ಶುದ್ಧ ಬಿಳಿ ಹಾಳೆಯಂಥ ನನ್ನ ಒಲವಿನಲಿ ನಿನ್ನದೇ ಹೆಸರು ಬರೆದಿರುವೆ. ನಿನ್ನ ಮನದೊಳಗೆ ನಾ ಇದ್ದೇನಾ? ಅರಿಯುವುದಾದರೂ ಹೇಗೆ?
ಒಲವಿನ ಹುಡುಗಿ, ನಿತ್ಯ ನಿನ್ನನ್ನು ನೋಡುತ್ತಲೇ ಇದ್ದೇನೆ. ನಿರಭ್ರ ಆಕಾಶದಲ್ಲಿ ತೇಲುವ ಬೆಳದಿಂಗಳನ್ನು ನೋಡಿದಂತೆ. ಕಾಲೇಜಿನ ಕಾರಿಡಾರಿನಲ್ಲಿ, ಲೈಬ್ರರಿಯ ಸೈಲೆನ್ಸಿನಲ್ಲಿ, ಕ್ಯಾಂಟೀನಿನ ಕಲರವದಲ್ಲಿ, ಗೆಳತಿಯರ ಹಿಂಡಿನ ಸಂಭ್ರಮದಲ್ಲಿ, ಒಬ್ಬಂಟಿಯಾಗಿ ಹೊರಟ ನಿನ್ನ ಸ್ಕೂಟಿಯ ಬಿರುಗಾಳಿಯಲ್ಲಿ, ಕಣ್ಣುಮುಚ್ಚಿ ಕೈ ಜೋಡಿಸಿ ನಿಂತು, ಮೂವತೂ¾ರು ಸೆಕೆಂಡು ಮಣಮಣಿಸಿ ಪ್ರಾರ್ಥನೆ ಸಲ್ಲಿಸುವ ಕೃಷ್ಣ ದೇವರ ಗುಡಿಯಲ್ಲಿ, ನಂಗೆ ಪ್ರಾಣ ಹೋಗುವಷ್ಟು ಇಷ್ಟದ ಆಕಾಶ ನೀಲಿ ಬಣ್ಣದ ಚೂಡಿದಾರ್‌ನಲ್ಲಿ, ನಿನ್ನ ಅರಿವಿಗೆ ಬಾರದೇ ನಿನ್ನ ನೆರಳಾಗಿ ನಡೆಯುತ್ತಲೇ ಇದ್ದೇನೆ. ನೀ ಸಿಗದ ದಿನ ನನ್ನೊಳಗೇ ನಾನು ನಿನ್ನೊಂದಿಗೆ ಅಲೆಯುತ್ತಾ ಕಳೆಯುತ್ತೇನೆ.
ನಿನ್ನ ಹಿಂದೆ ನನ್ನಂಥವನೊಬ್ಬ ಆಗಂತುಕ ಇದ್ದಾನೆಂಬ ಸುಳಿವು ಸಿಕ್ಕರೆ ನೀ ತತ್ತರಿಸಿ ಹೋಗುತ್ತೀಯ. ಎದುರು ಬಂದು ನನ್ನ ಪ್ರೀತಿ ನಿವೇದಿಸಿಕೊಂಡರೆ ನೀ ಬೆಚ್ಚಿಬೀಳುತ್ತೀಯ. ನಿನ್ನ ಸನಿಹ ಸುಳಿಯಲು ಇಂಥವೇ ನೂರಾರು ಚಿಂತೆಗಳ ತಡೆಗೋಡೆಗಳು ಧುತ್ತನೆ ಎದ್ದು ನಿಲ್ಲುತ್ತವೆ. ನಿನ್ನನ್ನು ತಲುಪುವ ಯಾವ ಹಾದಿಯೂ ಕಾಣದೆ, ಇರುಳಲ್ಲಿ ಭವಿಷ್ಯದ ಕನಸನ್ನು ಉರಿಸಿ, ಹಗಲಲ್ಲಿ ವಾಸ್ತವದ ಬೂದಿಯಲ್ಲಿ ಹೊರಳುತ್ತೇನೆ. ಮತ್ತೆ ಮತ್ತೆ ಅದೇ ನೋವಿನ ಸುಖಕ್ಕೆ ಮರಳಿ ಮರಳಿ ಹಂಬಲಿಸಿ ನರಳುತ್ತೇನೆ.
ಅಪರಿಚಿತತೆಯಲ್ಲೇ ಒಲವನ್ನು ನವಿರು ಕಂಪನದ ಅಲೆಯಾಗಿಸಿ ನನ್ನತ್ತ ಎಸೆದುಹೋದ ಹುಡುಗಿ ನೀನು. ಅದು ನನ್ನ ಹೃದಯಕ್ಕೆ ತಲುಪುವ ವೇಳೆಗೆ ಬಿರುಗಾಳಿಯಾಗಿತ್ತು. ಈ ಅಲ್ಲೋಲ ಕಲ್ಲೋಲವನ್ನು ಎದೆಯೊಳಗಿಟ್ಟುಕೊಂಡು ನಿನ್ನೆದುರು ಹೇಗೆ ಹಾಜರಾಗಲಿ ಹೇಳು? ಎದುರು ಬದುರಾದಾಗ ಮೌನದ ತುಟಿಯಲ್ಲಿ, ತುಂಟ ಕಂಗಳ ಭೇಟಿಗೆ ಕಾನ್ಫಿಡೆನ್ಸ್ ತುಂಬುವಂಥ¨ªೊಂದು ಹಾಯ… ಹೇಳಬಾರದೇ? ದಿನಗಳು ಮೋಡದಿಂದ ಕಳಚಿ ಬಿದ್ದ ಹನಿಗಳಂತೆ ಎಲ್ಲೋ ಹರಿದು ಮರೆಯಾಗುತ್ತಲೇ ಇವೆ. ನಿರೀಕ್ಷೆಯ ಅಗ್ಗಷ್ಟಿಕೆಗೆ ಈ ಬದುಕನ್ನು ಒಟ್ಟುತ್ತಲೇ ಇದ್ದೇನೆ. ಒಲವಿನ ಕುಲುಮೆಯಲ್ಲಿ ಹೃದಯ ಬೇಯುತ್ತಲೇ ನಗುತಿದೆ. ಸಂತೆಯಲ್ಲೂ ಒಬ್ಬಂಟಿ ಹಾದಿಯ ನಂಟು ಗಂಟುಬಿದ್ದಿದೆ. ನನ್ನ ನಿನ್ನ ಹಾದಿ ಒಂದಾಗುವ ಘಳಿಗೆಗಾಗಿ ಕಾಯುತ್ತೇನೆ.
ಒಂದಂತೂ ದಿಟ. ಯಾವತ್ತಿಗೂ ನಾನು ನಿನ್ನೆದುರು ನಿಂತು, ನನ್ನೊಳಗನ್ನು ನಿನ್ನ ಇಷಾರೆ ಇಲ್ಲದೆ ನಿವೇದಿಸಲಾರೆ. ನಿವೇದಿಸಿ ತಿರಸ್ಕಾರಕ್ಕೀಡಾಗಿ ಪರಿತಪಿಸುವುದಕ್ಕಿಂತ. ಈ ಒಬ್ಬಂಟಿ ಕನಸು ಲೇಸು. ಆದರೂ ಮನಸು ಎಂಬುದು ಯಾವ ಮಾತನ್ನೂ ಕೇಳದ ಲೂಸು ಲೂಸು. ನಾನಾದರೂ ಎನು ಮಾಡಲಿ ಹೇಳು? ನಿನ್ನ ಹೊರತು ಮತ್ತೂಂದು ಜಗತ್ತು ಇಲ್ಲದೇ ಉಳಿದುಹೋದವನು.
ನಿನ್ನ ನಿರೀಕ್ಷೆಯಲ್ಲಿ
– ಜೀವ ಮುಳ್ಳೂರು