ಹುಬ್ಬಳ್ಳಿ: ರೈತಾಪಿ ಜನರಿಗೆ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ಮಾಡಿ ಕೊಟ್ಟು ಕೃಷಿ ಉತ್ಪನ್ನ ಹೆಚ್ಚಿಸಿಕೊಳ್ಳಲು ಉತ್ತೇಜಿಸುತ್ತಿರುವ ದೇಶಪಾಂಡೆ ಫೌಂಡೇಶನ್ ಜಲಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ವಿಮಾನ ನಿಲ್ದಾಣ ಸಮೀಪದ ನೂತನ ಕಟ್ಟಡದಲ್ಲಿ ಮಳೆನೀರು ಕೊಯ್ಲು ಅನುಷ್ಠಾನಗೊಳಿಸಿದೆ.
ಗೋಕುಲ ರಸ್ತೆಯಲ್ಲಿನ ನೂತನ ಕ್ಯಾಂಪಸ್‌ನಲ್ಲಿ ಮಳೆ ನೀರು ಹರಿದು ಹೋಗುವುದನ್ನು ತಡೆಯುವ ಉದ್ದೇಶದಿಂದ ಹೊಂಡ ಮಾಡಿದ್ದಲ್ಲದೇ ಕೊಳವೆಬಾವಿ ಮರುಪೂರಣ ಕಾರ್ಯಕ್ಕೂ ಮುಂದಾಗಿದೆ. ಬೈಪಾಸ್ ರಸ್ತೆ ಪಕ್ಕದಲ್ಲಿ ದೇಶಪಾಂಡೆ ಫೌಂಡೇಶನ್ 6 ಎಕರೆ ಜಾಗದಲ್ಲಿ ಈಗಾಗಲೇ 3 ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.
ಹಾಸ್ಟೆಲ್ ಕೂಡ ನಿರ್ಮಿಸಿದೆ. 6 ಎಕರೆ ಜಾಗದಲ್ಲಿ ಬಿದ್ದ ಒಂದು ಹನಿ ನೀರು ಕೂಡ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಮಳೆ ನೀರು ಕೊಯ್ಲು ಮಾಡಲಾಗಿದೆ. ದೇಶಪಾಂಡೆ ಫೌಂಡೇಶನ್ ಕ್ಯಾಂಪಸ್ ಪ್ರವೇಶಿಸುತ್ತಿದ್ದಂತೆಯೇ ಎಡಗಡೆಗೆ ಒಂದು ಹೊಂಡ ನಿರ್ಮಿಸಲಾಗಿದೆ. ಅಲ್ಲೊಂದು ಬತ್ತಿ ಹೋದ ಕೊಳವೆ ಬಾವಿ ಇದ್ದುದರಿಂದ ಅಲ್ಲಿಯೇ ಕೆರೆ ನಿರ್ಮಿಸಲಾಗಿದೆ.
70 ಅಡಿ ಉದ್ದ/40 ಅಡಿ ಅಗಲ/12 ಅಡಿ ಹೊಂಡ ನಿರ್ಮಿಸಲಾಗಿದೆ. ಸದ್ಯ ಇಲ್ಲಿ ಬತ್ತಿರುವ ಬೋರ್ ಸುತ್ತ 10/10 ಅಡಿ ತಗ್ಗು ತೆಗೆಯಲಾಗಿದೆ. ಮೊದಲು 1 ಅಡಿ 40 ಮಿ.ಮೀ. ಖಡಿ ಹಾಕಲಾಗಿದ್ದು, ನಂತರ 1ಅಡಿ 20 ಮಿ.ಮೀ. ಖಡಿ ಅದರ ಮೇಲೆ ಮತ್ತೂಂದು ಅಡಿ 6 ಮಿ.ಮೀ. ಖಡಿ ಹಾಕಲಾಗಿದೆ. ಇದರಿಂದ ನೀರಿನಲ್ಲಿರುವ ಕಲ್ಮಶಗಳೆಲ್ಲ ಅಲ್ಲೇ ಉಳಿದು ಶುದ್ಧ ನೀರು ಒಳಗೆ ಇಳಿಯುತ್ತದೆ.
ಇಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪದ್ಧತಿಯಡಿ ಮಳೆ ನೀರು ಕೊಯ್ಲು ಮಾಡಲಾಗಿದೆ. ನೀರು ನೇರವಾಗಿ ಹರಿದು ಬಂದು ಕೆರೆಗೆ ಸೇರಿ ಇಂಗಿದರೆ, ಇನ್ನೊಂದೆಡೆ ಇದೇ ನೀರು ಕೊಳವೆಬಾವಿಗೂ ಮರುಪೂರಣ ಮಾಡುತ್ತದೆ. ಇದರಿಂದ ಸಹಜವಾಗಿಯೇ ಅಂತರ್ಜಲದ ಮಟ್ಟ ಹೆಚ್ಚುವುದು. ಹೊಂಡ ತುಂಬಿದ ನಂತರ ಹೆಚ್ಚಾದ ನೀರು ಪಕ್ಕದಲ್ಲಿರುವ ಇನ್ಫೋಸಿಸ್ ಸಂಸ್ಥೆಯ ಕೆರೆಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.
ದೇಶಪಾಂಡೆ ಫೌಂಡೇಶನ್ ಕ್ಯಾಂಪಸ್ ಬೈಪಾಸ್ ರಸ್ತೆಯ ಪಕ್ಕದಲ್ಲಿ ಇಳಿಜಾರಿನಲ್ಲಿ ಇರುವುದರಿಂದ ಸುತ್ತಮುತ್ತಲಿನ ಭಾಗದಲ್ಲಿ ಬಿದ್ದ ಮಳೆಯ ನೀರು ಹರಿದು ನೇರವಾಗಿ ಕ್ಯಾಂಪಸ್ ಗೆ ಆಗಮಿಸಲಿದೆ. ನೀರು ಹರಿದು ಬರಲು ಅನುಕೂಲವಾಗುವಂತೆ ಕಾಂಪೌಂಡ್ ಗೋಡೆಯ ತಳದಲ್ಲಿ ಕಬ್ಬಿಣದ ಜಾಲರಿ ನಿರ್ಮಿಸಲಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಸರಾಸರಿ ಪ್ರತಿ ವರ್ಷ 972 ಮಿ.ಮೀ. ಮಳೆ ಬೀಳುತ್ತದೆ. ಮಳೆ ಬೀಳುವ ಪ್ರಮಾಣದ ಆಧಾರದನ್ವಯ 4 ಎಕರೆಯ ದೇಶಪಾಂಡೆ ಫೌಂಡೇಶನ್ ಕ್ಯಾಂಪಸ್‌ನಲ್ಲಿ ಲಕ್ಷಾಂತರ ಲೀಟರ್ ಮಳೆ ನೀರು ಭೂಮಿ ಸೇರಲಿದೆ. 5 ಲಕ್ಷ ರೂ. ವೆಚ್ಚದಲ್ಲಿ ಇದನ್ನು ರೂಪಿಸಲಾಗಿದ್ದು, ಬೆಲೆ ಕಟ್ಟಲಾಗದಷ್ಟು ಮೌಲ್ಯದ ನೀರು ಇಂಗಿ ಭೂಮಿ ಮಡಿಲು ಸೇರುವುದು.
ದೇಶಪಾಂಡೆ ಫೌಂಡೇಶನ್ ಮಳೆಕೊಯ್ಲಿನ ಮೂಲಕ ಜಲಸಂರಕ್ಷಣೆ ಮಾಡಲು ಮುಂದಾಗಿರುವುದು ಅನುಕರಣೀ. ನೀರನ್ನು ಉಳಿಸುವ ಬಗ್ಗೆ ಉಪನ್ಯಾಸಗಳು, ಕಾರ್ಯಾಗಾರಗಳನ್ನು ಆಯೋಜಿಸುವುದರೊಂದಿಗೆ ಮಳೆ ಕೊಯ್ಲು ಮಾಡಲು ಸಂಘ- ಸಂಸ್ಥೆಗಳು ಮುಂದಾಗಬೇಕಿದೆ.
* ವಿಶ್ವನಾಥ ಕೋಟಿ