಸಿಟ್ಟು, ಅಹಂಕಾರ, ನಿರ್ಲಕ್ಷ್ಯವೆಂಬ ಮೂರು ವಿಚಾರಗಳು ಬಾಂಧವ್ಯದೊಳಗೆ ನುಸುಳಿಕೊಂಡರೆ ಸಾಕು ಸಂಬಂಧಗಳು ಮುರಿದು ಬೀಳುತ್ತವೆ.

Advertisement

ಇದನ್ನು ಹೊರತಾಗಿ ಬದುಕಿನಲ್ಲಿ ಎದುರಾಗುವ ಕಷ್ಟಗಳು ಕೂಡ ನಾವು ನಮ್ಮ ಸಂಬಂಧಗಳಿಂದ ದೂರ ಸರಿಯುವಂತೆ ಮಾಡುತ್ತದೆ. ಇದರಿಂದ ನಾವು ನೆಮ್ಮದಿಯಾಗಿರುತ್ತೇವೆ. ಆದರೆ ನಮ್ಮನ್ನು ನಂಬಿಕೊಂಡವರು, ನಮಗಾಗಿ ಹಂಬಲಿಸುತ್ತಿರುತ್ತಾರೆ. ಸಂಬಂಧಗಳಿಂದ ದೂರ ಹೋಗುವುದೆಂದರೆ ಒಂದು ರೀತಿಯಲ್ಲಿ ನಾವಿಲ್ಲಿ ನಮ್ಮ ಕರ್ತವ್ಯ, ಜವಾಬ್ದಾರಿಯಿಂದ ಓಡಿ ಹೋಗುವುದೆಂದೇ ಅರ್ಥ. ಆದರೆ ಎಲ್ಲದಕ್ಕೂ ಇದು ಪರಿಹಾರವಲ್ಲ. ಇದನ್ನು ನಿರೂಪಿಸುವ ಪುಟ್ಟ ಕಥೆಯೊಂದು ಇಲ್ಲಿದೆ.

ಒಂದು ಊರಿನಲ್ಲಿ ವಿಷ್ಣು ಎಂಬ ಯುವಕನಿದ್ದ. ಬದುಕಿನಲ್ಲಿ ಸಾಕಷ್ಟು ತೊಂದರೆಗಳು ಎದುರಾದವು. ದುಡಿಯಲು ಶಕ್ತಿ ಇಲ್ಲದ ತಂದೆ, ತಾಯಿಯನ್ನು ನೋಡಿಕೊಳ್ಳಲು ಹಣದ ಕೊರತೆಯೂ ಎದುರಾಯಿತು. ಕೊನೆಗೆ ತಾನು ಸನ್ಯಾಸಿಯಾಗುತ್ತೇನೆ ಎಂದುಕೊಂಡು ಯಾರಲ್ಲೂ ಹೇಳದೆ ಮನೆಯಿಂದ ಹೊರಡುತ್ತಾನೆ. ಊರ ಹೊರಗಿದ್ದ ಸನ್ಯಾಸಿಯೊಬ್ಬರನ್ನು ಭೇಟಿಯಾಗಿ ನೀವು ನನಗೆ ಸನ್ಯಾಸತ್ವವನ್ನು ಕೊಡಿಸಬೇಕು ಎಂದು ಹೇಳುತ್ತಾನೆ. ಆಗ ಸನ್ಯಾಸಿ ಸರಿ. ಆದರೆ ಅದಕ್ಕಿಂತಲೂ ಮೊದಲು ನೀನು ನನಗೆ ಈ ಪ್ರಪಂಚದಲ್ಲಿ ಅತಿ ಸುಂದರವಾದ ಮೂರು ವಸ್ತುಗಳನ್ನು ತಂದುಕೊಡಬೇಕು ಎನ್ನುತ್ತಾನೆ.

ಗುರುಗಳ ಒಪ್ಪಿಗೆ ಪಡೆದು ಹೊರಟ ವಿಷ್ಣು, ಮೊದಲು ಮನೆಗೆ ಹೋಗಿ ಅಪ್ಪ, ಅಮ್ಮನಿಗೆ ವಿಷಯ ತಿಳಿಸಬೇಕು ಎಂದುಕೊಳ್ಳುತ್ತಾನೆ. ಮನೆಗೆ ಬಂದಾಗ ಅಪ್ಪ, ಅಮ್ಮ ಇಬ್ಬರೂ ಮಗನಿಗಾಗಿ ಎದುರು ನೋಡುತ್ತಿರುತ್ತಾರೆ. ಮೂರು ದಿನಗಳಿಂದ ಊಟ, ವಿಶ್ರಾಂತಿ ಇಲ್ಲದೆ ಮಗನಿಗಾಗಿ ಹುಡುಕಿ ಸುಸ್ತಾಗಿದ್ದ ಅವರು ಮಗ ಬಂದ ತತ್‌ಕ್ಷಣ ಆತನ್ನು ಸಂತೋಷದಿಂದ ಆಲಂಗಿಸುತ್ತಾರೆ. ಮನೆ ಬಿಟ್ಟು ಹೋಗಿದ್ದಕ್ಕೆ ಬಯ್ಯುತ್ತಾರೆ. ಪ್ರೀತಿಯಿಂದ ಮುದ್ದಿಸುತ್ತಾರೆ. ಬಿಸಿಬಿಸಿಯಾದ ಅಡುಗೆ ಮಾಡಿ ಬಡಿಸುತ್ತಾರೆ. ತಾನಿಲ್ಲದೆ ಮನೆಗೆ ಅಡುಗೆ ಸಾಮಗ್ರಿಗಳು ಎಲ್ಲಿಂದ ಬಂತು ಎಂದು ಕೇಳುತ್ತಾನೆ ವಿಷ್ಣು. ಆಗ ಅಪ್ಪ, ಅಮ್ಮ ಹೇಳುತ್ತಾರೆ, ನಿನಗೋಸ್ಕರ ಊರೀಡಿ ಸುತ್ತಾಡಿದೆವು. ಆಗ ಒಂದುಕಡೆ ತೋಟ ನೋಡಿಕೊಳ್ಳುವ ಕೆಲಸ ಸಿಕ್ಕಿತು. ಹೆಚ್ಚು ಕಷ್ಟವಿಲ್ಲ. ನಮಗಿಬ್ಬರಿಗೂ ಇದು ಸಾಧ್ಯ ಎಂದೆನಿಸಿತು. ಕೂಡಲೇ ಒಪ್ಪಿಕೊಂಡೆವು. ಆಗ ವಿಷ್ಣುವಿಗೆ ಅವರನ್ನು ಬಿಟ್ಟು ತಾನು ಸನ್ಯಾಸತ್ವ ಸ್ವೀಕರಿಸಲು ಹೋದದ್ದಕ್ಕೆ ಆತನಿಗೆ ಬೇಸರವಾಗುತ್ತದೆ. ತನ್ನ ತಪ್ಪಿನ ಅರಿವಾಗುತ್ತದೆ.

ಮತ್ತೆ ಮರಳಿ ಸನ್ಯಾಸಿಗಳ ಬಳಿ ಬಂದು ಗುರುಗಳೇ ನನಗೆ ಬದುಕಿನ ಅತ್ಯಮೂಲ್ಯವಾದ ವಸ್ತುಗಳು ಸಿಕ್ಕಿವೆ. ಆದರೆ ಅದನ್ನು ನಾನು ನಿಮಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಗುರುಗಳು ಏನದು ಎನ್ನುತ್ತಾರೆ. ಅಪ್ಪ, ಅಪ್ಪನ ಪ್ರೀತಿ, ನನ್ನ ಪ್ರತಿ ಸುಖ- ದುಃಖದಲ್ಲೂ ಜತೆ ಇರುವ ಅವರ ಸ್ನೇಹ, ನನಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದಾದ ಅವರ ತ್ಯಾಗ. ಇದಕ್ಕಿಂತ ಹೆಚ್ಚು ಸುಖ ಕೊಡುವಂತದ್ದು, ಬೆಲೆಬಾಳುವಂತದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅದನ್ನು ಬಿಟ್ಟು ನಾನು ಸನ್ಯಾಸಿಯಾಗಲು ಸಾಧ್ಯವಿಲ್ಲ ಎನ್ನುತ್ತಾನೆ.

Advertisement

ಆಗ ಸನ್ಯಾಸಿ, ಬದುಕಿನಲ್ಲಿ ಎಲ್ಲವನ್ನು ಇದ್ದೂ ನೀನು ಸನ್ಯಾಸಿಯಾಗಬಹುದು. ಅದಕ್ಕಾಗಿ ಎಲ್ಲವನ್ನೂ ತೊರೆದು ಬರಬೇಕಿಲ್ಲ. ಪ್ರೀತಿ, ತ್ಯಾಗ, ಸ್ನೇಹ ನೀನು ಇನ್ನೊಬ್ಬರಿಗೆ ಕೊಡು. ಆಗ ನೀನು ಬದುಕಿನಲ್ಲಿ ಹೆಚ್ಚು ಖುಷಿಯಾಗಿರಲು ಸಾಧ್ಯ ಎನ್ನುತ್ತಾನೆ. ವಿಷ್ಣುವಿಗೆ ಇದು ಸರಿ ಎಂದೆನಿಸುತ್ತದೆ. ಮರಳಿ ಮನೆಗೆ ಹೊರಡುತ್ತಾನೆ.

ಬದುಕಿನಲ್ಲಿ ಕಷ್ಟಗಳು ಬಂದಾಗ ಕರ್ತವ್ಯ, ಜವಾಬ್ದಾರಿಗಳನ್ನು ಮರೆತು ದೂರ ಹೋಗುವುದು, ನಮ್ಮನ್ನು ಆಗಾಧವಾಗಿ ಪ್ರೀತಿಸುವವರನ್ನು ಬಿಟ್ಟುಹೋಗುವುದು ಪರಿಹಾರವಲ್ಲ. ಹೀಗೆ ಮಾಡುವುದರಿಂದ ನಾವು ಖುಷಿಯಾಗಿರಬಹುದು.
ಆದರೆ ಇನ್ನೊಂದು ಕಡೆ ನೂರಾರು ಸಮಸ್ಯೆಗಳು ಹುಟ್ಟಿಕೊಂಡಿರುತ್ತವೆ. ಮಾಡದ ತಪ್ಪಿಗೆ ನಮ್ಮನ್ನೇ ನಂಬಿಕೊಂಡವರು ಶಿಕ್ಷೆ  ಅನುಭವಿಸಬೇಕಾಗುತ್ತದೆ.

 ದಾಕ್ಷಾಯಿಣಿ

Advertisement

Udayavani is now on Telegram. Click here to join our channel and stay updated with the latest news.

Next