Advertisement

ದ ಲಾಸ್ಟ್‌ ಶಿಫ್ಟ್

02:20 PM Apr 24, 2021 | Team Udayavani |

ಇದೇ ನನ್ನ ಲಾಸ್ಟ್‌ ಶಿಫ್ಟ್. ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ, ಟೈ ಸರಿ ಮಾಡಿಕೊಂಡು ತಲೆಯ ಮೇಲೆ ಹ್ಯಾಟ್‌ ಏರಿಸಿಕೊಂಡು, ಟ್ಯಾಕ್ಸಿಯತ್ತ ಹೊರಡುವಾಗ ಸುಲೇಮಾನ್‌ ತನ್ನ ಮನಸಿನಲ್ಲಿ ಗಟ್ಟಿಯಾಗಿ ಹೇಳಿಕೊಂಡ.

Advertisement

ಮೂವತ್ತೈದು ವರ್ಷ ಗಳ ಹಿಂದೆ ಹೆಂಡತಿ ಮತ್ತು ಪುಟ್ಟ ಮಗುವಿನ ಜತೆ ದೋಣಿಯೊಂದನ್ನು ಏರಿ ಸೊಮಾಲಿಯಾದಿಂದ ಇಂಗ್ಲೆಂಡ್‌ನ‌ವರೆಗೆ ತೇಲಿಬಂದಾಗ ಬದುಕಿ ಉಳಿದದ್ದೇ ಸಾಕೆನಿಸಿ ಉಳಿದ ಕನಸುಗಳೆಲ್ಲ ಚದುರಿ ಹೋಗಿದ್ದವು.

ಇಲ್ಲಿ ಲೀಗಲ್‌ ಆಗಿ ಆಶ್ರಯ ಸಿಗುವವರೆಗೆ ಹಾಗೂ- ಹೀಗೂ ಜೀವನ ದೂಡಿದ್ದ. ಸಿಕ್ಕ ಅನಂತರ ಕೈ ಹಿಡಿದ ಟ್ಯಾಕ್ಸಿ ಡ್ರೈವಿಂಗ್‌ ಅವನ ಬದುಕನ್ನು ಬೆಳೆಸಿತ್ತು. ಎಲ್ಲೋ ನೆನಪಿನ ದೂರದಲ್ಲಿ ಅವನು ಸೊಮಾಲಿಯಾದಲ್ಲಿ ಕಲಿತಿದ್ದರೂ ಇಂಗ್ಲೆಂಡ್‌ನ‌ಲ್ಲಿ ಮುಂದುವರಿಸಲಾಗದ ಡಾಕ್ಟರಿಕೆ ನೆರಳಾಗಿ ಆಗಾಗ ಕಾಡುತ್ತಿತ್ತು, ಅಷ್ಟೇ.

ಇವೆಲ್ಲ ಮೆಲುಕು ಹಾಕುತ್ತ, ಮೂರು ವರ್ಷಗಳ ಹಿಂದೆ ಕ್ಯಾನ್ಸರೊಂದು ದೂರಮಾಡುವವರೆಗೂ ಜತೆಗೆ ಬಲವಾಗಿದ್ದ ಹೆಂಡತಿಯನ್ನು ನೆನೆಯುತ್ತಾ, ಟ್ಯಾಕ್ಸಿಯ ಆ್ಯಪ್‌ ತೋರಿಸುತ್ತಿದ್ದ ದಿಕ್ಕಿನೆಡೆಗೆ ಓಡಿಸಿದ.ಬೆಳಗ್ಗಿನ 5 ಗಂಟೆಯಷ್ಟೇ ಆಗ. ಹೊರಗಿನ್ನೂ ಕತ್ತಲು. ಇನ್ನೂ ಚಳಿಗಾಲದ ಫೆಬ್ರವರಿಯ ಮೊದಲನೇ ವಾರದ ಕೊನೆಯಾದ್ದರಿಂದ ಬೆಳಕಾಗುವುದು 7ರ ಅನಂತರವೇ.

ಟ್ಯಾಕ್ಸಿ ಹತ್ತಿದ್ದು 40ರ ಆಸುಪಾಸಿನ ಗಂಡಸು ಮತ್ತವನ ವೀಲ್ ಚೇರ್‌. ಆತ ಮೂಗಿಗೆ ಹಾಕಿದ್ದ ಆಕ್ಸಿಜೆನ್‌ ನಳಿಗೆ, ಅವನ ನೀರು ತುಂಬಿದ ಮುಖ, ಮತ್ತು ಅವನು ಉಸಿರಾಡುತ್ತಿದ್ದ ರೀತಿ ನೋಡಿ, ಇವನದು ಹಾರ್ಟ್‌ ಅಥವಾ ಕಿಡ್ನಿ ಫೇಲ್‌ ಕೇಸು ಇರಬೇಕು ಅನ್ನಿಸಿತು ಸುಲೇಮಾನನಿಗೆ. ಟ್ಯಾಕ್ಸಿ ಆ್ಯಪ್‌ ದೊಡ್ಡ ಆಸ್ಪತ್ರೆಯೊಂದರ ದಿಕ್ಕು ತೋರಿಸುತ್ತಿತ್ತು.

Advertisement

ತನ್ನ ಗಿರಾಕಿಗೆ ಸೀಟ್‌ ಬೆಲ್ಟ್ ಹಾಕಿಕೊಳ್ಳಲು ನೆನಪಿಸಿ, ಅವನು ಹಾಕಿಕೊಂಡಾಕ್ಷಣ ಟ್ಯಾಕ್ಸಿ ಹೊರಡಿಸಿದ.ಮೂವತ್ತು ನಿಮಿಷದ ದಾರಿ ಟ್ರಾಫಿಕ್ಕಿಲ್ಲದ ಕಾರಣ ಬೇಗನೆ ಸರಿದಿತ್ತು. ಆ ಗಿರಾಕಿಯ ಗೊರಕೆ ಮತ್ತು ಆಗಾಗ ಸುಲೇಮಾನನ ಫೋನು ರಿಂಗಾಗಿದ್ದು ಬಿಟ್ಟರೆ ಬೇರಾವ ಶಬ್ದವೂ ಇರಲಿಲ್ಲ. ಎಪ್ಪತ್ತು ವರ್ಷಗಳಿಂದ ಬಿಡುವಿಲ್ಲದೆ ಉರುಳುತ್ತಿರುವ ಬದುಕಿನ ಚಕ್ರದ ನೆನಪಿನ ಸುರುಳಿ ಎಳೆ-ಎಳೆಯಾಗಿ ತೇಲುತ್ತ ಅವನನ್ನು ಎಚ್ಚರ ವಿಟ್ಟಿದ್ದವು.ಆಸ್ಪತ್ರೆಯ ರಿಸೆಪ್ಷನ್‌ನಲ್ಲಿ ಆ ಪೇಶೆಂಟ್‌ಗೆ ಕಾಯುತ್ತಿದ್ದ ಟ್ರಾನ್ಸ್-ಪ್ಲಾಂಟ್‌ ನರ್ಸ್‌ಗೆ ಅವನನ್ನು ಒಪ್ಪಿಸಿದ. ಅಲ್ಲಿಂದ ಹೊರಬರುವಾಗ ಅಲ್ಲಿನ ದೊಡ್ಡ ಗೋಡೆಯೊಂದರ ಮೇಲೆ ಹಾಕಿದ್ದ ಡಾಕ್ಟರ್‌ಗಳ ಹೆಸರು ಮತ್ತು ಅವರ ಪರಿಣತಿಯ ಪಟ್ಟಿಯತ್ತ ಕಣ್ಣು ಹಾಯಿಸಿದ. ಹಿಂದಿನ ನೆನಪುಗಳು ಮತ್ತೆ ತೇಲಿಬಂದವು.

ನಮ್ಮ ಕನಸುಗಳೆಲ್ಲ ನಮ್ಮಿಂದಲೇ ಸಾಕಾರವಾಗಬೇಕಂತೇನೂ ಇಲ್ಲವಲ್ಲ ಎಂದು ಸಮಾಧಾನ ತಂದುಕೊಂಡ.ಅಷ್ಟರಲ್ಲಿ ಫೋನು ಮತ್ತೆ ರಿಂಗಾಯಿತು. ಅರ್ಧ ಗಂಟೆಯಿಂದ ಮೂರ್ನಾಲ್ಕು ಬಾರಿ ಬಂದಿದ್ದ ನಂಬರಿನಿಂದ ಮತ್ತೆ ಫೋನ್‌ ಬಂದಿತ್ತು. “ಹಲೋ’ ಎಂದ. ಅದೇ ಆಸ್ಪತ್ರೆಯಿಂದಲೇ ಬಂದ ಫೋನದು. ಅವರು ಹೇಳುತ್ತಿದ್ದ ಮಾತುಗಳು ಕೇಳಿಸದಷ್ಟು ಕಣ್ಣು ಕತ್ತಲೆ ಕಟ್ಟಿ, ತಲೆಸುತ್ತಿ ಕುಸಿದು ಬಿದ್ದ.
ವಾರದ ಅನಂತರ

ಶುಕ್ರವಾರದ ನಮಾಜಿಗೆ ಸೇರಿದ್ದ ಜನರಿಗೆ ಸುಲೇಮಾನ್‌ ಪಾಂಫ್ಲೆಟ್‌ ಒಂದನ್ನು ಹಂಚುತ್ತಿದ್ದ. ಅದರಲ್ಲಿ ಹೀಗೆ ಬರೆದಿತ್ತು . her of Dr Ali, consultant neurosurgeon (born 10th Jan 1983, died 7th February 2020). I request you to register for organ donation. A heart filled with love never stops beating.

(ನಾನು ಟ್ಯಾಕ್ಸಿ ಡ್ರೈವರ್‌ ಸುಲೇಮಾನ್‌, ಡಾ| ಅಲಿ, ಕನ್ಸಲ್ಟೆಂಟ್‌ ನ್ಯೂರೊಸರ್ಜನ್‌ (ಜನನ: 10/01/1983, ಮರಣ: 07/02/2020) ಅವನ ಹೆಮ್ಮೆಯ ಅಪ್ಪ. ದಯವಿಟ್ಟು ಅಂಗಾಂಗ ದಾನಕ್ಕೆ ನಿಮ್ಮ ಹೆಸರು ನೋಂದಾ ಯಿ ಸಿ ಕೊಳ್ಳಿ. ಪ್ರೀತಿ ತುಂಬಿದ ಹೃದಯ ಎಂದೂ ನಿಲ್ಲದು.)ಅಲ್ಲಿ ಸೇರಿದ್ದ ಜನ ಅವರಲ್ಲಾ ಪಿಸುಪಿಸು ಮಾತಾಡಿಕೊಳ್ಳುತ್ತಿದ್ದರು.

ವಾರದ ಹಿಂದೆ ಸುಲೇಮಾನ್‌ನ ಮಗನಿಗೆ ಒಂದು ಅರ್ಜೆಂಟ್‌ ಕೇಸ್‌ ಇದ್ದು ದ ರಿಂದ ಆಸ್ಪತ್ರೆಗೆ ಮಧ್ಯ ರಾತ್ರಿ ಕರೆದರಂತೆ. ಅವನು ಹೋಗುತ್ತಿದ್ದ ಟ್ಯಾಕ್ಸಿ ಆಕ್ಸಿಡೆಂಟಾಗಿ, ಹಿಂದಿನ ಸೀಟಿನಲ್ಲಿ ಕುಳಿತಿದ್ದವನ ತಲೆಗೆ ಪೆಟ್ಟಾಗಿ, ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಉಳಿಯಲಿಲ್ಲವಂತೆ. ಅವನು ಸೀಟ್ ಬೆಲ್ಟ್ ಹಾಕಿದ್ದರೆ ಉಳಿಯುತ್ತಿದ್ದನೇನೋ. ಅವನ ಹಾರ್ಟ್‌ ಮತ್ತೆ ಕಿಡ್ನಿ ದಾನ ಮಾಡಿದ್ದಾರಂತೆ. ಹೀಗೆ ತಾವೇ ಕಂಡವರಂತೆ ಆಗಿದ್ದನ್ನು ಹೇಳಿಕೊಳ್ಳುತ್ತಿದ್ದರು. ಹೊರಗಡೆ, ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯುತ್ತಿದ ಸುಲೇಮಾನ್‌ನ ಟ್ಯಾಕ್ಸಿ ಮುಂದಿನ ಶಿಫ್ಟಿಗೆ ಕಾಯುತ್ತಿತ್ತು.

ಮುರಳಿ ಹತ್ವಾರ್‌,  ಲಂಡನ್‌

 

Advertisement

Udayavani is now on Telegram. Click here to join our channel and stay updated with the latest news.

Next