ದಾವಣಗೆರೆ: ಭಾರತದಲ್ಲಿ ತಂತ್ರಜ್ಞಾನದ ಕೊರತೆಯಿಂದಾಗಿ ಸಣ್ಣ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿಲ್ಲ. ಆದರೆ, ದೇಶದ ಆರ್ಥಿಕತೆಗೆ ಗುಡಿ ಕೈಗಾರಿಕೆಗಳು ಬೆನ್ನೆಲುಬಾಗಿವೆ. ಹಾಗಾಗಿ ಈ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ಮೀನಾ ಚಂದಾವರಕರ್ ಹೇಳಿದ್ದಾರೆ.
ಗುರುವಾರ, ದಾವಣಗೆರೆ ವಿವಿಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಭಾರತದ ಗುಡಿ ಕೈಗಾರಿಕೆಗಳಲ್ಲಿ ಹೊರಹೊಮ್ಮುತ್ತಿರುವ ಸಮಸ್ಯೆಗಳು, ಸವಾಲುಗಳು ಮತ್ತು ಅವಕಾಶಗಳು ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದ ಅವರು, ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ತಾಂತ್ರಿಕತೆಯಲ್ಲಿ ಅನ್ವೇಷಣೆ ಕೈಗೊಳ್ಳುವ ಅಗತ್ಯವಿದೆ ಎಂದರು.
ಇಂದು ಹಲವಾರು ಕ್ಷೇತ್ರಗಳಲ್ಲಿ ಹೇರಳವಾದ ಉದ್ಯೋಗವಕಾಶಗಳಿದ್ದು, ಆ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕಿದೆ. ಪ್ರಸ್ತುತ ಹೋಮ್ ನರ್ಸಿಂಗ್ ಸೇವೆ ಸಹ ಪ್ರಾಮುಖ್ಯತೆ ಪಡೆಯುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಸಾಥ್ ನೀಡುತ್ತಿದೆ. ಮೀಸಲಾತಿಗಾಗಿ ಕಾಯುತ್ತಾ ಕೂರದೇ ಸತತ ಪರಿಶ್ರಮ ಪಟ್ಟಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಆರ್ಥಿಕ ನೀತಿ ಅರ್ಥ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯಶಸ್ಸು ನಿಶ್ಚಿತ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆ ವಿವಿಯ ಕುಲಪತಿ ಪ್ರೊ| ಎಸ್ ವಿ. ಹಲಸೆ ಮಾತನಾಡಿ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಾಗ ದೇಶದ ಆರ್ಥಿಕತೆ ಸುಸ್ಥಿರವಾಗುತ್ತದೆ. ಗುಡಿ ಕೈಗಾರಿಕೆಗಳಲ್ಲಿ ಹಣದ ಚಲಾವಣೆ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾಭ್ಯಾಸದೊಂದಿಗೆ ವಾಣಿಜ್ಯ ಕ್ಷೇತ್ರದಲ್ಲಿ ಪರ್ಯಾಯ ಶಿಕ್ಷಣ ಪಡೆದರೆ ಹೆಚ್ಚಿನ ಉದ್ಯೋಗವಕಾಶ ದೊರೆಯಲಿದೆ ಎಂದು ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಪಿ. ಕಣ್ಣನ್ ಮಾತನಾಡಿ, ದೇಶದ ಆರ್ಥಿಕತೆಯ ಒಟ್ಟು ಲಾಭದಲ್ಲಿ ಶೇ. 45 ಭಾಗ ಗುಡಿ ಕೈಗಾರಿಕೆಗಳಿಂದಲೇ ಲಭ್ಯವಾಗುತ್ತಿದೆ. ಜನರ ಮೂಲಭೂತ ಅವಶ್ಯಕತೆ ಪೂರೈಸುವಲ್ಲಿ ವಾಣಿಜ್ಯ ವಹಿವಾಟಿನ ಬಗ್ಗೆ ಗಮನ ಹರಿಸಬೇಕಿದೆ ಎಂದರು. ಒಂದು ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಅವಶ್ಯಕತೆ ಹೆಚ್ಚಾಗಿದ್ದು, ಅದು ಲಾಭದ ದೃಷ್ಟಿಯಿಂದ ಕೇಂದ್ರ ಬಿಂದುವಾಗಿದೆ. ಈ ದೆಸೆಯಲ್ಲಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಸರ್ಕಾರ ಕೋಟ್ಯಾಂತರ ರೂ. ವಿನಿಯೋಗಿಸುತ್ತಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗಪಡಿಸಿಕೊಳ್ಳಬೇಕು. ಅರ್ಹತೆಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾದರೆ ಭಾರತದ ನಿರುದ್ಯೋಗ ಸಮಸ್ಯೆ ನಿರ್ಮೂಲನೆಯಾಗಿ ದೇಶದ ಸುಸ್ಥಿರತೆ ಬಗ್ಗೆ ನಿರಾತಂಕವಾಗಿರಬಹುದು ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಪಿ. ಲಕ್ಷ್ಮಣ್, ಪ್ರಾಧ್ಯಾಪಕರಾದ ಪ್ರೊ| ಎಚ್.ಎಸ್. ಅನಿತಾ, ಪ್ರೊ| ಸೀರಪ್ಪ ವೇದಿಕೆಯಲ್ಲಿದ್ದರು.