Advertisement

ಪರಭಾಷಿಕರು ಕನ್ನಡ ಕಲಿತರೆ ಭಾಷೆ ಉಳಿವು

04:09 PM Mar 04, 2018 | Team Udayavani |

ರಾಯಚೂರು: ಬೇರೆ ರಾಜ್ಯಗಳಿಂದ ಬಂದು ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ಕಲಿತಾಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಆಂಜನೇಯ ಜಾಲಿಬೆಂಚಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಮಟಮಾರಿಯ ಮಹಾಂತೇಶ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ನಾಲ್ಕು ಸಾವಿರ ಭಾಷೆಗಳಿದ್ದು, ಅದರಲ್ಲಿ ಕನ್ನಡವೂ ಒಂದು. ಅದನ್ನು ನಮ್ಮ ಹಿರಿಯರು ಕಸ್ತೂರಿ ಎಂದು ಬಣ್ಣಿಸಿದ್ದಾರೆ ಆದರೆ, ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನ ರಾಜ್ಯಕ್ಕೆ ಉದ್ಯೋಗವರಸಿ ಬರುತ್ತಾರೆ. ಬರುವವರಿಗೆ ಯಾವುದೇ ಆಕ್ಷೇಪವಿಲ್ಲ. ಅದಕ್ಕೆ ಸಂವಿಧಾನವೇ ಅವಕಾಶ ನೀಡಿದೆ. ಆದರೆ, ಇಲ್ಲಿದ್ದ ಮೇಲೆ ಕನ್ನಡ ಭಾಷೆಯಲ್ಲಿ ಸಂವಹನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಬಂಡಾಯ ಸಾಹಿತ್ಯ ಮತ್ತು ಸಂಘಟನೆಯಲ್ಲಿ ದಲಿತರ ಹೋರಾಟಗಳು ಸಾಕಷ್ಟು ಪಾತ್ರ ವಹಿಸಿವೆ. ಹೋರಾಟದ ಹಾಡುಗಳು ಬಂಡಾಯ ಸಾಹಿತ್ಯಕ್ಕೆ ಪ್ರೇರಣೆಯಾಗಿದೆ. 80ರ ದಶಕದಲ್ಲಿ ಬಂಡಾಯ ಸಾಹಿತ್ಯ ಹುಟ್ಟಿಗೆ ಕಾರಣರಾದ ರಾಯಚೂರು, ಉರ್ದು ಸಾಹಿತ್ಯದ ಜೀವಾಳವಾದ ಗಜಲ್‌ ಕಾವ್ಯವನ್ನೂ ಕನ್ನಡದಲ್ಲಿ ರಚಿಸಲು ವೇದಿಕೆಯಾಯಿತು ಎಂದರು. 

ಕಲೆಯಲ್ಲೂ ಜಿಲ್ಲೆಗೆ ದೊಡ್ಡ ಹೆಸರಿದೆ. ಚಿತ್ರಕಲಾವಿದರಾದ ಶಂಕರರಾವ್‌, ಶಂಕರಗೌಡ ಬೆಟ್ಟದೂರು, ಹೀರಾಲಾಲ್‌, ಸುರೇಶ ವೈದ್ಯ,ಎಚ್‌.ಎಚ್‌.ಮ್ಯಾದಾರ,  ಚ್‌.ಎನ್‌.ಚಿತ್ರಗಾರ, ರಾಘವೇಂದ್ರ ಮಲ್ಕಾರಿ ಸೇರಿ ಅನೇಕ ಕಾಲಾವಿದರು ತಮ್ಮ ಸಾಧನೆ ಮೆರೆದಿದ್ದಾರೆ ಎಂದರು.  ದೇಶಕ್ಕೆ ಅನ್ನ ನೀಡುವ ರೈತ ಸಂಕಷ್ಟದಲ್ಲಿದ್ದಾನೆ. ಅವರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

Advertisement

 ಮೆರವಣಿಗೆ: ಸಮ್ಮೇಳನ ಉದ್ಘಾಟನೆಗೂ ಮುನ್ನ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಸಮ್ಮೇಳನದ ವೇದಿಕೆವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ತಾಪಂ ಇಒ ಪ್ರಾಣೇಶರಾವ್‌ ಮೆರವಣಿಗೆ ಉದ್ಘಾಟಿಸಿದರು.

ಸಮ್ಮೇಳನಾಧ್ಯಕ್ಷ ಆಂಜನೇಯ ಜಾಲಿಬೆಂಚಿ ಅವರಿಗೆ ತಾಲೂಕು ಕಸಾಪ ಅಧ್ಯಕ್ಷೆ ಗಿರಿಜಾ ಸಾಥ್‌ ನೀಡಿದರು. ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ಮಹಾರಾಜ್‌ ಕುರ್ಚಿ ಹಾಕಲಾಗಿತ್ತು. ಆದರೆ, ಮೆರವಣಿಗೆಯಲ್ಲಿ ಸಾರ್ವಜನಿಕರಿಗಿಂತ ಶಾಲಾ ಮಕ್ಕಳೇ ಹೆಚ್ಚಾಗಿ ಕಂಡುಬಂದರು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಅದಕ್ಕೂ ಮುಂಚೆ ಬೆಳಗ್ಗೆ ಶಾಲಾ ಆವರಣದಲ್ಲಿ ಕಸಾಪ ಧ್ವಜಾರೋಹಣ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next