Advertisement

Mulki ರುದ್ರಭೂಮಿಗೆ ಕಾಯಕಲ್ಪ ಆರಂಭ; ಒಂದುವರೆ ಎಕ್ರೆಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ಚಿಂತನೆ

02:20 PM Sep 13, 2024 | Team Udayavani |

ಮೂಲ್ಕಿ: ಮೂವತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾದ ಮೂಲ್ಕಿಯ ಸಾರ್ವಜನಿಕ ಹಿಂದೂ ರುದ್ರಭೂಮಿ ಇದೀಗ ಜೀರ್ಣಾವಸ್ಥೆ ತಲುಪಿದ್ದು, ಅದರ ಕಾಯಕಲ್ಪ ಕಾರ್ಯ ಆರಂಭವಾಗಿದೆ. ಶ್ಮಶಾನದಲ್ಲಿ ಹೆಣ ಸುಡಲು ಬಳಸುವ ಸಿಲಿಕಾನ್‌ ಬಾಕ್ಸ್‌ ಈಗ ಬಲ ಕಳೆದುಕೊಂಡಿದ್ದು, ಅದನ್ನು ಬದಲಿಸುವುದೂ ಸಹಿತ ಹಲವು ಅಭಿವೃದ್ಧಿ ಚಟುವಟಿಕೆಗೆ ಸಮಿತಿ ಮುಂದಾಗಿದೆ.

Advertisement

ಮಂಗಳೂರು ಭಾಗದಲ್ಲಿ ರುದ್ರಭೂಮಿಗಳ ಅಭಿವೃದ್ಧಿಯ ಹರಿಕಾರರೆಂದೇ ಗುರುತಿಸಲಾದ ಮೂಲ್ಕಿಯ ಸಮಾಜ ಸೇವಕ ಎಂ. ಆರ್‌.ಎಚ್‌. ಪೂಂಜ ಅವರ ಸಾರಥ್ಯದಲ್ಲಿ ಮೂಲ್ಕಿಯಲ್ಲೂ ಸುಸಜ್ಜಿತ ಶ್ಮಶಾನ ನಿರ್ಮಿಸಲಾಗಿತ್ತು. ಅವರು ಹಲವು ಸಂಘ-ಸಂಸ್ಥೆಗಳು, ವ್ಯಕ್ತಿಗಳ ನೆರವು ಪಡೆದು ಶ್ಮಶಾನಗಳನ್ನು ಅಭಿವೃದ್ಧಿಪಡಿಸಿದ್ದರು. ಮಂಗಳೂರಿನಲ್ಲಿ ಅವರು ಪುನರುಜ್ಜೀವನಗೊಳಿಸಿದ್ದ ರುದ್ರಭೂಮಿಗಳ ನಿರ್ವಹಣೆಯ ಹೊಣೆಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡಿದ್ದರೆ, ಮೂಲ್ಕಿಯ ರುದ್ರಭೂಮಿಯ ಜವಾಬ್ದಾರಿಯನ್ನು ಎಂ.ಆರ್‌.ಎಚ್‌. ಪೂಂಜರ ಪುತ್ರ ಎಂ.ಎಚ್‌. ಅರವಿಂದ ಪೂಂಜ ನೇತೃತ್ವದ ಸಮಿತಿ ವಹಿಸಿಕೊಂಡಿದೆ.

ಮೂಲ್ಕಿಯ ಈ ರುದ್ರಭೂಮಿಯ ಜಾಗ ಹಿಂದೆ ಮೂಲ್ಕಿಯ ಶಿವ ಬ್ರಾಹ್ಮಣ ಸಭಾದ ಕೈಯಲ್ಲಿತ್ತು. ಮೂಲ್ಕಿಗೆ ಒಂದು ಸಾರ್ವಜನಿಕ ರುದ್ರಭೂಮಿ ಬೇಕು ಎಂಬ ವಿಚಾರ ಚರ್ಚೆಗೆ ಬಂದಾಗ ಶಿವ ಬ್ರಾಹ್ಮಣ ಸಭಾ ಸುಮಾರು ಒಂದೂವರೆ ಎಕ್ರೆ ಜಾಗವನ್ನೇ ಸಮಿತಿಯ ಕೈಗೆ ಒಪ್ಪಿಸಿ ಸಾರ್ವಜನಿಕ ರುದ್ರಭೂಮಿಯಾಗಿ ಪರಿವರ್ತಿಸಲು ಅವಕಾಶ ಮಾಡಿಕೊಡುವ ದೊಡ್ಡ ಮನಸು ಮಾಡಿತ್ತು. ಬಳಿಕ ಅದು ಪೂಂಜರ ನೇತೃತ್ವದಲ್ಲಿ ಹೊಸ ರೂಪ ಪಡೆಯಿತು. ಈಗ ಅದು ಜೀರ್ಣಾವಸ್ಥೆಯಲ್ಲಿದ್ದು, ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದೆ.

ಅಭಿವೃದ್ಧಿಗೆ ಬೇಕಿದೆ ನೆರವು
ಅರವಿಂದ ಪೂಂಜ ಅವರ ನೇತೃತ್ವದಲ್ಲಿ ರುದ್ರಭೂಮಿ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಇಲ್ಲಿ ಒಂದು ಹೆಣ ಸುಡುವುದಕ್ಕೆ ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಸ್ವೀಕರಿಸಲಾಗುತ್ತದೆ, ಜತೆಗೆ ಹೆಚ್ಚು ಶವಗಳು ಬರುವುದಿಲ್ಲ. ಹೀಗಾಗಿ ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚು. ಹೀಗಾಗಿ ಸ್ಥಳೀಯಾಡಳಿತ, ಸಾರ್ವಜನಿಕರು, ಸಹಕಾರ ಸಂಘಗಳ ನೆರವು ಸಿಕ್ಕಿದರೆ ಅಭಿವೃದ್ಧಿಗೆ ಸಹಾಯವಾಗಲಿದೆ ಎಂಬುದು ಸಮಿತಿಯ ಅಭಿಪ್ರಾಯ.

ಇಲ್ಲಿ ಕಾವಲುಗಾರರು ಇಲ್ಲದೆ ಕಳ್ಳರು ಮರಗಳನ್ನು ಕಡಿಯುವುದು, ವಸ್ತುಗಳನ್ನು ದೋಚುವ ಕೃತ್ಯ ನಡೆಯುತ್ತಿದೆ. ಇಲ್ಲಿ ವಿದ್ಯುತ್‌ ದೀಪಗಳಿದ್ದರೂ

Advertisement

ಕಳ್ಳರ ಕರಾಮತ್ತು ಜೋರಾಗಿದೆ. ಹೀಗಾಗಿ ರಕ್ಷಣೆ ಕೆಲಸವೂ ನಡೆಯಬೇಕಾಗಿದೆ.

ಏನೇನು ಅಭಿವೃದ್ಧಿ  ಕಾರ್ಯ?
ಈ ಬಾರಿ ರುದ್ರಭೂಮಿಯನ್ನು ಸುಸ್ಥಿತಿಗೆ ತರುವ ಜತೆಗೆ ಆಕರ್ಷಣೆ ಹೆಚ್ಚಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

ಸಂಬಂಧಪಟ್ಟು ಸುಮಾರು 1.5 ಎಕ್ರೆ ಜಾಗವಿದೆ. ಅಲ್ಲಿ ಗಿಡ ಗಳನ್ನು ನೆಡಲಾಗಿದೆ. ಈ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಚಿಂತನೆ ಇದೆ.

ಇಲ್ಲಿ ವಾಕಿಂಗ್‌ ಟ್ರ್ಯಾಕ್‌ ಮಾಡಿದರೆ ಜನರ ಓಡಾಟಕ್ಕೂ ಅನುಕೂಲವಾಗ ಬಹುದು ಎಂಬ ಸಲಹೆ ಇದೆ.

ರುದ್ರಭೂಮಿಯಲ್ಲಿ ಹಿಂದೆ ಶಿವನ ಮೂರ್ತಿ ನಿರ್ಮಿಸಲಾಗಿತ್ತು. ಅದು ಜೀರ್ಣಗೊಂಡಿದ್ದರಿಂದ ಹೊಸ ಮೂರ್ತಿ ಸ್ಥಾಪನೆಯ ಚಿಂತನೆ ಇದೆ.

-ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next