ಮುದ್ದೇಬಿಹಾಳ: ಇಲ್ಲಿನ ಬಿಇಒ ಕಚೇರಿ ಎದುರು ತಮ್ಮ ಪುತ್ರ ಹಾಗೂ ಬೆಂಬಲಿಗರ ಸಮೇತ ಧರಣಿ ನಡೆಸುತ್ತಿದ್ದ ನೊಂದ ಶಿಕ್ಷಕಿ ಭೂದೇವಿ ಹುನಗುಂದ ಅವರು ಸಂಘಟನೆಯೊಂದರ ಮುಖಂಡರು ಹಾಗೂ ಬಿಇಒ ಕಚೇರಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ಬುಧವಾರ ಅಂತ್ಯಗೊಳಿಸಿದರು.
11 ವರ್ಷ ಸೇವೆ ಸಲ್ಲಿಸಿದ್ದ ತಮಗೆ ಶಾಲೆಗೆ ಅನುದಾನ ದೊರಕುವಾಗ ಕೈಬಿಟ್ಟು ಅನ್ಯಾಯ ಮಾಡಿದ್ದನ್ನು ಪ್ರತಿಭಟಿಸಿ, ಆ ಶಾಲೆಗೆ ನೀಡಿದ ಅನುದಾನ ರದ್ದುಪಡಿಸಬೇಕು ಮತ್ತು ತಪ್ಪಿತಸ್ಥ ಶಿಕ್ಷಣ ಇಲಾಖೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನೊಂದ ಶಿಕ್ಷಕಿ ಭೂದೇವಿ ಹುನಗುಂದ ಅವರು ತಮ್ಮ ಪುತ್ರ ಚೇತನ್ ಮತ್ತು ಬೆಂಬಲಿಗರ ಜೊತೆ ಇಲ್ಲಿನ ಬಿಇಒ ಕಚೇರಿ ಎದುರು ಸೋಮವಾರದಿಂದ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು.
ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಹಾಗೂ ವಕೀಲ ಕೆ.ಎಂ. ರಿಸಾಲ್ದಾರ್ ಅವರು ಭೂದೇವಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದರು. ಸದ್ಯ ಧರಣಿ ಕೈ ಬಿಡಬೇಕು. ಶಿಕ್ಷಕಿ ಭೂದೇವಿ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಇನ್ನು ಮುಂದೆ ನಾವು ಹೋರಾಟ ನಡೆಸುತ್ತೇವೆ. ಬಡವರಾಗಿರುವ ನಿಮಗೆ ಧರಣಿ ನಡೆಸುವುದಕ್ಕೆ ತಗಲುವ ಖರ್ಚು ಭರಿಸುವುದು ಸಾಧ್ಯವಾಗುವುದಿಲ್ಲ. ಇದಲ್ಲದೆ ಶಿಕ್ಷಣ ಇಲಾಖೆಯವರು ಸಹಿತ ನಿಮ್ಮ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ ಎಂದು ತಿಳಿ ಹೇಳಿದರು.
ರಿಸಾಲ್ದಾರ್ ಅವರ ಮಾತಿಗೆ ಧ್ವನಿಗೂಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ ಅವರೂ ಸಹಿತ ಬೇಡಿಕೆ ಈಡೇರಿಸಲು, ನ್ಯಾಯ ಕೊಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧರಿದ್ದಾರೆ. ಆದರೆ ಸೂಕ್ತ ದಾಖಲೆ ಇಲ್ಲದ್ದರಿಂದ ಹಿನ್ನೆಡೆ ಆಗಿದೆ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ನ್ಯಾಯ ದೊರಕುತ್ತದೆ ಎಂದು ಭರವಸೆ ನೀಡಿದರು.
ರಿಸಾಲ್ದಾರ್ ಮತ್ತು ಚಲವಾದಿ ಅವರು ನೀಡಿದ ಭರವಸೆ ಮನ್ನಿಸಿ ಮತ್ತು ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ರಿಸಾಲ್ದಾರ್ ಅವರ ಹೆಗಲಿಗೇರಿಸಿ ಭೂದೇವಿ ಹಾಗೂ ಅವರ ಪುತ್ರ ಚೇತನ್ ಎಳನೀರು ಸೇವಿಸುವ ಮೂಲಕ ಧರಣಿ ಅಂತ್ಯಗೊಳಿಸಿದರು. ಈ ಸಂದರ್ಭ ಮಾತನಾಡಿದ ಚೇತನ್ ಅವರು ರಿಸಾಲ್ದಾರ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಭರವಸೆ ನಂಬಿ ಸದ್ಯಕ್ಕೆ ಧರಣಿ ಹಿಂತೆಗೆದುಕೊಳ್ಳುತ್ತಿದ್ದೇವೆ. ನಮಗೆ ನ್ಯಾಯ ದೊರಕದೆ ಹೋದಲ್ಲಿ ಮತ್ತೇ ಇದೇ ಸ್ಥಳದಲ್ಲಿ ಟೆಂಟ್ ಹಾಕಿ ಧರಣಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ವಕೀಲರಾದ ಶಾಂತು ಜೋಗಿನ್, ಸರ್ಕಾರಿ ಉರ್ದು ಪ್ರೌಢಶಾಲೆ ಎಸ್‌ಡಿಎಂಸಿ ಚೇರ್ಮನ್ ಎಲ್.ಎಂ. ನಾಯ್ಕೋಡಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶಿವಪುತ್ರ ಅಜಮನಿ, ಶಾಹೀದ್ ಪಠಾಣ, ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ, ತಾಲೂಕು ಪದಾಧಿಕಾರಿ ನಾಗೇಶ ಅಮರಾವತಿ, ರವಿ ಸೋಮನಾಳ, ಕಾಶಿಮಸಾಬ ಶಿವಪುರ, ಪುನೀತ್ ಹಿಪ್ಪರಗಿ ಸೇರಿದಂತೆ ಹಲವರು ಇದ್ದರು.