Advertisement

ಮಕ್ಕಳಿಗೆ ಪಾಠ ಮಾಡಿದ ಶಾಸಕಿ

10:56 PM Aug 31, 2019 | Team Udayavani |

ಧರ್ಮಪುರ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು ಸರಕಾರಿ ಶಾಲೆಯ ಮಕ್ಕಳಿಗೆ ಪಾಠ ಮಾಡಿ ಕೆಲ ಸಮಯ ಶಿಕ್ಷಕಿಯಾದರು. ಧರ್ಮಪುರ ಹೋಬಳಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದ ಪೂರ್ಣಿಮಾ ಶ್ರೀನಿವಾಸ್‌, ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಮಕ್ಕಳಿಗೆ ಸ್ವಲ್ಪ ಹೊತ್ತು ಪಾಠ ಮಾಡುವ ಮೂಲಕ ಗಮನ ಸೆಳೆದರು.

Advertisement

7ನೇ ತರಗತಿ ವಿದ್ಯಾರ್ಥಿಗಳು ಶಾಲೆಯ ಆವರಣ ದಲ್ಲಿರುವ ಮರದಡಿ ಕುಳಿತು ಪಾಠ ಕೇಳುತ್ತಿದ್ದುದನ್ನು ಗಮನಿಸಿದ ಶಾಸಕಿ, “ಮರದ ಕೆಳಗೆ ಕುಳಿತು ಏಕೆ ಪಾಠ ಕೇಳುತ್ತಿದ್ದೀರಿ’ ಎಂದು ಪ್ರಶ್ನಿಸಿದರು. “ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿವೆ, ಹಾಗಾಗಿ, ಮರದ ಕೆಳಗೆ ಕುಳಿತು ಪಾಠ ಕೇಳಬೇಕಾಗಿದೆ’ ಎಂದು ವಿದ್ಯಾರ್ಥಿಗಳು ಉತ್ತರಿಸಿದರು.

ಹಿರಿಯೂರು ತಾಲೂಕಿನಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಗುರುತಿಸಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡುವುದಾಗಿ ಶಾಸಕಿ ಪೂರ್ಣಿಮಾ ಭರವಸೆ ನೀಡಿದರು. ನಂತರ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಪಾಠವನ್ನೂ ಮಾಡಿದರು. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು ಮಕ್ಕಳಿಗೆ ಪಾಠ ಮಾಡಿದ್ದನ್ನು ಅಲ್ಲಿದ್ದ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ತದೇಕ ಚಿತ್ತದಿಂದ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next