Advertisement

ಜೆಡಿಎಸ್‌ ಸೋಲಿಗೆ ನಾಯಕತ್ವದ ನಿರ್ಲಕ್ಷ್ಯವೇ ಕಾರಣ

04:11 PM Jun 17, 2022 | Team Udayavani |

ಹಾಸನ: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ.ಮಾದೇಗೌಡ ಭಾರೀ ಅಂತರದ ವಿಜಯ ಸಾಧಿಸಿರುವುದು ಜೆಡಿಎಸ್‌ ಭದ್ರಕೋಟೆ ಹಾಸನ ಜಿಲ್ಲೆಯಲ್ಲೂ ತಲ್ಲಣ ಉಂಟು ಮಾಡಿದೆ. ಜೆಡಿಎಸ್‌ ಅಭ್ಯರ್ಥಿ ಹೀನಾಯ ಸೋಲು ಅನುಭವಿಸಿ ರುವುದು ಜೆಡಿಎಸ್‌ ಮುಖಂಡರಿಗೆ ಅಘಾತವನ್ನುಂಟು ಮಾಡಿದೆ.

Advertisement

ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 16 ಜೆಡಿಎಸ್‌ ಶಾಸಕರಿದ್ದಾರೆ. ಜೆಡಿಎಸ್‌ನ ಒಬ್ಬ ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ ವಿರುದ್ಧವಾಗಿ ಕಾಂಗ್ರೆಸ್‌ ಪರ ಬಹಿರಂಗವಾಗಿಯೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೂ ಇನ್ನು ಮೂವರು ವಿಧಾನ ಪರಿಷತ್‌ ಸದಸ್ಯರು ಸೇರಿ ಒಟ್ಟು 19 ಮಂದಿ ಜೆಡಿಎಸ್‌ ಶಾಸಕರು, ಒಬ್ಬ ಸಂಸದ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೂ ಜೆಡಿಎಸ್‌ ಅಭ್ಯರ್ಥಿ ರಾಮು ಹೀನಾಯ ಸೋಲು ಪಕ್ಷಕ್ಕೆ ಅರಗಿಸಿಕೊಳ್ಳಲಾರದ ಕಹಿ ಗುಳಿಗೆಯಾಗಿದೆ.

ಚುನಾವಣೆ ಗಂಭೀರವಾಗಿ ಪರಿಗಣಿಸಲಿಲ್ಲ: ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆಡಿಎಸ್‌ ಇಷ್ಟೊಂದು ಹೀನಾಯ ಸೋಲು ಅನುಭವಿಸಲು ಪಕ್ಷದ ನಾಯಕತ್ವದ ನಿರ್ಲಕ್ಷ್ಯವೇ ಕಾರಣ. ಮೂರ್‍ನಾಲ್ಕು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಜೆಡಿಎಸ್‌ ನಾಯಕರು ವಿಶೇಷವಾಗಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಅತಿಯಾದ ಆತ್ಮವಿಶ್ವಾಸ: ನಮ್ಮ ಭದ್ರಕೋಟೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಭೇದಿಸಲಾಗದು ಎಂಬ ಅತಿಯಾದ ವಿಶ್ವಾಸ ಹೀನಾಯ ಸೋಲಿಗೆ ಕಾರಣ.

40 ವರ್ಷದಿಂದ ಈ ಕ್ಷೇತ್ರದಲ್ಲಿ ಗೆಲ್ಲಲಾಗದ ಕಾಂಗ್ರೆಸ್‌ ಈ ಚುನಾವಣೆಯಲ್ಲೂ ನಮಗೆ ಸ್ಪರ್ಧೆ ಒಡ್ಡಲಾರದು. ಬಿಜೆಪಿಯ ಬ್ರಾಹ್ಮಣ ಸಮುದಾ ಯದ ಅಭ್ಯರ್ಥಿ ಯನ್ನು ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಒಕ್ಕಲಿಗರು ಬೆಂಬಲಿಸಲಾರರು. ಬಹುಪಾಲು ಒಕ್ಕಲಿಗರು ಜೆಡಿಎಸ್‌ ಅಭ್ಯರ್ಥಿ ಯನ್ನೇ ಬೆಂಬಲಿಸುತ್ತಾರೆ ಎಂಬ ನಾಯಕರ ಕುರುಡು ನಂಬಿಕೆಯೂ ಇಂತಹ ಅಘಾತಕಾರಿ ಸೋಲಿಗೆ ಕಾರಣವಾಗಿದೆ.

ಮುಂದಿನ ವರ್ಷ ಎದುರಾಗುವ ವಿಧಾನಸಭಾ ಚುನಾವಣೆಗೆ ಈ ಚುನಾವಣಾ ಫ‌ಲಿತಾಂಶ ದಿಕ್ಸೂಚಿ ಎಂಬುದು ಮೂರು ರಾಜಕೀಯ ಪಕ್ಷಗಳ ಮುಖಂಡರಿಗೂ ಅರಿವಿತ್ತು. ಕಾಂಗ್ರೆಸ್‌ ಮುಖಂಡ ರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿದರು.

Advertisement

ಮತದಾರರ ನೋಂದಣಿ, ವ್ಯವಸ್ಥಿತ ಪ್ರಚಾರದಲ್ಲಿಯೂ ತೊಡಗಿಸಿಕೊಂಡರು. ಮಾಜಿ ಸಂಸದ ದಿವಂಗತ ಮಾದೇಗೌಡರಿಗಿದ್ದ ಜನಪರ ಕಾಳಜಿಯೂ ಈ ಚುನಾವಣೆಯಲ್ಲಿ ಅವರ ಪುತ್ರ ಮಧು ಅವರಿಗೆ ವರವಾಗಿ ದಾಖಲೆಯ ವಿಜಯವನ್ನು ಕಾಂಗ್ರೆಸ್‌ ಪಡೆದುಕೊಂಡಿದೆ.

ಅಧಿಕಾರವನ್ನಷ್ಟೇ ನಂಬಿದ ಬಿಜೆಪಿ: ಬಿಜೆಪಿ ಅಭ್ಯರ್ಥಿ ಎಂ.ವಿ.ರವಿಶಂಕರ್‌ ರಾಜಕೀಯ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ಈ ಚುನಾವಣೆಯನ್ನು ಪರಿಗಣಿಸಿ ಹೋರಾಟ ನಡೆಸಿದರು. ಬಿಜೆಪಿ ಅಧಿಕಾರದಲ್ಲಿರುವುದು ತಮಗೆ ವರವಾಗಲಿದೆ ಎಂದು ನಂಬಿದ್ದರು.

ಹಳೆ ಮೈಸೂರು ಭಾಗದಲ್ಲಿ ವಿಧಾನಸಭಾ ಚುನಾವಣೆಗೆ ಪದವೀಧರರ ಕ್ಷೇತ್ರದ ಚುನಾವಣೆಯ ಮೂಲಕ ಬಿಜೆಪಿಯ ಬಲದ ಸಂದೇಶ ರವಾನಿಸುವ ಪ್ರಯತ್ನವನ್ನೂ ಬಿಜೆಪಿ ಮುಖಂಡರು ಮಾಡಿದ್ದರು. ಆದರೆ, ಅವರು ನಿರೀಕ್ಷಿದ ಫ‌ಲ ಮಾತ್ರ ಸಿಗಲಿಲ್ಲ. ಎರಡನೇ ಬಾರಿಗೆ ರವಿಶಂಕರ್‌ ಅವರ ಸೋಲು ಬಿಜೆಪಿಗೂ ಮುಖಭಂಗವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಎದುರಾಳಿ ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ ಎಂಬುದನ್ನೂ ಈ ಚುನಾವಣೆಯ ಫ‌ಲಿತಾಂಶವು ದೃಢಪಡಿಸಿದಂತಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಗೆಲುವಿನ ಬೂಸ್ಟರ್‌ ಡೋಸ್‌
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಗೆಲುವು ಕಾಂಗ್ರೆಸ್‌ನ ಒಗ್ಗಟ್ಟಿನ ಮಂತ್ರಕ್ಕೆ ಸಿಕ್ಕಿದ ಫ‌ಲ. ಮುಂದಿನ ವಿಧಾನಸಭಾ ಚುನಾವಣೆ ಫ‌ಲಿತಾಂಶದ ದಿಕ್ಸೂಚಿ. ಈ ಫ‌ಲಿತಾಂಶವು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಬೂಸ್ಟರ್‌ ಡೋಸ್‌ ಸಿಕ್ಕಿದಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನೂ ಇದೇ ಮಾದರಿಯಲ್ಲಿ ಎದುರಿಸುತ್ತೇವೆ. ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಬೇಲೂರಿನಲ್ಲಿ ಜೂ.21ರಂದು ನವ ಸಂಕಲ್ಪ ಚಿಂತನಾ ಶಿಬಿರ ನಡೆಯುತ್ತಿದ್ದು, ಹಾಸನ ಜಿಲ್ಲಾ ಉಸ್ತುವಾರಿ ಡಿ.ಕೆ.ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪಾಲ್ಗೊಳ್ಳುವವರು ಹಾಸನ ಜಿಲ್ಲೆಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನೂ ಸಿದ್ಧಪಡಿಸುವೆವು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next