Advertisement

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ತಬ್ಧ

01:32 PM Nov 30, 2017 | Team Udayavani |

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ 2010ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದ್ದು, ಜೂನ್‌ ತಿಂಗಳಿನಿಂದ ಘಟಕವೂ ಸ್ತಬ್ಧಗೊಂಡಿದೆ.

Advertisement

ಹದಿನೆಂಟು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 16.80 ಕೋಟಿ ರೂ. ವೆಚ್ಚದ ಈ ಯೋಜನೆ ಏಳು ವರ್ಷ ಆಗುತ್ತ ಬಂದರೂ ಪೂರ್ಣವಾಗಿಲ್ಲ. ಮಂಗಳೂರು ತಾಲೂಕಿನ ಮೂಲ್ಕಿ ವಿಭಾಗದಲ್ಲಿ ಹರಿಯುವ ಶಾಂಭವಿ ನದಿಗೆ ಬಳಕುಂಜೆ ಗ್ರಾಮದ ಬಳಿ ಜಾಕ್‌ವೆಲ್‌ ನಿರ್ಮಿಸಿ ಕೊಲ್ಲೂರು ಪದವಿನಲ್ಲಿ ಟ್ಯಾಂಕ್‌ ರಚಿಸಿ ಗುರುತ್ವಾಕರ್ಷಣೆಯ ಶಕ್ತಿಯಿಂದ ನೀರು ಸಂಗ್ರಹಿಸಿ, ಮೆನ್ನಬೆಟ್ಟು, ಕಟೀಲು, ಕಿನ್ನಿಗೋಳಿ, ಬಳಕುಂಜೆ, ಕಿಲ್ಲಾಡಿ, ಪಡುಪಣಂಬೂರು, ಅತಿಕಾರಿಬೆಟ್ಟು, ಐಕಳ, ಕೆಮ್ರಾಲ, ಹಳೆಯಂಗಡಿ – ಈ 10 ಗ್ರಾ.ಪಂ.ಗಳಿಗೆ ಸಂಬಂಧಿಸಿದ 18 ಗ್ರಾಮಗಳಿಗೆ ಕೊಳವೆ ಮೂಲಕವಾಗಿ ನೀರೊದಗಿಸುವ ಕಾಮಗಾರಿಯನ್ನು ಹೈದರಾಬಾದ್‌ ಮೂಲಕ ಸಾಯಿ ಸುಧೀರ್‌ ಇನ್‌ಫ್ರಾಸ್ಟ್ರಕ್ಟರ್‌ ಸಂಸ್ಥೆಗೆ ವಹಿಸಲಾಗಿತ್ತು. ಈ ಗುತ್ತಿಗೆದಾರರಿಗೆ ಈಗಾಗಲೇ 9.58 ಕೋಟಿ ರೂ. ಪಾವತಿಯಾಗಿದ್ದರೂ ನೀರು ಪೂರೈಕೆಯಾಗದೆ ಗ್ರಾಮಸ್ಥರು ಅತೀವ ತೊಂದರೆ ಅನುಭವಿಸುತ್ತಿದ್ದಾರೆ.

ಸಭೆ ನಡೆಸಿದರೂ ಫ‌ಲವಿಲ್ಲ
ಹತ್ತು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ನೀರು ಪೂರೈಕೆಯ 56 ಟ್ಯಾಂಕ್‌ಗಳಿದ್ದು, ಸದ್ಯ 26ಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಆಪರೇಟರ್‌ ನೇಮಕವಾಗಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಒಬ್ಬರಿದ್ದು, ಅದು ಸಾಲುವುದಿಲ್ಲ. ನೀರು ಶುದ್ಧೀಕರಣ ಘಟಕಕ್ಕೆ ತಜ್ಞರ ನೇಮಕವೂ ಆಗಿಲ್ಲ. ಪೈಪ್‌ಗ್ಳ ಮೂಲಕ ನೀರು ಸರಬರಾಜು ಮಾಡಲಾಗುವುದು. ಮೀಟರ್‌ ಅಳವಡಿಸಿ, ದರ ನಿಗದಿಪಡಿಸಲಾಗುವುದು. ಯೋಜನೆಯ ಸಿಬಂದಿ ವೇತನ ಹಾಗೂ ವಿದ್ಯುತ್‌ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಜಿ.ಪಂ. ಅಧಿಕಾರಿ ವರ್ಗದ ಸಭೆ ನಡೆಸಿ, ವ್ಯವಸ್ಥೆ ಮಾಡಿದ್ದರೂ ಸಮರ್ಪಕವಾಗಿಲ್ಲ.

ಅವ್ಯವಸ್ಥೆ ಆಗರ
ಕೊಲ್ಲೂರು ಪದವಿನಲ್ಲಿರುವ ಘಟಕದಲ್ಲಿ ಭದ್ರತಾ ಸಿಬಂದಿ / ಕಾವಲುಗಾರರಿಲ್ಲದೆ ಶ್ಮಶಾನ ಮೌನವಾಗಿದೆ. ಸಿಬಂದಿ ವಸತಿಗೃಹಗಳ ಬಾಗಿಲು ಮುರಿದಿದ್ದು, ಅಕ್ರಮ ಚಟುವಟಿಕೆಯ ತಾಣವಾಗಿದೆ. ಮುಖ್ಯ ಗೇಟ್‌ ಕೂಡ ತೆರೆದಿದೆ. ಘಟಕದ ಸುತ್ತ ಹುಲ್ಲು ಬೆಳೆದಿದ್ದು, ಒಂದು ಸಲ ಜೆಸಿಬಿಯಿಂದ ಕೆಲಸ
ಮಾಡಿದಂತೆ ಗೋಚರವಾಗುತ್ತಿದೆ. ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗೋಚರಿಸಿದೆ. ಬಹು ಗ್ರಾಮ ಯೋಜನೆ ಪೂರ್ಣವಾಗಿಅನುಷ್ಠಾನಗೊಂಡರೆ ಉಪಯೋಗ ಆದೀತು. ಸಮಿತಿಯ ಸಭೆ ನಡೆಸಿದ್ದರೂ ಜಿ.ಪಂ. ಸದಸ್ಯರಿಗೆ ಯಾವುದೇ ಮಾಹಿತಿ ಇರಲಿಲ್ಲವಂತೆ.

ಕಳಪೆ ಕಾಮಗಾರಿ, ತಾಂತ್ರಿಕ ವೈಫ‌ಲ್ಯ
ಕಿನ್ನಿಗೋಳಿ ಕುಡಿಯವ ನೀರಿನ ಯೋಜನೆಯ ಘಟಕ ಸದ್ಯ ಸಂರ್ಪೂಣ ಸ್ಥಗಿತವಾಗಿದೆ. ಯಂತ್ರಗಳು ಚಾಲನೆ ಇಲ್ಲದೆ ತುಕ್ಕು ಹಿಡಿದಿವೆ. ಈ ಬಗ್ಗೆ ಜಿಲ್ಲಾ ಪಂಚಾಯತ್‌ ಸಭೆಯಲ್ಲಿ ಪ್ರಶ್ನಿಸಲಾಗುವುದು ಹಾಗೂ ಅಧಿಕಾರಿಗಳ ಮೂಲಕ ಇದರ ಕಾರಣ ತಿಳಿದು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ 7000 ಘಟಕಗಳು ಮಾರ್ಚ್‌ 16ರ ಒಳಗೆ ಪೂರ್ತಿಯಾಗುತ್ತವೆ ಎಂದು ವಿಧಾನಸಭೆ, ಪರಿಷತ್‌ಗಳಲ್ಲಿ ಘೋಷಣೆ ಮಾಡಿದೆ. ಕುಂಟುತ್ತಾ ಸಾಗಿರುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ಕಾಮಗಾರಿಗೆ ಸ್ಪಷ್ಟ ನಿದರ್ಶನ. ಎಲ್ಲ ಅವಾಂತರಗಳಿಗೂ ಸರಕಾರವೇ ನೇರ ಹೊಳೆ. ಕಳಪೆ ಕಾಮಗಾರಿ ಹಾಗೂ ತಾಂತ್ರಿಕ ವೈಫ‌ಲ್ಯದಿಂದ ಹೀಗಾಗಿದೆ.
ವಿನೋದ್‌ ಕುಮಾರ್‌ ಬೊಳ್ಳೂರು, ಜಿ.ಪಂ. ಸದಸ್ಯರು

Advertisement

ರಘುನಾಥ ಕಾಮತ್‌ ಕೆಂಚನಕೆರೆ 

Advertisement

Udayavani is now on Telegram. Click here to join our channel and stay updated with the latest news.

Next