ಬೆಂಗಳೂರು: ತ್ಯಾಜ್ಯದಿಂದ ಆದಾಯ ಗಳಿಸುವುದು ಹೇಗೆ ಎಂಬುದರ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಮೂಡಿಸಲು ಬಿಬಿಎಂಪಿ ಕ್ರಮಕೈಗೊಳ್ಳಬೇಕು ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ. ಭಾನುವಾರ ನಗರದ ನಂದಿನಿ ಬಡಾವಣೆಯಲ್ಲಿ ಆಯೋಜಿಸಿದ್ದ “ಕಾಂಪೋಸ್ಟ್ ಸಂತೆ’ಗೆ ಚಾಲನೆ ನೀಡಿದರು.
“ತ್ಯಾಜ್ಯವನ್ನು ನಿರುಪಯುಕ್ತವೆಂದು ಬಗೆಯದೇ ಅದೊಂದು ಆದಾಯದ ಮೂಲ ಎಂದು ಪರಿಗಣಿಸಿದರೆ ನಾಗರಿಕರು ಲಾಭ ಗಳಿಸಬಹುದು. ತ್ಯಾಜ್ಯವನ್ನು ಮನೆ ಆವರಣದಲ್ಲಿಯೇ ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ನಗರದಲ್ಲಿನ ತ್ಯಾಜ್ಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಗೊಬ್ಬರ ತಯಾರಿಸುವ ವಿಧಾನಗಳನ್ನು ಕಾಂಪೋಸ್ಟ್ ಸಂತೆಗಳ ಮೂಲಕ ಜನರಿಗೆ ತಿಳಿಸಿಕೊಡಬೇಕು. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವಾರ್ಡ್‌ನಲ್ಲೂ ಹಮ್ಮಿಕೊಳ್ಳಬೇಕು,” ಎಂದರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, “”ನಾಗರಿಕರಲ್ಲಿ ತ್ಯಾಜ್ಯ ವಿಂಗಡಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾಂಪೋಸ್ಟ್ ಸಂತೆಗಳನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ನಗರದಲ್ಲಿನ ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಜತೆಗೆ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ, ಅನಿಲ ಉತ್ಪಾದನೆ ಸೇರಿ ಯಾವ ರೀತಿ ತ್ಯಾಜ್ಯವನ್ನು ಆದಾಯದ ಮೂಲವಾಗಿ ಮಾಡಿಕೊಳ್ಳಬಹುದು ಎಂಬುದನ್ನು ಸಂತೆಗಳಲ್ಲಿ ನಾಗರಿಕರಿಗೆ ತಿಳಸಲಾಗುವುದು,” ಎಂದರು.
ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್ ಮಾತನಾಡಿ, “ಕಾಂಪೋಸ್ಟ್ ಸಂತೆಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮನೆಯಲ್ಲಿ ತ್ಯಾಜ್ಯಕ್ಕೆ ಬಳಸುವ ಬುಟ್ಟಿಗಳು, ಗೊಬ್ಬರ ಹಾಗೂ ಜೈವಿಕ ಅನಿಲ ಉತ್ಪಾದಿಸುವ ವಿಧಾನಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. ನಂದಿನಿ ಬಡಾವಣೆಯನ್ನು ಸ್ವತ್ಛ ಹಾಗೂ ಮಾದರಿ ಬಡಾವಣೆಯನ್ನಾಗಿ ಮಾಡುವ ಸದುದ್ದೇಶಕ್ಕೆ ವಾರ್ಡ್‌ನ ಜನತೆ ತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ಮನವಿ ಮಾಡಿದರು.