Advertisement

ಅರಣ್ಯ ಇಲಾಖೆ ರಕ್ಷಿಸಿದರೂ ಚಿಕಿತ್ಸೆ ಫಲಿಸದೆ ಚಿರತೆ ಮೃತ್ಯು

11:43 AM Mar 23, 2022 | Team Udayavani |

ಬಂಟ್ವಾಳ: ದೇವಶ್ಯ ಪಡೂರು ಗ್ರಾಮದ ಮಾಂಗಾಜೆ ಬೀಜಪ್ಪಾಡಿಯಲ್ಲಿ ಸೋಮವಾರ ತಡರಾತ್ರಿ ಉರುಳಿಗೆ ಸಿಕ್ಕಿ ಜೀವನ್ಮರಣ ಸ್ಥಿತಿಯಲ್ಲಿದ್ದ ಚಿರತೆಯೊಂದನ್ನು ಬಂಟ್ವಾಳ ಅರಣ್ಯ ಇಲಾಖೆಯ ತಂಡ ರಾತೋ ರಾತ್ರಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದರೂ, ಮಂಗಳವಾರ ಸಂಜೆ ಚಿರತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

Advertisement

ಕಾಡಿನಲ್ಲಿ ಯಾರೋ ಇಟ್ಟಿದ್ದ ಉರುಳಿಗೆ ಬಿದ್ದು ಚಿರತೆ ಒದ್ದಾಡುತ್ತಿರುವ ಕುರಿತು ಸ್ಥಳೀಯರಿಂದ ಅರಣ್ಯ ಇಲಾಖೆಗೆ ಬಂದ ಮಾಹಿತಿಯಂತೆ ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ನಾಟೆಲ್ಕಾರ್‌ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್‌ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾರ್‌ ನೇತೃತ್ವದ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು.

ತಡರಾತ್ರಿ 12 ಸುಮಾರಿಗೆ ಇಲಾ ಖೆಯು ಕಾರ್ಯಾಚರಣೆ ಆರಂಭಿಸಿದ್ದು, ಮಂಗಳವಾರ ಮುಂಜಾನೆ 4ರ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಂಡಿತ್ತು. ಮಂಗಳೂರಿನ ವೈದ್ಯೆ ಡಾ|ಯಶಸ್ವಿ ಅವರು ಚಿರತೆಯ ಆರೈಕೆ ನಡೆಸಿದ್ದರು. ಸುಮಾರು 6ರ ಹರೆಯದ ಗಂಡು ಚಿರತೆ ಚೇತರಿಸಿಕೊಂಡಿತ್ತು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ಬೋನಿನಲ್ಲಿದ್ದ ಚಿರತೆಯನ್ನು ಪಿಲಿಕುಳಕ್ಕೆ ಹಸ್ತಾಂತರಿಸುವ ಸಿದ್ಧತೆ ನಡೆಸಲಾಗಿತ್ತಾದರೂ, ಚಿರತೆಯು ಮೃತ ಪಟ್ಟಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಯ ಕಾನೂನಿನಂತೆ ವಗ್ಗ ಕಾಡಿನ ಪ್ರದೇಶದಲ್ಲಿ ಅದರ ಅಂತ್ಯಕ್ರಿಯೆ ನಡೆಸಲಾಯಿತು. ಉಪವಲಯ ಅರಣ್ಯಾಧಿಕಾರಿ ಪ್ರೀತಮ್‌ ಎಸ್‌, ಅರಣ್ಯರಕ್ಷಕರಾದ ಲಕ್ಷ್ಮೀ ನಾರಾಯಣ, ಜಿತೇಶ್‌, ಅರಣ್ಯ ವೀಕ್ಷಕ ಪ್ರವೀಣ್‌, ಚಾಲಕರಾದ ಜಯರಾಮ, ಸಂಕೇತ್‌, ಸ್ನೇಕ್‌ ಕಿರಣ್‌ ಮತ್ತಿತರರು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next