Advertisement

World Democracy Day 2024: ಕರಾವಳಿಯಲ್ಲಿ ಸೆ.15ಕ್ಕೆ (ಇಂದು) ಬೃಹತ್‌ ಮಾನವ ಸರಪಳಿ ರಚನೆ

12:45 AM Sep 15, 2024 | Team Udayavani |

ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 130 ಕಿ.ಮೀ. ಉದ್ದದ ಮಾನವ ಸರಪಳಿ ರಚನೆಯಾಗಲಿದೆ.

Advertisement

ಮೂಲ್ಕಿ ತಾಲೂಕಿನ ಹೆಜಮಾಡಿ ಟೋಲ್‌ಗೇಟ್‌ನಿಂದ ಸುಳ್ಯ ತಾಲೂಕಿನ ಸಂಪಾಜೆ ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವನ ಸರಪಳಿ ರಚನೆಯಾಗಲಿದೆ. ಮೂಲ್ಕಿ – ಸುರತ್ಕಲ್‌ – ಬೈಕಂಪಾಡಿ – ನಂತೂರು – ಪಡೀಲ್‌ – ಬಿ.ಸಿ.ರೋಡು – ಪುತ್ತೂರು – ಸುಳ್ಯ ಮಾರ್ಗದಲ್ಲಿ ಮಾನವ ಸರಪಳಿ ಸಾಗಲಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ಅಂತಿಮ ಮಾಡಲಾಗಿದೆ.

ಅರ್ಧ ಗಂಟೆಯ ಕಾರ್ಯಕ್ರಮ
ಬೆಳಗ್ಗೆ 9.30ರಿಂದ 9.37ರ ವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು, 9.37ರಿಂದ 9.40ರ ವರೆಗೆ ನಾಡಗೀತೆ, 9.41ರಿಂದ 9.55ರ ವರೆಗೆ ಮುಖ್ಯ ಅತಿಥಿಗಳಿಂದ ಭಾಷಣ, 9.55ರಿಂದ 9.57ರ ವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು, 9.57ರಿಂದ 9.59ರ ವರೆಗೆ ಮಾನವ ಸರಪಳಿಯಲ್ಲಿ ಕೈಕೈ ಹಿಡಿದು ನಿಲ್ಲುವುದು, 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್‌, ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿಯನ್ನು ಕಳಚಲಾಗುತ್ತದೆ.

ವಿವಿಧ ಸಂಘ ಸಂಸ್ಥೆಗಳ ಸಹಕಾರ
ಸರಪಳಿ ರಚಿಸಲು ಸರಕಾರೇತರ ಸಂಸ್ಥೆಗಳು, ಸಾರ್ವಜನಿಕ ವಲಯ ಉದ್ಯಮಗಳು, ಖಾಸಗಿ ವಲಯ, ಸಾರ್ವಜನಿಕರು ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಹೆದ್ದಾರಿ ಹಾದು ಹೋಗುವ ವ್ಯಾಪ್ತಿಯ ಗ್ರಾಮ ಪಂಚಾಯತ್‌, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲೆಯ ಎಲ್ಲ ಜನಪ್ರತಿನಿ ಧಿಗಳು, ಸ್ವಸಹಾಯ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅ ಧಿಕಾರಿ ಸಿಬಂದಿ ಸಹಿತ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಅಧಿಕಾರಿಗಳ ನಿಯೋಜನೆ:
ಮಾನವ ಸರಪಳಿ ಹಾದುಹೋಗುವ ಹೆದ್ದಾರಿ ಉದ್ದಕ್ಕೂ ಪ್ರತಿ 100 ಮೀ. ಒಬ್ಬರಂತೆ ವಿಭಾಗ ಅಧಿಕಾರಿ, ಪ್ರತಿ 1 ಕಿ.ಮೀ.ಗೆ ಒಬ್ಬರಂತೆ ಪ್ರದೇಶ ಅಧಿಕಾರಿ, ಪ್ರತಿ 5 ಕಿ.ಮೀ. ಒಬ್ಬರಂತೆ ತಾಲೂಕು ಅಧಿಕಾರಿ ಅವರನ್ನು ನೇಮಿಸಲಾಗಿದೆ. ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷೆಯನ್ನು ಖಚಿತಪಡಿಸಲು ಪೊಲೀಸ್‌ ಸಿಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ರಸ್ತೆ ಬಳಕೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.

Advertisement

ಮಾನವ ಸರಪಳಿ ರಚನೆಯ ಜತೆಗೆ ಜಿಲ್ಲಾದ್ಯಂತ ಗಿಡ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಮಾನವ ಸರಪಳಿಯಲ್ಲಿ ಭಾಗವಹಿ
ಸುವ ಪ್ರತಿಯೊಬ್ಬರೂ ಎಕ್ಸ್‌, ಇನ್‌ಸ್ಟ್ರಾಗ್ರಾಂ, ಫೇಸ್‌ ಬುಕ್‌ನಲ್ಲಿ ಹ್ಯಾಶ್‌ಟ್ಯಾಗ್‌ #KarnatakaDemocracyDay2024 ಉಪಯೋಗಿಸಿ ಹಂಚಿಕೊಳ್ಳ
ಬಹುದಾಗಿದೆ.

ಸರ್ಕಿಟ್‌ ಹೌಸ್‌ ಜಂಕ್ಷನ್‌ನಲ್ಲಿ ಕಾರ್ಯಕ್ರಮ
ಜಿಲ್ಲಾ ಮಟ್ಟದ ಸಭಾ ಕಾರ್ಯಕ್ರಮ ಬೆಳಗ್ಗೆ 9.30ರಿಂದ ಕೆಪಿಟಿ ಬಳಿಯ ಸರ್ಕಿಟ್‌ ಹೌಸ್‌ ಜಂಕ್ಷನ್‌ನಲ್ಲಿ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಹೆಜಮಾಡಿಯಿಂದ ಶಿರೂರುವರೆಗೂ ಮಾನವ ಸರಪಳಿ ರಚನೆ
ಉಡುಪಿ ಜಿಲ್ಲೆಯ ಗಡಿಭಾಗವಾದ ಬೈಂದೂರು ತಾಲೂಕಿನ ಶಿರೂರು ಟೋಲ್‌ಗೇಟ್‌ ನಿಂದ ಮಾನವ ಸರಪಳಿ ಆರಂಭಗೊಂಡು ಕಾಪು ತಾಲೂಕಿನ ಹೆಜಮಾಡಿ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 107 ಕಿ. ಮೀ ಉದ್ದ ಇರಲಿದೆ. ಹೆಜಮಾಡಿಯಿಂದ ಶಿರೂರುವರೆಗೂ ರಾ.ಹೆ. 66ರ ಒಂದು ಭಾಗ(ಕಾಪುನಿಂದ ಬೈಂದೂರಿಗೆ ಹೋಗುವಾಗ ಎಡಭಾಗ)ದಲ್ಲಿ ಮಾನವ ಸರಪಳಿ ರಚಿಸಲಾಗುತ್ತದೆ.

ಮೇಲ್ಸೇತುವೆ ಇದ್ದಲ್ಲಿ ಮೇಲ್ಸೇತುವೆಯ ಮೇಲೆಯೇ ಸರಪಳಿ ಇರಲಿದೆ. ಇದಕ್ಕಾಗಿ ರಾ.ಹೆ. ಹಾದು ಹೋಗುವ ಎಲ್ಲ ಗ್ರಾ.ಪಂ. ಪ.ಪಂ. ಪುರಸಭೆ ಹಾಗೂ ನಗರಸಭೆಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಎಲ್ಲರಿಗೂ ಈಗಾಗಲೇ ಗಡಿ ಗುರಿಸಿಕೊಡಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕ, ಉಪನ್ಯಾಸಕರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಕಿನ್ನಿಮೂಲ್ಕಿಯ ಸ್ವಾಗತಗೋಪುದ ಬಳಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆದರೆ, ತಾಲೂಕು ಮಟ್ಟದಲ್ಲಿ ಮರವಂತೆ, ಕುಂದಾಪುರ, ಬ್ರಹ್ಮಾವರ ಹಾಗೂ ಉಚ್ಚಿಲದಲ್ಲಿ ಆಯೋಜಿಸಲಾಗಿದೆ. ಕಿನ್ನಿಮೂಲ್ಕಿಯಲ್ಲಿ 500 ಮೀ. ಉದ್ದದ ರಾಷ್ಟ್ರಧ್ವಜ, 500 ಮೀ. ಉದ್ದದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಹಿಡಿದು ಸಂಭ್ರಮಿಸಲಿದ್ದಾರೆ. ಕೆಲವು ಕಡೆಗಳಲ್ಲಿ ಜಿಲ್ಲೆಯ ಸಾಂಸ್ಕೃತಿಕ ವೈಭವ ಸಾರುವ ಟ್ಯಾಬ್ಲೊ, ನೃತ್ಯ ಇತ್ಯಾದಿ ಇರಲಿದೆ.

ಏಕಮುಖ ಸಂಚಾರ: ಮಾನವ ಸರಪಳಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವುದರಿಂದ ಬೆಳಗ್ಗೆ 8.30ರಿಂದ 10.30ರ ವರೆಗೆ ಏಕಮುಖ ಸಂಚಾರ ಇರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದಲ್ಲಿ (ಬೈಂದೂರಿನಿಂದ ಹೆಜಮಾಡಿ ಹೋಗುವಾಗ) ವಾಹನಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಬಲಭಾಗದಲ್ಲಿ (ಸಮುದ್ರದ ಕಡೆಯಲ್ಲಿ)ಮಾನವ ಸರಪಳಿ ಇರುತ್ತದೆ. ಆ ಸಂದರ್ಭದಲ್ಲಿ ಸಂಚರಿಸುವ ವಾಹನ ಚಾಲಕರು ನಿಧಾನಗತಿಯಲ್ಲಿ ವಾಹನಗಳನ್ನು ಚಲಾಯಿಸಲು ಜಿಲ್ಲಾಡಳಿತ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.