ಶಹಾಬಾದ: ಐತಿಹಾಸಿಕ ಕೋರೆಗಾಂವ್ ಯುದ್ಧವನ್ನು ಮಾದರಿಯಾಗಿ ಇಟ್ಟುಕೊಂಡು ಯುವಕರು ಸಂಘಟಿತರಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದು ದಲಿತ ಮುಖಂಡ ಸುರೇಶ ಮೆಂಗನ್ ಹೇಳಿದರು.
ಭಂಕೂರ ಗ್ರಾಮದ ವೃತ್ತದಲ್ಲಿರುವ ಡಾ| ಬಿ.ಆರ್ ಅಂಬೇಡ್ಕರ್ ಮಾರ್ಗದಲ್ಲಿ ದಸಂಸ ಜಿಲ್ಲಾ ಶಾಖೆ ಹಾಗೂ ಅಂಬೇಡ್ಕರ್ ತರುಣ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನಾಚರಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಭಾವಚಿತ್ರಕ್ಕೆ ಮೇಣದ ದೀಪ ಅರ್ಪಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿಯಲ್ಲದೇ ಇತಿಹಾಸಕಾರ, ಚಿಂತಕರಾಗಿದ್ದರು. ಕೋರೆಗಾಂವ್ ಘಟನೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿದ್ದೇ ಅವರು ಎಂದರು.
ಕೋರೆಗಾಂವ ಯುದ್ಧ ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರ ದಲಿತ ಹೋರಾಟಕ್ಕೆ ಮುನ್ನುಡಿ ಬರೆಯಿತು. 1818 ಜನವರಿ 1 ಕೋರೆಗಾಂವ್ ಯುದ್ಧ ನಡೆದ ದಿನವಾಗಿದ್ದು ಭಾರತೀಯರು ಜ. 1ನ್ನು ಸ್ವಾಭಿಮಾನಿ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶದಲ್ಲಿ ಇಂದಿಗೂ ಕೋರೆಗಾಂವ ಯುದ್ಧವನ್ನು ಸ್ವಾಭಿಮಾನದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ, ಅಸಾಧ್ಯ ಕಾರ್ಯವನ್ನು ಸಂಘಟನೆಯಿಂದ ಸಾಧ್ಯ ಮಾಡಿ ತೋರಿಸಿದ 1818ರ ಭೀಮಾ ಕೋರೆಗಾಂವ್ ಯುದ್ಧ ವಿಶ್ವಕ್ಕೆ ದಲಿತ ಹಾಗೂ ಭಾರತೀಯರ ಶಕ್ತಿಯನ್ನು ತೋರಿಸಿಕೊಟ್ಟ ಮಹಾಯುದ್ಧವಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಶರಣಬಸಪ್ಪ ಧನ್ನಾ, ಅಣ್ಣಪ್ಪ ಸರಡಗಿ, ನಾಗರಾಜ ಧನ್ನಾ, ತೇಜಸ್ ಧನ್ನಾ, ನಾಗೇಂದ್ರಪ್ಪ ಪಾಳಾ ಹಾಗೂ ಅಂಬೇಡ್ಕರ್ ತರುಣ ಸಂಘದ ಪದಾಧಿಕಾರಿಗಳು ಇದ್ದರು.