ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿವಿಧ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬರೋಬ್ಬರಿ 17 ಮಂದಿ ತಜ್ಞ ವೈದ್ಯರು ಹುದ್ದೆಗಳು ಹಲವು ವರ್ಷ ಗಳಿಂದ ಖಾಲಿ ಇದ್ದು, ಹುದ್ದೆಗಳ ನೇಮಕಾತಿಗೆ ಸ್ವತಃ ಆರೋಗ್ಯ ಇಲಾಖೆ ಆಹ್ವಾನಿಸಿದರೂ ತಜ್ಞ ವೈದ್ಯರು ಮಾತ್ರ ಮುಂದೆ ಬರುತ್ತಿಲ್ಲ.
ಹೌದು, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಂಡು ವೈದ್ಯಕೀಯ ಶಿಕ್ಷಣ ಕೋರ್ಸ್ ಗಳನ್ನು ಈಗ 4ನೇ ಬ್ಯಾಚ್ ಪಡೆದುಕೊಳ್ಳುತ್ತಿದೆ. ಆದರೆ ಇಂದಿಗೂ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಾರಂಭ ಮಾಡದ ಕಾರಣ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಎದುರಾಗಿ ರೋಗಪೀಡಿತರಿಗೆ ಸಂಕಟ, ಸಂಕಷ್ಟ ಎದುರಾಗಿದೆ.
ವಿಶೇಷವಾಗಿ ಹೃದ್ರೋಗ ತಜ್ಞರು, ಹೃದಯ ತಜ್ಞರು, ಕಿವಿ. ಮೂಳೆ, ಗಂಟಲು, ಚರ್ಮ ಹೀಗೆ ದೇಹದ ಪ್ರತಿಯೊಂದು ಅಂಗಾಂಗದ ಬಗ್ಗೆಯು ವಿಶೇಷ ಅಧ್ಯಯನ ನಡೆಸಿರುರುವ ತಜ್ಞ ವೈದ್ಯರು ಇಲ್ಲದೇ ಚಿಕಿತ್ಸೆಗೆ ಬರುವ ರೋಗಿಗಳು ಪರದಾಡಬೇಕಿದ್ದು, ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಯ ಹೇಳುವ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 17 ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ ಜಿಲ್ಲಾಸ್ಪತ್ರೆಯಿಂದ ಹಿಡಿದು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ಕೊಡಲು ಅಥವ ಮಾರ್ಗದರ್ಶನ ಮಾಡಲು ತಜ್ಞರ ವೈದ್ಯರ ಕೊರತೆಯನ್ನು ಜಿಲ್ಲೆ ಬಹುವಾಗಿ ಎದುರುಸುತ್ತಿದೆ. ತಜ್ಞ ವೈದ್ಯರ ನೇಮಕಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅರ್ಜಿ ಆಹ್ವಾನಿಸಿದರೂ, ನೇಮಕಾತಿಗೆಯಾರು ಮುಂದೆ ಬರುತ್ತಿಲ್ಲ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡುತ್ತಿದೆ.
ಜಿಲ್ಲೆಯಲ್ಲಿ ಹಲವು ದಶಕಗಳ ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಂಡಿತು ಎನ್ನುವ ಸಮಾಧಾನ ಇದ್ದರೂ ಇಂದಿಗೂ ಜಿಲ್ಲೆಯ ಜನತೆ ಗಂಭೀರ ರೋಗ ಸಮಸ್ಯೆಗಳಿಗೆ ಬೆಂಗಳೂರು ಆಸ್ಪತ್ರೆಗಳನ್ನೆ ಅವಲಂಬಿಸಬೇಕಿರುವುದು ಎದ್ದು ಕಾಣುತ್ತಿದೆ. ಮೆಡಿಕಲ್ ಕಾಲೇಜ್ ಉದ್ಘಾಟನೆಗೊಂಡು ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ಅಲ್ಲಿ ವೈದ್ಯಕೀಯ ಆಸ್ಪತ್ರೆ ಕಾರ್ಯಾರಂಭ ಮಾಡದೇ ಇರುವುದು ಜಿಲ್ಲೆಯ ಪಾಲಿಗೆ ಮೆಡಿಕಲ್ ಕಾಲೇಜ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಮೆಡಿಕಲ್ ಆಸ್ಪತ್ರೆ ಆರಂಭಗೊಳದಿದ್ದಕ್ಕೆ ವೈದ್ಯರ ಸಮಸ್ಯೆ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇರುವುದಕ್ಕೆ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರ ಭರ್ತಿಗೆ ಅವಕಾಶ ಕೊಡುತ್ತಿಲ್ಲವಂತೆ. ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆ ಇರುವ ಕಾರಣಕ್ಕೆ ವೈದ್ಯರ ನೇಮಕಕ್ಕೆ ಅವಕಾಶ ಕೊಡುತ್ತಿಲ್ಲ. ಆದರೆ ಜಿಲ್ಲೆಯಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ಇನ್ನೂ ಕಾರ್ಯಾರಂಭ ಮಾಡುವುದು ಒಂದು ಅಥವಾ ಎರಡು ವರ್ಷ ಆಗಲಿದೆ. ಅಲ್ಲಿವರೆಗೂ ತಜ್ಞ ವೈದ್ಯರ ಸಮಸ್ಯೆ ನೀಗುವುದು ಅನುಮಾನ ಎನ್ನುವ ಮಾತು ಆರೋಗ್ಯ ಇಲಾಖೆ ಅಂಗಳದಲ್ಲಿಯೆ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ 17 ತಜ್ಞ ವೈದ್ಯರ ಕೊರತೆ ಇರುವುದು ನಿಜಕ್ಕೂ ಕಳವಳಕಾರಿ ಸಂಗತಿ. ನಮ್ಮ ಸರ್ಕಾರ ಇದ್ದಾಗ ವೈದ್ಯರಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅದನ್ನು ರದ್ದುಗೊಳಿಸಿದ ಪರಿಣಾಮ ಇವತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ಆರೋಗ್ಯ ಸೇವೆ ಅತ್ಯಂತ ತುರ್ತು ಸೇವೆಗಳಲ್ಲಿ ಒಂದು ವೈದ್ಯರ ಕೊರತೆ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು.
-ಡಾ.ಕೆ.ಸುಧಾಕರ್, ಸಂಸದರು.
–ಕಾಗತಿ ನಾಗರಾಜಪ್ಪ