ಉಡುಪಿ: ಮುಂಗಾರು ಮಳೆಗೆ ಕೊಂಕಣ ರೈಲ್ವೇ ಸರ್ವ ಸನ್ನದ್ಧವಾಗಿದೆ. ಕೊಂಕಣ ರೈಲ್ವೇ ಕಾರ್ಪೊರೇಶನ್ ಎಲ್ಲ ಯೋಜಿತ ಸುರಕ್ಷತಾ ಕಾರ್ಯ ಪೂರ್ಣ ಗೊಳಿಸುವ ಮೂಲಕ ಕೊಲಾಡ್‌ನಿಂದ ಮಂಗಳೂರು ಸಮೀಪದ ತೋಕೂರು ನಿಲ್ದಾಣದ ನಡುವಿನ ಕರಾವಳಿ ಪ್ರದೇಶದಲ್ಲಿ ಮಳೆಗಾಲ ಎದುರಿಸಲು ಸಜ್ಜಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ. ವರ್ಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಸ್ತು, ವೇಗ ನಿಯಂತ್ರಣ
ಮಳೆಗಾಲದಲ್ಲಿ 974 ಸಿಬಂದಿ ಈ ಮಾರ್ಗದಲ್ಲಿ ಗಸ್ತು ತಿರುಗಲಿದ್ದಾರೆ. ಕೆಲವು ಸ್ಥಳಗಳಲ್ಲಿ 24 ಗಂಟೆಗಳ ಕಾಲವೂ ಕಾವಲುಗಾರರನ್ನು ನಿಯೋಜಿಸಲಾಗಿದೆ. ಭಾರೀ ಮಳೆ ಸಂದರ್ಭ ಚಾಲಕರಿಗೆ ದೂರದ ಚಿತ್ರಣ ಸ್ಪಷ್ಟವಾಗಿ ಗೋಚರಿಸದ ಹಿನ್ನೆಲೆಯಲ್ಲಿ ದುರ್ಬಲ ಭೂಭಾಗದಲ್ಲಿ ರೈಲಿನ ವೇಗದ ಮಿತಿಯನ್ನು 40 ಕಿ.ಮೀ. ಇಳಿಸಲಾಗಿದೆ. ಆಪರೇಷನ್ ಥಿಯೇಟರ್, ತುರ್ತು ವೈದ್ಯ ಕೀಯ ನೆರವು ನೀಡುವ ಸ್ವಯಂ ಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್, ಅಪಘಾತ ಪರಿಹಾರ ರೈಲು ರತ್ನಗಿರಿ ಮತ್ತು ವೆರ್ಣದಲ್ಲಿ ಸಿದ್ಧವಾಗಿವೆ.
ನಿಯಂತ್ರಣ ಕಚೇರಿ / ನಿಲ್ದಾಣವನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಸುರಕ್ಷಾ ವಿಭಾಗದ ಎಲ್ಲ ಸಿಬಂದಿಗೆ ಮೊಬೈಲ್ ಒದಗಿಸಲಾಗಿದೆ. ಲೋಕೊ ಪೈಲಟ್‌ಗಳು ಮತ್ತು ರೈಲುಗಳ ಕಾವಲುಗಾರರಿಗೆ ವಾಕಿಟಾಕಿ ಒದಗಿಸಲಾಗಿದೆ. ಬೇಲಾಪುರ, ರತ್ನಾಗಿರಿ ಮತ್ತು ಮಡಗಾಂವ್‌ನಲ್ಲಿರುವ ನಿಯಂತ್ರಣ ಕೊಠಡಿಗಳು ಮಳೆಗಾಲದಲ್ಲಿ 24×7 ಕೆಲಸ ಮಾಡುತ್ತಿವೆ ಎಂದರು.
ರೈಲು ಸಂಚಾರದ ಸ್ಥಿತಿಯನ್ನು
www.konkanrailway.com ವೆಬ್‌ಸೈಟ್ ಮೂಲಕ ಅಥವಾ 139ಕ್ಕೆ ಕರೆ ಮಾಡುವ ಮೂಲಕ ಇಲ್ಲವೆ ಕೆಆರ್‌ಸಿಎಲ್ ಆ್ಯಪ್ ಮೂಲಕ ಪರಿಶೀಲಿಸಬಹುದಾಗಿದೆ.