ಮಂಗಳೂರು: ಫೀನಿಕ್ಸ್ ಫಿಲ್ಮ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಮಹೇಂದ್ರ ಕುಮಾರ್ ನಿರ್ಮಾಣದ ಹಾಗೂ ಗೌರಿ ಶ್ರೀನಿವಾಸರವರ ನಿರ್ದೇಶನದ “ದಿ ಜರ್ನಿ ಆಫ್ ಬೆಳ್ಳಿ’ ಮಕ್ಕಳ ಚಲನಚಿತ್ರ ಸೆ.13ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಲ್ಟಿಪ್ಲೆಕ್ಸ್ ಸಿನೆಮಾ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಹಿಂದೆ “ಕಾರ್ನಿಕೊದ ಕಲ್ಲುರ್ಟಿ’ ಎಂಬ ಚಾರಿತ್ರಿಕ ತುಳು ಸಿನೆಮಾವನ್ನು ಮಹೇಂದ್ರ ಕುಮಾರ್ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದು, ಇದು ಅವರ ಎರಡನೇ ಚಿತ್ರವಾಗಿದೆ.
ಕಥಾ ಸಾರಾಂಶ
9 ವರ್ಷದ ಹುಡುಗಿ ಬೆಳ್ಳಿ, ಭಾರತೀಯ ಸೇನೆಯಲ್ಲಿ ಗಡಿಪ್ರದೇಶದಲ್ಲಿ ಕರ್ತವ್ಯನಿರತನಾಗಿರುವ ತನ್ನ ತಂದೆಯ ಬರವಿಗಾಗಿ ಕಾಯುತ್ತಿರುವ ಕಥೆ, ಕ್ರಮೇಣ ಬೆಳ್ಳಿಯ ಬದುಕಿನಲ್ಲಿ ನಡೆದ ಘಟನೆಗಳಿಂದಾಗಿ ಅವಳ ಸ್ವಭಾವ ಕೋಪ ಮತ್ತು ದ್ವೇಷಕ್ಕೆ ತಿರುಗುತ್ತದೆ. ತಂದೆ ಹತ್ತಿರವಿಲ್ಲದ ಕಾರಣಕ್ಕಾಗಿ ಅವಳ ಬದುಕಿನಲ್ಲಿ ಹಲವು ಘಟನೆ, ಹೋರಾಟಗಳು ಸಂಭವಿಸುತ್ತವೆ. ಮುಂದೆ ಒಂದು ಸಂದರ್ಭದಲ್ಲಿ ಅವಳ ತಂದೆ ಮನೆಯವರನ್ನು ನೋಡಲು ಬಂದರೂ ಬೆಳ್ಳಿ ಕೋಪ ಹಾಗೂ ನಿರ್ಲಕ್ಷ್ಯ ತೋರಿಸುತ್ತಾಳೆ. ಮುಂದೆ ಈ ಕಥೆಗೆ ಬಂದ ಒಂದು ತಿರುವು ಮತ್ತು ಕೂಡಿಬಂದ ಕೆಲವು ಸಂದರ್ಭಗಳು ಹೊಸ ಕನಸೊಂದರ ಆವಿಷ್ಕಾರಕ್ಕೆ ನಾಂದಿಯಾಗುತ್ತದೆ.
ಸೈನಿಕನೊಬ್ಬನ ಮನೆಯಲ್ಲಿ ಹುಟ್ಟಿದ 9 ವರ್ಷದ ಮುಗ್ಧ ಹುಡುಗಿ ಬೆಳ್ಳಿಯ ದೃಷ್ಟಿಯಲ್ಲಿ ನಡೆಯುವ ಕಥೆ ಇದು. ಬೆಳ್ಳಿಯ ಜೀವನದಲ್ಲಿ ಉಂಟಾಗುವ ಬದಲಾವಣೆ ದೇಶಭಕ್ತಿಗೆ ಸುಂದರ ಬುನಾದಿ ಹಾಕಿದೆ. ಮುಗ್ಧ ಬೆಳ್ಳಿಯ ಪಾತ್ರದ ಮೂಲಕ ಭಾರತೀಯ ಸೇನೆಯ ಮರೆಯಲಾಗದ ಸೇವೆ, ಶೌರ್ಯ ಸಾಧನೆಗಳು, ಶಿಸ್ತು, ಬಲಿದಾನ, ಯಶೋಗಾಥೆ. ಎಳೆ ಎಳೆಯಾಗಿ ಪ್ರೇಕ್ಷಕರ ಮನದಲ್ಲಿ ತೆರೆದುಕೊಂಡು ರಾಷ್ಟ್ರಪ್ರೇಮದ ಕಿಚ್ಚನ್ನು ಹೊತ್ತಿಸುತ್ತದೆ.
ಈ ಚಲನಚಿತ್ರವು ಮೊಖೋ, ಕ್ರೌನ್ ವುಡ್, ಇಂಡೋ ಫ್ರೆಂಚ್, ತ್ರಿಲೋಕ, ಜ್ಯೂರಿ ಬಿರ್ಸಮುಂಡಾ, ರೋಶನಿ ಮುಂತಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ಮಾಪಕ, ನಿರ್ದೇಶಕ, ಉತ್ತಮ ಮಕ್ಕಳ ಚಲನಚಿತ್ರ, ವಿನ್ನರ್, ಜ್ಯೂರಿ ಪ್ರಶಸ್ತಿಗಳನ್ನು ಪಡೆದಿದೆ.