Advertisement

Kundapura: ನಮಗೆ ಕಾಲು ಸಂಕ ಬೇಕು: ಈ ಸಂಕ ನೋಡಿದರೇ ಕಾಲು ನಡುಗುತ್ತದೆ!

03:21 PM Aug 11, 2024 | Team Udayavani |

ಕುಂದಾಪುರ: ಅಪರೂಪಕ್ಕೊಮ್ಮೆ ರಸ್ತೆ ಬದಿ ಜೀವನಕ್ಕಾಗಿ ಹಗ್ಗದ ಮೇಲೆ ನಡೆದು ಸರ್ಕಸ್‌ ಮಾಡುವವರನ್ನು ಕಂಡರೇ ಎದೆ ಝಲ್‌ ಎನ್ನುತ್ತದೆ. ಅಂತಹದ್ದರಲ್ಲಿ ಕಾಡು ಹಾದಿಯಲ್ಲಿ ಮರದ ತುಂಡು ರೀಪುಗಳು ಹಾಗೂ ಸರಿಗೆಯಿಂದ ಮಾಡಿದ ಕಾಲು ಸಂಕದಲ್ಲಿ ನಿತ್ಯವೂ ಸರ್ಕಸ್‌ ಮಾಡುತ್ತಾ ನದಿ ದಾಟುವ ಜನರ ಪರಿಸ್ಥಿತಿ ಹೇಗಿರಬಹುದು ಎಂದು ನೀವೇ ಊಹಿಸಿ.

Advertisement

ಹೌದು, ಅಮಾಸೆಬೈಲು ಸಮೀಪ ದ ಶೇಡಿಮನೆ ಗ್ರಾಮದ ಮೆಣಸಾಡಿ ಭಾಗದ ಜನರು ವಿಮಲಾ ನದಿಗೆ ಅವರೇ ನಿರ್ಮಿಸಿರುವ ಮರದ ಕಾಲು ಸಂಕದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು, ನೀರ ಮೇಲೆ ಸರ್ಕಸ್‌ ಮಾಡುತ್ತಾ ಓಡಾಡುತ್ತಿದ್ದಾರೆ.

ಒಂದೂವರೆ ಕಿ.ಮೀ.

ದೂರ ಈ ಕಾಲು ಸಂಕದ ಮೂಲಕವಾಗಿ ತೆರಳಿದರೆ ಹಳೆ ಅಮಾಸೆಬೈಲಿನಿಂದ ಶೇಡಿಮನೆಗೆ ಕೇವಲ ಒಂದೂವರೆ ಕಿ.ಮೀ. ಅಷ್ಟೇ ದೂರ. ಬೈಕ್‌ ಅಥವಾ ಇನ್ನಿತರ ವಾಹನ ಗಳಲ್ಲಿ ತೆರಳಬೇಕಾದರೆ ಸುತ್ತು ಬಳಸಿ ಸುಮಾರು 15 ಕಿ.ಮೀ. ದೂರ ಕ್ರಮಿಸಬೇಕು. ಅದು ಅಮಾಸೆಬೈಲಿಂದ ತೊಂಭತ್ತು ಮಾರ್ಗವಾಗಿ ಶೇಡಿಮನೆಗೆ ಬರಬೇಕಾಗಿದೆ.

7 ಕಿ.ಮೀ.ಗೆ 20 ಕಿ.ಮೀ. ಸಂಚಾರ

Advertisement

ಶೇಡಿಮನೆಯಿಂದ ಅಮಾಸೆಬೈಲು ಗ್ರಾಮದ ಬಳ್ಮನೆಯ ಕೋಟೆರಾಯ ದೇವಸ್ಥಾನ, ಚತುರ್ಮುಖ ಬ್ರಹ್ಮ ದೇವಸ್ಥಾನಕ್ಕೆ ಹೋಗುವವರು ಸಾಕಷ್ಟು ಜನ ಇದ್ದಾರೆ. ಈ ವಿಮಲಾ ನದಿ ದಾಟಿದರೆ ಕೇವಲ 7 ಕಿ.ಮೀ. ದೂರದ ಅಂತರವಷ್ಟೆ ಇರುವುದು. ಆದರೆ ಸಂಪರ್ಕ ಕಾಲು ಸಂಕವಿಲ್ಲದ ಕಾರಣ ಬರೋಬ್ಬರಿ 20 ಕಿ.ಮೀ. ಸುತ್ತಾಟ ನಡೆಸಿ, ಬರಬೇಕಾದ ಸ್ಥಿತಿ ಇಲ್ಲಿನ ಭಕ್ತರದು.

ಚಿಕ್ಕ ಮಕ್ಕಳು, ಹಿರಿಯರಿಗೆ ದಾಟಲು ಸಾಧ್ಯವೇ ಇಲ್ಲ

ಇದು ಅಂತಿಂಥ ಕಾಲು ಸಂಕವಲ್ಲ. ಅಡಿಕೆ ಮರದ ರೀಪುಗಳು ಹಾಗೂ ಸರಿಗೆಯಿಂದ ಮಾಡಿರುವ ಕಾಲು ಸಂಕ. ಸುಮಾರು 65-70 ಮೀಟರ್‌ ದೂರದವರೆಗೆ ಇರುವ ಈ ಕಾಲು ಸಂಕದಲ್ಲಿ ನಡೆಯುವುದೇ ಒಂದು ದೊಡ್ಡ ಸವಾಲು. ದೊಡ್ಡವರು ಆದರೂ ಹೇಗೋ ಕಷ್ಟಪಟ್ಟುಕೊಂಡು ನಡೆದುಕೊಂಡು ಹೋದಾರು, ಆದರೆ ಚಿಕ್ಕ ಮಕ್ಕಳು ಮಾತ್ರ ನಡೆಯಲು ಸಾಧ್ಯವೇ ಇಲ್ಲದಂತಿದೆ. ನಡೆದರೂ ಅಪಾಯ ಕಟ್ಟಿಟ್ಟ ಬುತ್ತಿ. ನಿತ್ಯಬೆಳ್ಳಂಬೆಳಗ್ಗೆ 4 ಗಂಟೆಗೆ ಇಲ್ಲಿಂದ ಕುರ್ಲಾನ್‌ ಎಸ್ಟೇಟ್‌, ಇನ್ನಿತರ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಹೋಗುವವರು ಇದೇ ಕಾಲು ಸಂಕದಲ್ಲಿ ಸರ್ಕಸ್‌ ಮಾಡಿಕೊಂಡು ಹೋಗುತ್ತಾರೆ. ಈ ಭಾಗದಲ್ಲಿ ಸುಮಾರು 20 ಎಸ್ಟೇಟ್‌ಗಳಿದ್ದು, ಅಲ್ಲಿಗೆ ಹೋಗುವವರಿಗೆ ಇದೇ ಹತ್ತಿರದ ದಾರಿ. ಇಲ್ಲದಿದ್ದರೆ ಹತ್ತಾರು ಕಿ.ಮೀ. ಸುತ್ತಾಡಿ ವಾಹನಗಳಲ್ಲಿ ಬರಬೇಕು.

ನಿತ್ಯವೂ ಇದೇ ಪಾಡು

ಕೆಲಸಕ್ಕೆ ಹೋಗಬೇಕಾದರೆ ಇದೇ ಕಾಲು ಸಂಕದಲ್ಲಿ ಕಷ್ಟಪಟ್ಟುಕೊಂಡು ಹೋಗಬೇಕು. ಇಲ್ಲದಿದ್ದರೆ ಬೈಕ್‌ ಮೂಲಕ ಸುತ್ತು ಬಳಸಿ ಬರಬೇಕಾಗಿದೆ. ಸುಮಾರು ಸಮಯಗಳಿಂದ ಎಲ್ಲರಿಗೂ ಮನವಿ ಮಾಡಿ ಆಯಿತು. ಕಾಲು ಸಂಕವೂ ಆಗಿಲ್ಲ. ಇದ್ದಂತಹ ರಸ್ತೆಯೂ ಇಲ್ಲದಂತಾಗಿದೆ. ಈ ಕಾಲು ಸಂಕವನ್ನು ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟವರು ಮಾಡಿಕೊಡಲಿ ಅನ್ನುವುದು ನಮ್ಮ ಒತ್ತಾಯವಾಗಿದೆ.

– ರಾಘವೇಂದ್ರ ಗೋಳಿಗದ್ದೆ, ಸ್ಥಳೀಯರು

ಎರಡು ಗ್ರಾಮ ಬೆಸೆಯುವ ಸಂಕ

ಇಲ್ಲಿ ಕಾಲು ಸಂಕವಾದರೆ ಅಮಾಸೆಬೈಲು ಗ್ರಾಮ ಹಾಗೂ ಶೇಡಿಮನೆ ಈ ಎರಡೂ ಗ್ರಾಮಗಳು ಇನ್ನಷ್ಟು ಹತ್ತಿರವಾಗಲಿದೆ. ಶೇಡಿಮನೆ ಗ್ರಾಮದ ಮೆಣಸಾಡಿ ಭಾಗದ ಜನರು ಅಮಾಸೆಬೈಲು ಪೇಟೆ, ಜಡ್ಡಿನಗದ್ದೆಗೆ ತೆರಳಲು ಇದು ಹತ್ತಿರವಾಗಲಿದೆ. ಈ ಕಾಲು ಸಂಕದಿಂದ ಕುಂದಾಪುರದ ಶಾಸಕರ ಮನೆಗೆ ಕೇವಲ 2 ಕಿ.ಮೀ. ಅಷ್ಟೆ ದೂರವಿದೆ. ಈ ಬಾರಿಯಾದರೂ ಒಂದು ಸುಸಜ್ಜಿತ ಕಾಲು ಸಂಕ ಆಗಲಿ ಅನ್ನುವುದು ನಿತ್ಯವೂ ಈ ಅಪಾಯಕಾರಿ ಮರದ ಕಾಲು ಸಂಕದಲ್ಲಿ ಸರ್ಕಸ್‌ ಮಾಡಿಕೊಂಡು ತೆರಳುತ್ತಿರುವ ಜನರ ಒಕ್ಕೊರಲ ಮನವಿ.

60ಕ್ಕೂ ಮಿಕ್ಕಿ ಮನೆಗೆ ಪ್ರಯೋಜನ

ಮೆಣಸಾಡಿ ಪ್ರದೇಶದಲ್ಲಿ ವಿಮಲಾ ನದಿಗೆ ಸುಸಜ್ಜಿತವಾದ, ವಾಹನಗಳು ಸಂಚರಿಸಲು ಸಾಧ್ಯವಿರುವಂತಹ ಕಾಲು ಸಂಕವಾದರೆ ಬಳ್ಮನೆ, ಹಂದಿಮನೆ ಪರಿಸರದ 10ಕ್ಕೂ ಮಿಕ್ಕಿ ಮನೆಗಳಿಗೆ ಶೇಡಿಮನೆ ಕಡೆಗೆ, ಹಳೆ ಅಮಾಸೆಬೈಲಿನ 50ಕ್ಕೂ ಮಿಕ್ಕಿ ಮನೆಗಳಿಗೆ ಪ್ರಯೋಜನವಾಗಲಿದೆ. ಇದಲ್ಲದೆ ಶೇಡಿಮನೆ ಭಾಗದ ಗೋಳಿಗದ್ದೆ, ಮೆಣಸಾಡಿ, ಮರೂರು, ಶೇಡಿಮನೆ, ಅರಸಮ್ಮಕಾನು ಪ್ರದೇಶದ ಜನರಿಗೂ ಅಮಾಸೆಬೈಲು ಕಡೆಗೆ ತೆರಳಲು ಅನುಕೂಲವಾಗಲಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next