Advertisement

ಕಾನೂನು ಮುಂದೆ ಎಲ್ಲರೂ ಸಮಾನರು

12:39 PM Dec 11, 2018 | |

ಯಾದಗಿರಿ: ಶಿಕ್ಷಣದ ಕೊರತೆ ಮತ್ತು ಆರ್ಥಿಕ ದುರ್ಬಲತೆಯೇ ಮಾನವ ಹಕ್ಕುಗಳ ಉಲ್ಲಂಘನೆಗೆ ಮುಖ್ಯ ಕಾರಣವಾಗುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ. ತಾಳಿಕೋಟಿ ಕಳವಳ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಮುಂದೆ ಎಲ್ಲರೂ ಸಮಾನರು.
ನಮ್ಮ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅದರಂತೆ ನಾವು ಕೂಡ ಬೇರೆಯವರ ಹಕ್ಕು ಉಲ್ಲಂಘನೆ ಮಾಡಬಾರದು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವ ಹಕ್ಕು ಇದೆ ಎಂದರು.

ಎಲ್ಲಾ ಸ್ಥಳಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಕಂಡು ಬರುತ್ತಿವೆ. ಅದರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣವಂತರಾದಾಗ ಬಾಲ ಕಾರ್ಮಿಕ ಪದ್ಧತಿಯನ್ನು ಶಿಕ್ಷಣದಿಂದ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದವರು, ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆ ಹೊತ್ತ ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯಿಂದ ನಿರ್ವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಕೆ. ಸಾಲಮಂಟಪಿ ಮಾತನಾಡಿ, ಅಧಿಕಾರಿ ವರ್ಗವು ಸಾರ್ವಜನಿಕರ ಸೇವೆ ಮಾಡುವುದು ದೇವರು ನೀಡಿದ ಅವಕಾಶವೆಂದು ತಿಳಿದು ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳಿಗೆ ತಮ್ಮ ಕೆಲಸಕ್ಕೆ ತಕ್ಕ ವೇತನವನ್ನು ಸರ್ಕಾರ ನೀಡುತ್ತದೆ. ಇದರಲ್ಲಿ ನೆಮ್ಮದಿ ಜೀವನ ನಡೆಸಬಹುದು. ಕಾರಣ ಅನ್ಯ ಮಾರ್ಗಗಳಿಂದ ಹಣಗಳಿಕೆಗೆ ಮುಂದಾಗಬಾರದು. ಈ ಮೂಲಕ ಮಾನವ ಹಕ್ಕುಗಳ ರಕ್ಷಣೆಯ ಜೊತೆಗೆ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಹುಟ್ಟುವ ಮುನ್ನವೇ ಭ್ರೂಣಹತ್ಯೆಯಂತಹ ಹೀನಕೃತ್ಯಗಳು ನಡೆಯುತ್ತಿರುತ್ತವೆ. ಆದ್ದರಿಂದ ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಜೀವನ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಹತ್ತಿ ಕೀಳುವ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಹೊಲಕ್ಕೆ ಕಳುಹಿಸುತ್ತಾರೆ.

Advertisement

ಇದನ್ನು ಟ್ರಾನ್ಸ್‌ಪೊರ್ಟ್‌ ಕಾಯ್ದೆ ಮೂಲಕ ತಡೆಯಬಹುದಾಗಿದೆ. ಮಕ್ಕಳ ಸಮಸ್ಯೆಗಳನ್ನು ನಿವಾರಿಸಲು ಗ್ರಾಮ ಸಭೆಗಳನ್ನು ಆಯೋಜಿಸಬೇಕಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡುವಾಗ ಪ್ರಿಂಟಿಂಗ್‌ ಪ್ರಸ್‌ನವರು ಕಡ್ಡಾಯವಾಗಿ ವಧು-ವರರ ವಯಸ್ಸನ್ನು ಪರಿಶೀಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು. 

ಶುಭಂ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಗುರುಪ್ರಸಾದ ವೈದ್ಯ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ, ಹೆಚ್ಚುವರಿ ಸಿವಿಲ್‌ ನ್ಯಾಯಧೀಶರು ಮತ್ತು ಜೆಎಂಎಫ್‌ಸಿ ಕಾಡಪ್ಪ ಹುಕ್ಕೇರಿ, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ವಸಂತರಾವ್‌ ಕುಲಕರ್ಣಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀನಿವಾಸರಾವ್‌ ಕುಲಕರ್ಣಿ ಇದ್ದರು.

ಡಿವೈಎಸ್‌ಪಿ ಯು. ಶರಣಪ್ಪ, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್‌, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಶಾಂತಪ್ಪ ಎಸ್‌. ಖಾನಹಳ್ಳಿ ಸೇರಿದಂತೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next