Advertisement
ಅಭ್ಯರ್ಥಿಗಳು ಗುರುವಾರ ಮನೆ-ಮನೆಗೆ ತೆರಳಿ ಮತದಾರರಿಗೆ ಮತ ನೀಡಿ ಬೆಂಬಲಿಸುವಂತೆ ವಿನಂತಿಸಿದ್ದಾರೆ. ಮತ ಬೇಟೆಗಾಗಿ ಇಲ್ಲಿಯವರೆಗೆ ಬಹಿರಂಗ ಪ್ರಚಾರ, ರೋಡ್ ಶೋ ನಡೆಸಿದ ಘಟಾನುಘಟಿ ನಾಯಕರು ಮನೆ-ಮನೆ ಕದ ತಟ್ಟಿ ಮತಯಾಚನೆ ಮಾಡುತ್ತಿದ್ದಾರೆ. ಹೀಗಾಗಿ ಈ ಉಪ ಚುನಾವಣೆ ಕಾವು ರಂಗೇರುತ್ತಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ಪ್ರತಿಷ್ಠೆಯಾಗಿದೆ.
Related Articles
Advertisement
ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಪ್ರತಿಷ್ಠೆ ಕಣವಾದ ಉಪ ಚುನಾವಣೆಯಲ್ಲಿ ಗೆಲುವಿಗೆ ಮೂರೂ ಪಕ್ಷಗಳು ಟೊಂಕ ಕಟ್ಟಿವೆ. ಒಂದು ತಿಂಗಳಿಂದ ಹಳ್ಳಿ-ಹಳ್ಳಿ ಸುತ್ತಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಮತ ಕೇಳಿದ್ದಾರೆ. ಬಿಜೆಪಿ ಪರ ನಟಿ ತಾರಾ, ಶೃತಿ ಪಾಲ್ಗೊಂಡು ಪ್ರಚಾರ ಅಖಾಡಕ್ಕೆ ಮೆರಗು ತಂದಿದ್ದರು. ರಾಜಕೀಯ ಮುಖಂಡರ ಮಾತಿನ ಸಮರ, ಕಾರ್ಯಕರ್ತರ ಉತ್ಸಾಹದಿಂದ ಕಳೆಗಟ್ಟಿದ್ದ ಬಹಿರಂಗ ಪ್ರಚಾರಕ್ಕೆ ಚುನಾವಣೆ ಆಯೋಗ ಶುಭಂ ಹೇಳಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್; ಬಾಲಿವುಡ್ ಅನ್ನು ಮುಂಬಯಿನಿಂದ ಸ್ಥಳಾಂತರಿಸಲು ಬಿಜೆಪಿ ಸಂಚು ?
ಶನಿವಾರ ಮತದಾನ ನಡೆಯಲಿದ್ದು, ಶುಕ್ರವಾರ ಕೊನೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ತಮ್ಮೆಲ್ಲ ಸಾಮರ್ಥ್ಯ ಪಣಕ್ಕಿಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಪುನಃ ಮೂರನೇ ಬಾರಿ ಆಯ್ಕೆಗೆ ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪ್ರಥಮ ಬಾರಿಗೆ ಆಯ್ಕೆಯಾಗುವ ಮೂಲಕ ಶಾಸಕರಾಗಿದ್ದ ತಂದೆ ದಿ|ಎಂ.ಸಿ. ಮನಗೂಳಿ ಅವರ ಸ್ಥಾನ ತುಂಬಲು ಯತ್ನಿಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪ್ರಥಮ ಬಾರಿಗೆ ಆಯ್ಕೆಯಾಗಿ ಕ್ಷೇತ್ರದ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಉಪ ಚುನಾವಣೆ ಎದುರಾಗಿದೆ. ಕ್ಷೇತ್ರದ ಮತದಾರ ಪ್ರಭುಗಳು ಅ.30ರಂದು ಯಾರಿಗೆ ಆಶೀರ್ವದಿಸುತ್ತಾರೋ ಅವರಿಗೆ ನ.2ರಂದು ವಿಜಯಲಕ್ಷ್ಮೀ ಒಲಿಯುತ್ತಾಳೆ. ಈ ಕುರಿತೂ ಲೆಕ್ಕಾಚಾರ ಕ್ಷೇತ್ರದಲ್ಲಿ ಶುರುವಾಗಿದೆ.
ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರದ ಸಾಧನೆ, ನನ್ನ ಅಧಿಕಾರವಧಿಯಲ್ಲಿ ಮಾಡಿದ ಕ್ಷೇತ್ರದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಪಕ್ಷದ ಮುಖಂಡರು ಕ್ಷೇತ್ರದಲ್ಲಿ ನನ್ನ ಪರ ಪ್ರಚಾರ ಮಾಡಿ ಮತಯಾಚಿಸಿದ್ದರಿಂದ ವ್ಯಾಪಕ ಬೆಂಬಲ ಸಿಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಮತದಾರ ಪ್ರಭುಗಳ ಆಶೀರ್ವಾದದಿಂದ ನನ್ನ ಗೆಲುವು ನಿಶ್ಚಿತ. -ರಮೇಶ ಭೂಸನೂರ, ಬಿಜೆಪಿ ಅಭ್ಯರ್ಥಿ
ಪಕ್ಷದ ಮುಖಂಡರು ಹಳ್ಳಿ ಹಳ್ಳಿಗಳಲ್ಲಿ ಮತಯಾಚನೆಗೆ ಹೋದ ಸಂದರ್ಭ ನನ್ನ ತಂದೆ, ಶಾಸಕರಾಗಿದ್ದ ದಿ| ಎಂ.ಸಿ. ಮನಗೂಳಿ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಕಾರ್ಯ ನೆನಪಿಸಿಕೊಂಡು ಕಾಂಗ್ರೆಸ್‌ಗೆ ಮತ ನೀಡಿ ಅಶೋಕನನ್ನು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಕಾರ್ಯಕ್ರಮಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. -ಅಶೋಕ ಮನಗೂಳಿ,ಕಾಂಗ್ರೆಸ್ ಅಭ್ಯರ್ಥಿ
ನಾನು ರಾಜಕೀಯಕ್ಕೆ ಹೊಸಬಳಾಗಿದ್ದು ಕ್ಷೇತ್ರದಲ್ಲಿ ಮನೆ-ಮನೆಗೆ ಹೋಗಿ ಮತಯಾಚಿಸಿದ್ದೇನೆ. ಕ್ಷೇತ್ರದ ಜನತೆ ತಮ್ಮ ಮನೆ ಮಗಳು ಎಂದು ಹಾರೈಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆಗಳನ್ನು ಜನತೆ ಮರೆತಿಲ್ಲ. ಜನತೆ ಆಶೀರ್ವಾದ ನನ್ನ ಮೇಲಿದೆ. ನಾನು ಕ್ಷೇತ್ರದ ಮೊದಲ ಶಾಸಕಿಯಾಗುತ್ತೇನೆ. -ನಾಜಿಯಾ ಅಂಗಡಿ, ಜೆಡಿಎಸ್ ಅಭ್ಯರ್ಥಿ
-ರಮೇಶ ಪೂಜಾರ