Advertisement

ಕೊಡಂಕೂರು ವಾರ್ಡ್‌ ಚರಂಡಿ ಸ್ವಚ್ಛತೆ ಇಲ್ಲ

11:05 PM Jun 10, 2020 | Sriram |

ಮಲ್ಪೆ : ಮುಂಗಾರು ನಿಧಾನಕ್ಕೆ ಬಿರುಸು ಪಡೆಯುತ್ತಿದ್ದರೂ ಕೊಡಂಕೂರು ವಾರ್ಡ್‌ನಲ್ಲಿ ಮಳೆಗಾಲಕ್ಕೆ ಮುನ್ನ ಆಗಬೇಕಾದ ಸಿದ್ಧತೆಗಳು ಸರಿಯಾದ ಸಮಯಕ್ಕೆ ಆಗದೆ ಕೆಲವೆಡೆ ಮಳೆಗಾಲದ ಅವಾಂತರ ಸೃಷ್ಟಿಯಾಗುತ್ತಿವೆ. ಸಣ್ಣ ಮಳೆಗೂ ರಸ್ತೆ ತೋಡಿನಂತಾಗುತ್ತಿದೆ. ವಾರ್ಡ್‌ನ ಅನೇಕ ಕಡೆಗಳಲ್ಲಿ ಚರಂಡಿ ಸ್ವಚ್ಛತೆ, ಹೂಳೆತ್ತುವ ಕಾರ್ಯ, ತ್ಯಾಜ್ಯ ನಿರ್ವಹಣೆಯಾಗಿಲ್ಲ.

Advertisement

ಪೇಟೆ ಮಾರ್ಗದಲ್ಲಿ ಕೃತಕ ನೆರೆ
ಕೊಡಂಕೂರು ಪೇಟೆ ಮಾರ್ಗ, ಮುಖ್ಯ ಜಂಕ್ಷನ್‌ನಲ್ಲಿಯೇ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇಲ್ಲಿನ ಅಂಗನವಾಡಿ ಸಮೀಪದ ರಸ್ತೆಯ ಬದಿಯಲ್ಲಿ ಹೊಸ ಚರಂಡಿ ನಿರ್ಮಾಣ ಆದಲ್ಲಿ ಸಮಸ್ಯೆ ಉಂಟಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕೆಸ್ಸಾರ್ಟಿಸಿ ಡಿಪೋ ಮತ್ತು ನ್ಯೂ ಕಾಲನಿಯ ಚರಂಡಿಗಳಿಂದ ಹರಿದು ಬರುವ ನೀರು ಹೊಸ ಚರಂಡಿಯಲ್ಲಿ ರಭಸವಾಗಿ ಬಂದು ಕಸಕಡ್ಡಿಗಳೊಂದಿಗೆ ಪೇಟೆಯಲ್ಲಿ ಕೃತಕ ನೆರೆಯನ್ನು ಸೃಷ್ಟಿಸುತ್ತಿದೆ. ಇಲ್ಲಿನ ಸೆಲೂನ್‌, ಹೊಟೇಲ್‌, ಟೈಲರಿಂಗ್‌, ಫ್ಯಾನ್ಸಿ ಅಂಗಡಿಗಳಿಗೆ ನೀರು ನುಗ್ಗುತ್ತಿದೆ. ಸಾರ್ವಜನಿಕರು ಸಂಚಾರಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದೆ. ನೀರಿನ ರಭಸಕ್ಕೆ ಚರಂಡಿ ಮೇಲೆ ಹಾಸಲಾದ ಚಪ್ಪಡಿ ಮೇಲೆದ್ದು ಹೋಗಿದ್ದಲ್ಲದೆ, ರಸ್ತೆಯು ಉದ್ದಕ್ಕೆ ಕುಸಿದಿದೆ. ಚರಂಡಿಯ ಅವ್ಯವಸ್ಥೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರ್ಮಾಣಗೊಂಡ ಹೊಸ ಚರಂಡಿ ಮುಖ್ಯ ರಸ್ತೆಯ ಕೂಡುವಲ್ಲಿ ಅಡ್ಡಕ್ಕೆ ಹೋದ ಚರಂಡಿಗೆ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಅಡ್ಡಕ್ಕೆ ಹೋದ ಚರಂಡಿ ಅಗಲ ಕಿರಿದಾದ ಕಾರಣ ಮತ್ತು ಚರಂಡಿಯೊಳಗೆ ಇತರ ಪೈಪ್‌ಲೈನ್‌ ಅಳವಡಿಸಲಾಗಿದ್ದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.

ಕೆಸ್ಸಾರ್ಟಿಸಿ ಡಿಪೋದಿಂದ ಬರುವ ನೀರಿನಿಂದಾಗಿ ಕೊಡಂಕೂರು ನ್ಯೂ ಕಾಲನಿಯಲ್ಲಿನ ಅಶ್ರಫ್‌ ಹಾಗೂ ಇನ್ನಿತರ ಕೆಲವೊಂದು ಮನೆಗಳಿಗೆ ನೀರು ನುಗ್ಗುತ್ತಿದೆ. ಪಕ್ಕದಲ್ಲೇ ಅಂಗನವಾಡಿ ಶಾಲೆಯೂ ಇದೆ.

ಕೈತೋಡಿನಲ್ಲಿ ಮರಮಟ್ಟು
ತಾರಕಟ್ಟ ರಸ್ತೆಯ ಸಮೀಪದ 300 ಮೀಟರ್‌ ಉದ್ದಕ್ಕೆ ಕೈತೋಡು ಇದೆ. ಇದರಲ್ಲಿ ಹರಿಯುವ ನೀರು ಇಂದ್ರಾಣಿ ನದಿಯನ್ನು ಸೇರುತ್ತಿತ್ತು. ಇತ್ತೀಚಿನ ಹಲವಾರು ವರ್ಷಗಳಿಂದ ಈ ತೋಡಿನಲ್ಲಿ ಮರಮಟ್ಟುಗಳು ಬೆಳೆದು ನೀರು ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಮಧ್ವರಾಜ್‌ ಬಡಾವಣೆಯಲ್ಲಿ 25 ಮನೆಗಳು ಸೇರಿದಂತೆ ಒಟ್ಟು 30 ಮನೆಗಳು ಇವೆ. ಮಳೆ ನೀರು ಮತ್ತು ಬಡಾವಣೆಯ ಕೊಳಚೆ ನೀರು ತೋಡಿನಲ್ಲಿ ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ತೋಡಿನಲ್ಲಿ ನೀರು ಹರಿಯದೆ ಸೊಳ್ಳೆ ಕಾಟ ಹೆಚ್ಚಿದೆ. ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರಾದ ರಾಜೇಂದ್ರ ಅವರು. ಕೊಡಂಕೂರು ವಾರ್ಡ್‌ ವ್ಯಾಪ್ತಿಯಲ್ಲಿರುವ ಕಂಗಣಬೆಟ್ಟು ದೈವಸ್ಥಾನದ ದಕ್ಷಿಣ ಬದಿಯಲ್ಲಿ ಸ್ಲಂ ಏರಿಯಾದ ತರಹ ಪ್ರದೇಶ ನಿರ್ಮಾಣವಾಗಿದೆ. ಇಲ್ಲಿನ ಸುಮಾರು 10-15 ಮನೆಗಳ ಸುತ್ತ ಇತರ ಕಡೆಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಸುತ್ತಲೂ ಗಬ್ಬೆದು ಹೋಗಿರುವುದರಿಂದ ಇಲ್ಲಿನ ವಾಸ ಮಾಡುವವರಿಗೆ ದೇವರೇ ಗತಿ ಎನ್ನುವಂತಿದೆ.

ಹೈಮಾಸ್ಟ್‌ ದೀಪ ಉರಿಯುತ್ತಿಲ್ಲ
ವಾರ್ಡ್‌ನ ನ್ಯೂಕಾಲನಿಯ 1ನೇ ಕ್ರಾಸ್‌, ಪುತ್ರನ್‌ ಗ್ಯಾಸ್‌ ಬಳಿ 12ನೇ ಕ್ರಾಸ್‌ ಮತ್ತು ಕೊಡಂಕೂರು ಫ್ರೆಂಡ್ಸ್‌ ಕಟ್ಟಡದ ಬಳಿಯಲ್ಲಿರುವ ಹೈಮಾಸ್ಟ್‌ ದೀಪ 2-3ವರ್ಷದಿಂದ ಉರಿಯುತ್ತಿಲ್ಲ. ಇದರಿಂದಾಗಿ ಇಲ್ಲಿನ ನಾಗರಿಕರು ರಾತ್ರಿ ಭಯದಿಂದಲೇ ನಡೆದಾಡುವ ಪರಿಸ್ಥಿತಿ ಇದೆ. ಇದರಲ್ಲಿ ನ್ಯೂ-ಕಾಲನಿಯ ಮತ್ತು ಪುತ್ರನ್‌ ಗ್ಯಾಸ್‌ ಬಳಿಯಲ್ಲಿದ್ದ ಹೈಮಾಸ್ಟ್‌ ದೀಪವನ್ನು ದುರಸ್ತಿಗೆ ಕೊಂಡೊಯ್ಯಲಾಗಿದ್ದು 3 ತಿಂಗಳಾದರೂ ವಾಪಾಸು ಬಂದಿಲ್ಲ. ಅದರಂತೆ ಮೀನು ಮಾರುಕಟ್ಟೆ, ಪುತ್ರನ್‌ಗಾÂಸ್‌ ಜಂಕ್ಷನ್‌ ಬಳಿ, ಕೆಎಸ್‌ಆರ್‌ಟಿಸಿ ಡಿಪೋ ಬಳಿ ತ್ಯಾಜ್ಯ ಶೇಖರಗೊಳ್ಳುತ್ತಿದ್ದು ಮಳೆಗಾಲದಲ್ಲಿ ಸಮಸ್ಯೆಯನ್ನು ತಂದೊಡ್ಡಲಿದೆ.

Advertisement

ನೀರು ನೇರ ರಸ್ತೆಗೆ
ಕೊಡಂಕೂರು ಮುಖ್ಯ ಜಂಕ್ಷನ್‌ ಪೇಟೆ ಮಾರ್ಗದಲ್ಲಿ ಸಣ್ಣ ಮಳೆ ಬಂದರೂ ಅಸಮರ್ಪಕವಾದ ಚರಂಡಿ ವ್ಯವಸ್ಥೆಯಿಂದಾಗಿ ನೀರು ನೇರ ರಸ್ತೆಗೆ ಬಂದು ಕೊಳಕು ನೀರು ಅಂಗಡಿಯೊಳಗೆ ನುಗ್ಗುತ್ತದೆ. ನಮಗೆ ಇಲ್ಲಿ ವ್ಯಾಪಾರ ನಡೆಸಲು ತೊಂದರೆಯಾಗುತ್ತಿದೆ.
ಮಿತ್ರ ಪೂಜಾರಿ, ಸ್ಥಳೀಯ ಅಂಗಡಿ ಮಾಲಕರು

ಕಾರ್ಮಿಕರ ಕೊರತೆ
ಕೊಡಂಕೂರು ಪೇಟೆ ಮಾರ್ಗದಲ್ಲಿ ಚರಂಡಿಯ ಪ್ರಮುಖ ಸಮಸ್ಯೆ ಇದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಮಳೆಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ಎರಡು ತಿಂಗಳ ಹಿಂದೆಯೆ ನಮ್ಮ ವಾರ್ಡ್‌ನ ಚರಂಡಿಗಳ ಹೂಳೆತ್ತಲು ಅಗತ್ಯವಿರುವ ಜೆಸಿಬಿ, ಕಾರ್ಮಿಕರನ್ನು ಒದಗಿಸುವಂತೆ ನಗರಸಭೆಗೆ ಮನವಿ ಮಾಡಿದ್ದೇನೆ. ಕಾರ್ಮಿಕರ ಕೊರತೆಯಿಂದ ಕಾಮಗಾರಿ ಹಿಂದೆ ಬಿದ್ದಿದೆ.
– ಸಂಪಾವತಿ,
ಕೊಡಂಕೂರು ವಾರ್ಡ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next