Advertisement

ಹಾಪ್‌ಕಾಮ್ಸ್‌ಗೆ ದುಡಿಯುವ ಬಂಡವಾಳದ ಕೊರತೆ

12:20 PM Jan 02, 2018 | |

ಬೆಂಗಳೂರು: ಹಾಪ್‌ಕಾಮ್ಸ್‌ ಸಂಸ್ಥೆಯಲ್ಲೀಗ “ದುಡಿಯುವ ಬಂಡವಾಳದ ಕೊರತೆ’ ಎದುರಾಗಿದೆ. ಈ ಸಂಸ್ಥೆ,ಕರ್ನಾಟಕ ರಾಜ್ಯ ಕೈಗಾರಿಕೆ ಸಹಕಾರಿ ಬ್ಯಾಂಕ್‌ ನಲ್ಲಿ 3.ಕೋಟಿ ಠೇವಣಿ ಇಟ್ಟಿದ್ದರೂ, ಸದರಿ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಬ್ಯಾಂಕ್‌ ನಲ್ಲಿ ಇಟ್ಟಿದ್ದ ಹಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹಾಪ್‌ಕಾಮ್ಸ್‌ ಸಂಸ್ಥೆ ಇದೆ.

Advertisement

ಇದರಿಂದಾಗಿ ದುಡಿಯುವ ಬಂಡಾವಳದ ಕೊರತೆ ಉಂಟಾಗಿದ್ದು 10 ಕೋಟಿ ದುಡಿಯುವ ಬಂಡವಾಳದ ಅನುದಾನ ನೀಡುವಂತೆ ಹಾಪ್‌ ಕಾಮ್ಸ್‌ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪತ್ರ ಇದೀಗ ಉದಯವಾಣಿಗೆ ಲಭ್ಯವಾಗಿದೆ. ಹಾಪ್‌ ಕಾಮ್ಸ್‌ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಪತ್ರವನ್ನು ಬರೆದಿದ್ದು ಈ ಪತ್ರದಲ್ಲಿ ದುಡಿಯುವ ಬಂಡವಾಳದ ಕೊರತೆ ಕುರಿತು ಪ್ರಸ್ತಾಪನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಕೈಗಾರಿಕೆ ಸಹಕಾರಿ ಬ್ಯಾಂಕ್‌ನಲ್ಲಿ 3.ಕೋಟಿ ಠೇವಣಿ ಇಟ್ಟಿದ್ದರೂ ಸದರಿ ಬ್ಯಾಂಕ್‌ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಈ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥತಿಯಲ್ಲಿರುವುದನ್ನು ಕೂಡ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಹಾಪ್‌ ಕಾಮ್ಸ್‌ ಸಂಸ್ಥೆಯ ಸುಗಮ ಆಡಳಿತದ ದೃಷ್ಟಿಯಿಂದ ಹಾಗೂ ಪರಿಣಾಮಕಾರಿ ವ್ಯಾಪಾರ ನೀತಿ ರೂಪಿಸಿ ಮಾರುಕಟ್ಟೆಯಲ್ಲಿ ಸಮರ್ಥ ಸ್ಪರ್ಧೆ ನೀಡಲು ತುರ್ತಾಗಿ 10 ಕೋಟಿ ರೂ.ಅಗತ್ಯವಿರುತ್ತದೆ. ಈ ಸಂಬಂಧ ಅನುದಾನದ ರೂಪದಲ್ಲಿ ಹಣವನ್ನು ಮಂಜೂರು ಮಾಡಿಕೊಡಲು ಸಂಬಂಧ ಪಟ್ಟವರಿಗೆ ಆದೇಶಿಸಬೇಕು ಎಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಸ್ಥೆಗೆ ಅನುಕೂಲವಾಗಲಿ ಎಂದು ಹಾಪ್‌ ಕಾಮ್ಸ್‌ ಸಂಸ್ಥೆ ಕರ್ನಾಟಕ ರಾಜ್ಯ ಕೈಗಾರಿಕಾ ಸಹ ಕಾರಿ ಬ್ಯಾಂಕ್‌ ನಲ್ಲಿ 3 ಕೋಟಿ ರೂ.ಹಣವನ್ನು ಠೇವಣಿ ಮಾಡಿತ್ತು. ಆದರೆ ಈ ಬ್ಯಾಂಕ್‌ ನಷ್ಟದಲ್ಲಿದ್ದು ಹಣವಾಗಿ ಬಳಕೆಗೆ ಬಾರದಂತಾಗಿದೆ. ದುಡಿಯುವ ಬಂಡವಾಳ ಇದ್ದರೆ.

Advertisement

ಹಾಪ್‌ ಕಾಮ್ಸ್‌  ಈ ಹಣವನ್ನು ಅವಶ್ಯವಿದ್ದಾಗ ಬಳಕೆ ಮಾಡಿ, ಮತ್ತೆ ಹಾಗೇ ಇಡಬಹುದಾಗಿತ್ತು ಎಂದು ಹಾಪ್‌ ಕಾಮ್ಸ್‌ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ ಹೇಳಿದ್ದಾರೆ. ಬ್ಯಾಂಕ್‌ ನಷ್ಟದಿಂದಾಗಿ ಸಂಸ್ಥೆಗೆ ಈಗ ದುಡಿಯುವ ಬಂಡವಾಳದ ಕೊರತೆ ಉಂಟಾಗಿದ್ದು ಈ ಸಂಬಂಧ ಸರ್ಕಾರಕ್ಕೆ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಲಾಗಿದೆ ಎಂದು ಚಂದ್ರೇ ಗೌಡ ತಿಳಿಸಿದ್ದಾರೆ.

ಏನಿದು ದುಡಿಯುವ ಬಂಡವಾಳ: ಸಂಸ್ಥೆಯು ತನ್ನ ಕಾರ್ಯವ್ಯಾಪ್ತಿಯಲ್ಲಿ ಕಾರ್ಖಾನೆಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆ ಗಳು ಮತ್ತು ವಿದ್ಯಾರ್ಥಿನಿಲಯಗಳಿಗೆ ಹಣ್ಣು ತರಕಾರಿಗಳನ್ನು ಸಾಲದ ರೂಪದಲ್ಲಿ ಸರಬರಾಜು ಮಾಡುತ್ತಿದೆ. ಈ ಸಂಸ್ಥೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಹಾಪ್‌ ಕಾಮ್ಸ್‌ ಗೆ ಹಣ ಬಿಡುಗಡೆ ಮಾಡಲಾಗುತ್ತದೆ.

ಹೀಗಾಗಿ ಈ ಹಣ ಬರುವವರೆಗೂ ಹಾಪ್‌ ಕಾಮ್ಸ್‌ ಕಾಯಬೇಕಾಗುತ್ತದೆ.ಆದರೆ ಹಾಪ್‌ ಕಾಮ್ಸ್‌  ಸಂಸ್ಥೆ ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ರೈತರಿಗೆ ಹಣವನ್ನು ಆಗಿಂದಾಗಲೇ ಪಾವತಿಸಬೇಕಾಗಿದ್ದು ಹೀಗಾಗಿ ಹಾಪ್‌ ಕಾಮ್ಸ್‌ ನಲ್ಲಿ ದುಡಿಯುವ ಬಂಡವಾಳದ ಕೊರತೆ ಉಂಟಾಗುತ್ತದೆ.

ಹಾಪ್‌ ಕಾಮ್ಸ್‌ ಸಂಸ್ಥೆಯ ಆರ್ಥಿಕವಾಗಿ ನಷ್ಟದಲ್ಲಿಲ್ಲ.ಆದರೆ ದುಡಿಯುವ ಬಂಡವಾಳದ ಕೊರತೆಯ ಸಂಬಂಧ ಸಂಸ್ಥೆಯ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
-ವಿಶ್ವನಾಥ್‌, ಹಾಪ್‌ ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕರು. 

* ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next