Advertisement

ಟ್ವೀಟ್‌ನಲ್ಲಿ ನಾಯಕರು, ಪಕ್ಷಗಳ ಕುಟುಕು

06:25 AM Jan 16, 2019 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಮಿಸ್ಟರ್‌ ಸಾಫ್ ನಿಯತ್‌’ ಎಂದು ಸಂಬೋಧಿಸಿ ಮಾಡಿರುವ ಟ್ವೀಟ್‌ಗೆ ರಾಜ್ಯ ಬಿಜೆಪಿ ಸೇರಿದಂತೆ ಹಲವು ಬಿಜೆಪಿ ನಾಯಕರು ಟ್ವೀಟ್‌ನಲ್ಲೇ ಕುಟುಕಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿ ಟ್ವೀಟ್‌ ಮಾಡಿರುವ ಬಿಜೆಪಿ ಕರ್ನಾಟಕ, “ಕರ್ನಾಟಕದ ಜನತೆಯಿಂದ ತಿರಸ್ಕೃತಗೊಂಡ ಬಳಿಕವೂ ನೀವು ಸರ್ಕಾರ ರಚಿಸಿದ್ದು, ನಾಚಿಕೆಗೇಡಿನ ಸಂಗತಿ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬಾರದು ಎಂದು ನೀವೇ ಬಯಸಿದ್ದೀರಿ. ಹಾಗಾಗಿ ಮೊದಲು ನೀವು ನಿಮ್ಮ ಸರ್ಕಾರದ ಬಗ್ಗೆ ಸ್ವಲ ನಿಯತ್ತು ಹೊಂದಿರಬೇಕು’ ಎಂದು ಕುಟುಕಿದೆ.

ಹಾಗೆಯೇ, “ನಿಮ್ಮ ಅಪವಿತ್ರ ಮೈತ್ರಿ ಸರ್ಕಾರವು ನಿಯತ್ತು ಹಾಗೂ ವಿಕಾಸದ ಕೊರತೆಯ ಪರಿಣಾಮವಾಗಿ ದುರ್ಬಲವಾಗಿದೆ. ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಹಾಗೂ ಮೋದಿಯವರನ್ನು ಟೀಕಿಸುವುದನ್ನು ನಿಲ್ಲಿಸಿ. ನಿಮ್ಮ ದುರಾಸೆಯಿಂದಾಗಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ದುರ್ಬಲವಾಗಿದೆ’ ಎಂದು ಕಾಲೆಳೆದಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಕರ್ನಾಟಕಕ್ಕೆ ಉತ್ತಮ ಆಡಳಿತ ಹಾಗೂ ಸುಸ್ಥಿರ ಸರ್ಕಾರ ನೀಡುವಲ್ಲಿ ಕಾಂಗ್ರೆಸ್‌ ನಾಯಕತ್ವ ವಿಫ‌ಲವಾಗಿದೆ. ಇದೀಗ ಬಿಜೆಪಿಯ ಮೇಲೆ ಆರೋಪ ಹೊರಿಸಲಾರಂಭಿಸಿದ್ದಾರೆ. ಬಿಜೆಪಿಯು ಯಾವುದೇ ಆಟ ವಾಡಲು ಸಿದ್ಧವಿಲ್ಲ. ಸಂಪೂರ್ಣ ಆಟ ಕಾಂಗ್ರೆಸ್‌ನದ್ದೆ! ಎಂದು ಟ್ವೀಟ್‌ ಮಾಡಿದ್ದಾರೆ.

ಶಾಸಕ ಎಸ್‌.ಸುರೇಶ್‌ ಕುಮಾರ್‌ ಸಹ ಸರಣಿ ಟ್ವೀಟ್‌ ಮಾಡಿದ್ದಾರೆ. “ಹೌದು, ಇದು “ಸ್ವ ವಿಕಾಸ’ಕ್ಕಾಗಿ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರ “ಸಾಚಾ ನಿಯತ್ತು’ ಎಂದು ಕಾಲೆಳೆದಿದ್ದಾರೆ. ಹಾಗೆಯೇ “ಸಿದ್ದರಾಮಯ್ಯನವರು ಅಂದು ತಮ್ಮ “ಸ್ವಂತ ವಿಕಾಸ’ಕ್ಕಾಗಿ ತನ್ನನ್ನು ಬೆಳೆಸಿದ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಜಿಗಿದ್ದು, ಯಾವ ನಿಯತ್ತು? ಯಾವ ಗಂಧಾ ರಾಜಕೀಯ?’ ಎಂದು ಪ್ರಶ್ನಿಸಿದ್ದಾರೆ. 

Advertisement

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, “ಕಾಂಗ್ರೆಸ್‌ ನಾಯಕರ ಹತಾಶೆಯ ಹೇಳಿಕೆಗಳು ಅವರ ಮೈಪರಚಿಕೊಳ್ಳುವ ಪರಿಸ್ಥಿತಿಯನ್ನು ತೋರಿಸುತ್ತಿದೆ. ನಿಮ್ಮ ಮನೆಯ ಜವಾಬ್ದಾರಿ ನಿಮ್ಮದು. ಅದು ಬಿಟ್ಯಾಕೆ ಈ ಅಸಂಬದ್ಧ ಮಾತು? ನಮ್ಮ ಪ್ರಧಾನಿ ನಮ್ಮ ಹೆಮ್ಮೆ. ಹೌದು ಅವರೇ ನಮ್ಮ ಚೌಕಿದಾರ. ಅವರು ಕೈಗೊಂಬೆಯಲ್ಲ. ಆಗ 10 ವರ್ಷ ಕೇಂದ್ರದಲ್ಲೊಂದು ಕೈಗೊಂಬೆ, ಈಗ ಕರ್ನಾಟಕದಲ್ಲಿ ಹೊಸ ಕೈಗೊಂಬೆ’ ಎಂದು ವ್ಯಂಗ್ಯವಾಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಕೂಡ ಕುಮಾರಸ್ವಾಮಿಯವರ ವಿರುದ್ಧ ಟ್ವೀಟ್‌ನಲ್ಲಿ ಕುಟುಕಿದ್ದಾರೆ. “ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಅಸಮಾಧಾನ ಹಾಗೂ ಒಳಜಗಳ ಇದೀಗ ಸಾರ್ವಜನಿಕವಾಗಿ ಬಹಿರಂಗವಾಗುತ್ತಿದೆ ಕುಟುಕಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಈ ಹಿಂದೆ ಬಿಜೆಪಿ ಶಾಸಕ ಸುಭಾಷ್‌ ಗುತ್ತೇದಾರ್‌ ಅವರಿಗೆ ಹಣ ಹಾಗೂ ಸಚಿವ ಸ್ಥಾನದ ಆಮಿಷ ತೋರಿ ಸೆಳೆಯಲು ಯತ್ನಿಸಿದ್ದರು. ಪ್ರಜ್ವಲ್‌ ರೇವಣ್ಣ ಅವರು ಈ ಹಿಂದೆ ಜೆಡಿಎಸ್‌ ಸೂಟ್‌ಕೇಟ್‌ ಪಾರ್ಟಿ ಎಂದು ಹೇಳಿದ್ದರು. ಜೆಡಿಎಸ್‌ನಲ್ಲಿ ಹಣವಿಲ್ಲದವರಿಗೆ ಬೆಲೆಯಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಾಂಗ್ರೆಸ್‌- ಬಿಜೆಪಿ ಟ್ವೀಟ್‌ ಟೀಕೆ: ಸಂವಿಧಾನ ಬದಲಿಸ ಹೊರಟವರಿಗೆ ಅದರ ಆಶಯಗಳ ಮೇಲೆ ನಂಬಿಕೆ ಇಲ್ಲ. ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರ ಬೀಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಿತೂರಿ ನಡೆಸಿದ್ದಾರೆ. ಬಿಜೆಪಿ ರಾಜ್ಯ ನಾಯಕರಿಗೆ ರಫೇಲ್‌ ಹಗರಣದ ಹಣ ಬಂದಿದೆಯೇ? ಇದರಲ್ಲೇ ಶಾಸಕರ ಖರೀದಿ ವಿಫ‌ಲ ಪ್ರಯತ್ನ ಸಾಗಿದೆಯೇ? ಪ್ರಜಾಪ್ರಭುತ್ವ ಹಾಳುಗೆಡುವ ಬಿಜೆಪಿ ಯತ್ನ ವಿಫ‌ಲವಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಇದಕ್ಕೆ ಟ್ವೀಟ್‌ನಲ್ಲೇ ಪ್ರತ್ಯುತ್ತರ ನಿಡಿರುವ ಬಿಜೆಪಿ ಕರ್ನಾಟಕ, “ರಾಜ್ಯದ ಜನತೆ ನಿಮ್ಮನ್ನು ತಿರಸ್ಕರಿಸಿದ್ದರೂ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಜೆಡಿಎಸ್‌ ಜೊತೆ ಸೇರಿ ಕಿಚಡಿ ಸರ್ಕಾರ ರಚಿಸಿದಾಗ ನಿಮಗೆ ಪ್ರಜಾಪ್ರಭುತ್ವದ ನೆನಪು ಏಕೆ ಆಗಲಿಲ್ಲ’ ಎಂದು ಪ್ರಶ್ನಿಸಿದ್ದಾರೆ. “ನೀವು ಕುತಂತ್ರದಿಂದ ನಮ್ಮ ಶಾಸಕರನ್ನು ಸೆಳೆಯಲು ಮುಂದಾಗಿದ್ದು, ನಿಮ್ಮ ನಾಯಕರ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ. ನಿಮ್ಮ ಆಮಿಷದ ಬಲೆಯಿಂದ ತಪ್ಪಿಸಿಕೊಳ್ಳಲು ನಮ್ಮ ಶಾಸಕರೆಲ್ಲರೂ ತಾವಾಗಿಯೇ ಒಟ್ಟಿಗೆ ಹೋಟೆಲ್‌ನಲ್ಲಿ ಇದ್ದಾರೆ’ ಎಂದು ಕುಟುಕಿದೆ.

ಸಿದ್ದರಾಮಯ್ಯ ಟಾಂಗ್: ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ರಾಜಕೀಯ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಟಾಂಗ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next