Advertisement

ಐಟಿ-ಬಿಟಿ ಕ್ಷೇತ್ರದಲ್ಲಿ ಮೂಲಸೌಲಭ್ಯದ್ದೇ ಕೊರತೆ

11:49 AM Mar 23, 2018 | |

ಮಹದೇವಪುರ: ಟೆಕ್‌ಪಾರ್ಕ್‌, ಐಟಿ-ಬಿಟಿ, ಬಹುರಾಷ್ಟ್ರೀಯ ಕಂಪೆನಿಗಳು, ಬೃಹತ್‌ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಖ್ಯಾತಿಯೊಂದಿಗೆ, ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಅಪಖ್ಯಾತಿಗೂ ಮಹದೇವಪುರ ಕ್ಷೇತ್ರ ಒಳಗಾಗಿದೆ. 

Advertisement

ಕ್ಷೇತ್ರ ಪುನರ್‌ ವಿಂಗಡನೆಗೆ ಮೊದಲು ವರ್ತೂರು ಕ್ಷೇತ್ರದ ಭಾಗವಾಗಿದ್ದ ಮಹದೇವಪುರ ಆ ನಂತರ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಯಿತು. 2008ರಿಂದಲೂ ಕ್ಷೇತ್ರವನ್ನು ಬಿಜೆಪಿಯ ಅರವಿಂದ ಲಿಂಬಾವಳಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಬಿಬಿಎಂಪಿ ವ್ಯಾಪ್ತಿಗೆ ಸೇರಿ ದಶಕ ಕಳೆದರೂ ಗ್ರಾಮೀಣ ಭಾಗಗಳಿಗೆ ಇಂದಿಗೂ ಸಮರ್ಪಕ ಕುಡಿಯುವ ನೀರು ಕಲ್ಪಿಸಲು ಸಾಧ್ಯವಾಗಿಲ್ಲ.

ಕ್ಷೇತ್ರದ ಐಟಿಪಿಎಲ್‌, ವೈಟ್‌ಫೀಲ್ಡ್‌, ಮಾರತಹಳ್ಳಿ ಭಾಗಗಳಲ್ಲಿ ನೂರಾರು ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಹಲವು ಟೆಕ್‌ಪಾರ್ಕ್‌ಗಳಿವೆ. ಆದರೆ, ಅವುಗಳ ಸುತ್ತಲಿರುವ ಗ್ರಾಮೀಣಗಳು ಮಾತ್ರ ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿವೆ.

ಇದರೊಂದಿಗೆ ಕ್ಷೇತ್ರದ ಬಹುದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅದರ ನಡುವೆಯೂ ಹಲವು ಭಾಗಗಳಲ್ಲಿ ಸಮುದಾಯ ಆಸ್ಪತ್ರೆಗಳ ನಿರ್ಮಾಣವಾಗಿದ್ದು, ಸಂಚಾರ ದಟ್ಟಣೆ ನಿವಾರಣೆಗೆ ಹಲವು ಕ್ರಮಗಳಿಗೆ ಪ್ರಯತ್ನಿಸಲಾಗಿದೆ.

ಇನ್ನು ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸಂರಕ್ಷಣೆಗೂ ಹೆಚ್ಚು ಆದ್ಯತೆ ದೊರೆಯದ ಹಿನ್ನೆಲೆಯಲ್ಲಿ ನೊರೆ ಸಮಸ್ಯೆ ಹಾಗೂ ಬೆಂಕಿ ಕಾಣಿಸಿಕೊಂಡು ವರದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಪಖ್ಯಾತಿಗೆ ಒಳಗಾಗುತ್ತಿದೆ. ಇದೀಗ ಕ್ಷೇತ್ರದ ಕೆಲವು ಮಾರ್ಗಗಳಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಿರುವುದು ಜನರಲ್ಲಿ ಖುಷಿ ತಂದರೂ, ಕಾಮಗಾರಿಯಿಂದ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆಗೆ ಹೈರಾಣಾಗಿದ್ದಾರೆ.

Advertisement

ದಿ ಬೆಸ್ಟ್‌: ಸಿಲ್ಕ್ಬೋರ್ಡ್‌ನಿಂದ ಕೆೆ.ಆರ್‌.ಪುರಕ್ಕೆ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮಂಡೂರು ಹಾಗೂ ಮಿಟ್ಟಗಾನಹಳ್ಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲಾಗಿದೆ. ಜತೆಗೆ ಮಂಡೂರು, ಕಣ್ಣೂರು, ಮಾರತಹಳ್ಳಿ, ಕೊಡತಿ ಹಾಗೂ ಹಾಲನಾಯಕನಹಳ್ಳಿ ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗಳ ನಿರ್ಮಾಣ. ಕಾಡುಗೋಡಿ ಸಮೀಪ ಪಾಲಿಟೆಕ್ನಿಕಲ್‌ ಕಾಲೇಜು ನಿರ್ಮಿಸಲಾಗಿದ್ದು, ಬಿಎಂಟಿಸಿ ಬಸ್‌ ಡಿಪೋ, ಹೂಡಿ ಸಮೀಪ ನೂತನ ರೈಲ್ವೆ ನಿಲ್ದಾಣ ನಿರ್ಮಿಸಲಾಗಿದೆ. ಜತೆಗೆ ಕಾಡುಗೋಡಿ ರೈಲ್ವೆ ಚಿಕ್ಕಗೇಟು ಬಳಿ ಅಂಡರ್‌ಪಾಸ್‌ ಕಾಮಗಾರಿ ಪ್ರಗತಿಯಲ್ಲಿದೆ. 

ಕ್ಷೇತ್ರದ ದೊಡ್ಡ ಸಮಸ್ಯೆ: ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ದೊರೆಯಲಿಲ್ಲ. ಜತೆಗೆ ಕೆರೆಗಳಲ್ಲಿನ ನೊರೆ ಹಾಗೂ ಬೆಂಕಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಮುಂದಾಗಿಲ್ಲ. ವರ್ತೂರು, ವೈಟ್‌ಫೀಲ್ಡ್‌, ಬೆಳ್ಳಂದೂರು, ಐಟಿಪಿಎಲ್‌ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕ್ಷೇತ್ರದಲ್ಲಿರುವ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು, ಒಳಚರಂಡಿ, ರಸ್ತೆಗಳು ಸೌಲಭ್ಯ ಕಲ್ಪಿಸಿಲ್ಲ. 

ಶಾಸಕರು ಏನಂತಾರೆ?: ಮಹದೇವಪುರ ಕ್ಷೇತ್ರದಿಂದಲೇ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ. ಆದರೆ, ಸರ್ಕಾರದಿಂದ ಕಳೆದು ಐದು ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಂದಿಲ್ಲ. ಹೀಗಾಗಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಅದರ ನಡುವೆಯೂ ಶಾಸಕರ ಅನುದಾನ ಹಾಗೂ ಸಂಸದರ ಆದರ್ಶ ಯೋಜನೆಗಳಿಂದ ಅನುದಾನ ತಂದು ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. 
– ಅರವಿಂದ ಲಿಂಬಾವಳಿ, ಮಹದೇವಪುರ ಶಾಸಕರು

ಪೈಪೋಟಿ: ಮಹದೇವಪುರ ಕ್ಷೇತ್ರದಲ್ಲಿ ಮೆಲ್ನೋಟಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಲಿಂಬಾವಳಿ ಅವರು ಹ್ಯಾಟ್ರಿಕ್‌ ನಿರೀಕ್ಷೆಯಲಿದ್ದು, ಕಳೆದ ಬಾರಿ 6149 ಮತಗಳ ಅಂತರದಲ್ಲಿ ಸೋತಿದ್ದ ಎ.ಸಿ.ಶ್ರೀನಿವಾಸ್‌ ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಸಮರ್ಥ ಅಭ್ಯರ್ಥಿಯ ತಲಾಷೆಯಲ್ಲಿದೆ. 

ಮಹದೇವಪುರ
– ಅರವಿಂದ ಲಿಂಬಾವಳಿ (ಬಿಜೆಪಿ) 1,10,244 
– ಎ.ಸಿ.ಶ್ರೀನಿವಾಸ್‌ (ಕಾಂಗ್ರೆಸ್‌)  1,04,095 
– ಎನ್‌.ಗೋವರ್ಧನ್‌ (ಜೆಡಿಎಸ್‌)  5,604 

ಟಿಕೆಟ್‌ ಆಕಾಂಕ್ಷಿಗಳು
– ಅರವಿಂದ ಲಿಂಬಾವಳಿ (ಬಿಜೆಪಿ)
– ಎ.ಸಿ.ಶ್ರೀನಿವಾಸ್‌, ಬೆಳತ್ತೂರು ನಾಗೇಶ್‌ (ಕಾಂಗ್ರೆಸ್‌)
– ಸತೀಶ್‌ ಹಾಗೂ ನಟರಾಜ್‌ (ಜೆಡಿಎಸ್‌)

ಹಲವು ಭಾಗಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಉಳಿದಂತೆ ಈ ಭಾಗದ ಟ್ರಾಫಿಕ್‌ ಸಮಸ್ಯೆಗೆ ಯಾವುದೇ ರೀತಿಯ ಪರಿಹಾರ ಕ್ರಮಕೈಗೊಂಡಿಲ್ಲ. ಜತೆಗೆ ಕ್ಷೇತ್ರದಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ.
-ಸುರೇಶ್‌

ನಮ್ಮ ಮೆಟ್ರೋ ಕಾಮಗಾರಿ ಹಾಗೂ ಫಿನಿಕ್ಸ್‌ ಮಾಲ್‌ನಿಂದಿಂದಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಜನರು ರಸ್ತೆಗೆ ಬರಲು ಹಿಂಜರಿಯುವಂತಹ ಪರಿಸ್ಥಿತಿಯಿದೆ. ಜತೆಗೆ ಕ್ಷೇತ್ರದಲ್ಲಿನ ತ್ಯಾಜ್ಯ ಸಮಸ್ಯೆಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಹೊರವರ್ತುಲ ರಸ್ತೆಯಲ್ಲಿ ಸ್ಕೈವಾಕ್‌ ಇಲ್ಲದಿರುವುದರಿಂದ ಅಪಘಾತಗಳು ಹೆಚ್ಚಿವೆ.
-ಅಣ್ಣನ್‌

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿವೆ. ಆದರೆ, ಈವರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜತೆಗೆ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲದ ಕಾರಣ ಬಡವರು ಕೆ.ಆರ್‌.ಪುರ ಆಸ್ಪತ್ರೆಗೆ ಹೋಗಬೇಕಾಗಿದೆ. 
-ಸತ್ತಾಜ್‌ 

ಪಾಲಿಕೆ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಆದರೆ, ಶಾಸಕರು ಕ್ಷೇತ್ರದ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದು ತೀರಾ ಕಡಿಮೆ. ಸಂಚಾರ ದಟ್ಟಣೆಯಿಂದ ಶಾಲಾ ಮಕ್ಕಳು, ಕಚೇರಿಗಳಿಗೆ ಹೋಗುವವರಿಗೆ ತೊಂದರೆಯಾಗಿದೆ. ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಬೇಕಿದೆ. 
-ವೆಂಕಟೇಶ್‌

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next