Advertisement

‘ಅಭಾವ ವೈರಾಗ್ಯ’ದಿಂದ ರೋಸಿ‌ ಹೋಗಿರುವ ಕಾಂಗ್ರೆಸ್ ಗೆ ಶಾಕ್ ಟ್ರೀಟ್ ಮೆಂಟ್: ಸುನಿಲ್ ಕುಮಾರ್

05:01 PM Apr 20, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂದು ಕಾಂಗ್ರೆಸ್ ವಿನಾ ಕಾರಣ ಹುಯಿಲೆಬ್ಬಿಸುತ್ತಿದ್ದು, ವಾಸ್ತವ ವಿಚಾರವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಮುಂಧೋರಣೆಯೊಂದಿಗೆ ಸಾಕಷ್ಟು ಎಚ್ಚರಿಕೆ ವಹಿಸಿ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಈಗ ಸೋಲಾರ್ ಹಾಗೂ ಪವನಶಕ್ತಿಯ ಮೂಲದಿಂದ ಲಭಿಸುತ್ತಿದೆ. ಹೀಗಾಗಿ ವಿದ್ಯುತ್ ಕ್ಷಾಮ ಎಂಬ ಕಾಂಗ್ರೆಸ್ ಕಟ್ಟುಕತೆಯಲ್ಲಿ ಅರ್ಥವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಪ್ರತಿನಿತ್ಯ ಸರಾಸರಿ 13500 ರಿಂದ 14500 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಲ್ಲ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭಿಸುತ್ತಿದೆ. ಈ ದಿನ ರಾಜ್ಯದಲ್ಲಿ 10400 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಎನ್ನಬಹುದಾದ 14800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕಳೆದ ಮಾರ್ಚ 21 ರಂದು ಎದುರಾಗಿತ್ತು. ಆಗಲೂ‌ ನಮಗೆ ಕಲ್ಲಿದ್ದಲು ಕೊರತೆ ಉಂಟಾಗಿರಲಿಲ್ಲ. ಹೀಗಿರುವಾಗ ಸಾಮಾನ್ಯ ಬೇಡಿಕೆಯ ದಿನದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದ್ದಾರೆ.

ಎಂತಹದೇ ದುರಿತ ಸ್ಥಿತಿ ನಿರ್ಮಾಣವಾದರೂ ರಾಜ್ಯದ ಎಲ್ಲ ಬೇಡಿಕೆಗಳನ್ನು ಮೂರು ದಿನಗಳ‌‌ ಕಾಲ ನೀಗಿಸಬಹುದಾದಷ್ಟು ಕಲ್ಲಿದ್ದಲು ದಾಸ್ತಾನು ರಾಜ್ಯದಲ್ಲಿ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸೃಷ್ಟಿಸಿರುವ ಈ ಅಪಪ್ರಚಾರದಿಂದ ರಾಜ್ಯದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೇ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಅದು ಸರಬರಾಜಿನಲ್ಲಿ ಆದ ಸಮಸ್ಯೆಯೇ ವಿನಾ ಕಲ್ಲಿದ್ದಲು ಕೊರತೆಯಿಂದ ಆಗಿದ್ದಲ್ಲ ಎಂದು ಅವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್ ಸೆಟ್ ಗಳಿಗೆ ಅಗತ್ಯವಾದ ವಿದ್ಯುತ್ ಬೇಡಿಕೆ ಪ್ರಮಾಣ ಕುಗ್ಗಿದೆ. ಬೇಡಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೇವೆಯೇ ಹೊರತು ಕಲ್ಲಿದ್ದಲು ಕೊರತೆಗಾಗಿ ಅಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 7000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ ವಿದ್ಯುತ್ ಕೊರತೆಯ ಪ್ರಶ್ನೆಯೇ ಉದ್ಭವಿಸದು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ 2004 ರಿಂದ 2014 ರ ಅವಧಿಯಲ್ಲಿ 725 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ರಾಜ್ಯಕ್ಕೆ ಪೂರೈಕೆಯಾಗಿತ್ತು. ಆದರೆ 2015 ರಿಂದ 2022 ರ ಅವಧಿಯಲ್ಲಿ792 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ರಾಜ್ಯದ ವಿದ್ಯುತ್ ಹಿತಾಸಕ್ತಿ ಕಾಪಾಡುವುದಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಕಲ್ಲಿದ್ದಲು ಪೂರೈಕೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಹಿಂದೆ ಬಿದ್ದಿಲ್ಲ.
ಅಧಿಕಾರದ “ಅಭಾವ ವೈರಾಗ್ಯ” ದಿಂದ ರೋಸಿ‌ ಹೋಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿದ್ಯುತ್ ಅಭಾವ ಇದೆ ಎಂಬ ಪ್ರಹಸನ ಸ್ರಷ್ಟಿಸಿದರೆ ಜನರು ” ಶಾಕ್ ಟ್ರೀಟ್ ಮೆಂಟ್ ” ನೀಡುತ್ತಾರೆ ಎಂಬುದನ್ನು‌ ಮರೆಯಬಾರದು. ಸಿದ್ದರಾಮಯ್ಯ ಸರಕಾರದಲ್ಲಿ ರಾಜ್ಯಕ್ಕೆ ನೀಡಿದ್ದ “ಕತ್ತಲೆಭಾಗ್ಯದ” ದುರ್ದಿನಗಳನ್ನು ಸಾರ್ವಜನಿಕರು‌ ಇನ್ನೂ ಮರೆತಿಲ್ಲ. ಅಪಪ್ರಚಾರ ನಡೆಸುವಾಗ ಕಾಂಗ್ರೆಸಿಗರು ಹತ್ತು ಬಾರಿ ಯೋಚಿಸಿ ಅಡಿಇಡಲಿ ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next