Advertisement

ಶಾಸಕ, ಅಧ್ಯಕ್ಷ ಸ್ಥಾನ ಕೊಟ್ಟರೂ ಕೈಕೊಟ್ಟು ಹೋದ್ರು

09:37 PM Nov 27, 2019 | Lakshmi GovindaRaj |

ಹುಣಸೂರು: ಮನೆಯಲ್ಲಿದ್ದ ಎಚ್‌.ವಿಶ್ವನಾಥ್‌ ಅವರನ್ನು ಕರೆತಂದು ಶಾಸಕ, ಪಕ್ಷ ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ, ಯಾವುದೋ ಆಮಿಷಕ್ಕೊಳಗಾಗಿ ನಮಗೆ ಕೈಕೊಟ್ಟು ಹೋದ ಪುಣ್ಯಾತ್ಮ, ನನ್ನ ಫೋಟೋವನ್ನು ದೇವರ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡ್ತಿನಿ ಅಂತಿದ್ದಾರೆ. ಇದೆಲ್ಲಾ ಬೂಟಾಟಿಕೆ ಮಾತು. ಇಂಥವರಿಗೆ ಕ್ಷೇತ್ರದ ಮತದಾರ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದರು.

Advertisement

ಹುಣಸೂರು ಉಪ ಚುನಾವಣಾ ಅಖಾಡದಲ್ಲಿ ಬಿಳಿಕೆರೆ ಹೋಬಳಿಯ ಮನುಗನಹಳ್ಳಿ, ಅಂಕನಹಳ್ಳಿಗಳಲ್ಲಿ ಮೊಮ್ಮಗ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಸಾ.ರಾ.ಮಹೇಶ್‌ ಜೊತೆ ಜಂಟಿ ಪ್ರಚಾರ ನಡೆಸಿ ಮಾತನಾಡಿದರು. ಜೆಡಿಎಸ್‌ ಪಕ್ಷ ರೈತರ ಪಕ್ಷ, ಈ ಜೀವ ಇರೋವವರೆಗೂ ರೈತರ ಪ್ರಗತಿಗೆ ದುಡಿಯುತ್ತೇನೆ. ತಂಬಾಕು ಬೆಲೆ ಕುಸಿದಾಗ ಕೇಂದ್ರದಿಂದ ಮಂತ್ರಿಗಳನ್ನು ಕರೆದುಕೊಂಡು ಬಂದು ಉತ್ತಮ ಬೆಲೆ ಕೊಡಿಸಿದ್ದೆ. ಈಗ ತಂಬಾಕು ಬೆಳೆಗಾರರು ಕಷ್ಟದಲ್ಲಿದ್ದಾರೆ. ಅವರ ಕಷ್ಟವನ್ನು ಯಾರೂ ಕೇಳುತ್ತಿಲ್ಲ ಎಂದು ಅಸಮಾಧಾನ ಯಕ್ತಪಡಿಸಿದರು.

ತಮಿಳುನಾಡಿನ ಅಣ್ಣಾದೊರೆ ಅವರು 95 ವರ್ಷ ಆದ್ರೂ ಪಕ್ಷಕ್ಕಾಗಿ ದುಡಿದರು. ಅದೇ ರೀತಿ ನಾನು ಕೂಡ ಈ ವಯಸ್ಸಿನಲ್ಲೂ ಓಡಾಡ್ತಿದ್ದೀನಿ. ನಮ್ಮ ಪಕ್ಷದಿಂದ ಯೋಗ್ಯ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಸೋಮಶೇಖರ್‌ ಅವರನ್ನು ಬೆಂಬಲಿಸಿ ಎಂದು ಕೈಮುಗಿದು ಮನವಿ ಮಾಡಿದರು. ರೈತರು ಕಷ್ಟ ಅಂದಾಗ ಮೈಸೂರು ಸಂಸದರು ವ್ಯಾಪಾರ ಮಾಡ್ತಿದ್ರು. ಹುಣಸೂರು ಶಾಸಕರು ವ್ಯಾಪಾರ ಆಗ್ತಿದ್ರು. ಇವರಿಬ್ಬರ ಹೆಸರು ಹೇಳದೇ ವಿಶ್ವನಾಥ್‌ ಹಾಗೂ ಪ್ರತಾಪಸಿಂಹ ಅವರಿಗೆ ಸಂಸದ ಪ್ರಜ್ವಲ್‌ ರೇವಣ್ಣ ಟಾಂಗ್‌ ನೀಡಿದರು.

21 ಗ್ರಾಮದಲ್ಲಿ ರೋಡ್‌ ಶೋ: ತಾಲೂಕಿನ ಬಿಳಿಕೆರೆ ಹೋಬಳಿಯ 21 ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದ ವೇಳೆ ಕಾರ್ಯಕರ್ತರು, ಗ್ರಾಮಸ್ಥರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಮೈಸೂರು ಪೇಟ ತೊಡಿಸಿ,ಮಂಗಳವಾದ್ಯದೊಂದಿಗೆ ಬರಮಾಡಿಕೊಂಡರು.

ಅಂದು ಕೇಳಿದ್ರೆ ಹುಣಸೂರು ಜಿಲ್ಲೆ ಮಾಡ್ತಿದ್ವಿ: ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಎಚ್‌. ವಿಶ್ವನಾಥ್‌ ಅವರು ಜಿಲ್ಲೆ ವಿಚಾರವಾಗಿ ಒಂದು ಪತ್ರನೂ ಕೊಟ್ಟಿಲ್ಲ, ಕೇಳಲೂ ಇಲ್ಲ, ಹಾಗೇನಾದ್ರೂ ಕೇಳಿದ್ರೆ ಹಬ್ಬದೂಟ ಹಾಕ್ಸಿ ಹುಣಸೂರು ಜಿಲ್ಲೆ ಮಾಡುತ್ತಿದ್ದರು. ಈಗ ಓಟ್‌ ಹಾಕಿಸಿಕೊಳ್ಳಲಿಕ್ಕೆ ಜಿಲ್ಲೆ ವಿಚಾರ ಮಾತಾಡ್ತಿದ್ದಾರೆ. ಇದೆಲ್ಲ ಚುನಾವಣೆ ಗಿಮಿಕ್‌. ಚುನಾವಣೆ ಹೊಸ್ತಿಲಲ್ಲಿ ಇವರಿಗೆ ದೇವರಾಜು ಅರಸು ನೆನಪು ಆಗಿದೆ. ಈಗ ಜಿಲ್ಲೆ ಮಾಡುತ್ತೇನೆಂದು ಬೊಬ್ಬೆ ಹೊಡಿಯುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ವಾಗ್ಧಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next