Advertisement

ಮಾತಿನ ಮಂಟಪದಲ್ಲಿ “ರಾಜ-ಹಂಸ’ಕಲ್ಯಾಣ

10:10 AM Sep 09, 2017 | Team Udayavani |

ಆತನಿಗೆ ತನ್ನ ಅಳಿಯ ಅಷ್ಟೇ ಮುಖ್ಯನಲ್ಲ, ಅವನ ಕುಟುಂಬದವರು ಸಹ ಅಷ್ಟೇ ಮುಖ್ಯ. ಕಾರಣ, ನಾಳೆ ತನ್ನ ಮಗಳು ಆ ಕುಟುಂಬದವರೊಂದಿಗೇ ಇರಬೇಕು, ಅವರ ಜೊತೆಗೇ ಬದುಕಬೇಕು. ಹಾಗಾಗಿ ಅಳಿಯನಷ್ಟೇ ಅಲ್ಲ, ಆತನ ಕುಟುಂಬದವರು ಸಹ ಸುಸಂಸ್ಕೃತರು, ಹೃದಯವಂತರಾಗಿರಬೇಕು ಎಂಬುದು ಆತನ ಆಸೆ. ಸರಿ, ಅಳಿಯನಾಗುವವನು ತನ್ನ ಕುಟುಂಬದವರನ್ನು ಕರೆಸುತ್ತಾನೆ. ಎರಡೂ ಕುಟುಂಬದವರು ಊರ ಜಾತ್ರೆಯಲ್ಲಿ ಒಟ್ಟಿಗೆ ಡ್ಯಾನ್ಸ್‌ ಮಾಡುತ್ತಾರೆ.

Advertisement

ಇನ್ನೇನು ಎರಡೂ ಕುಟುಂಬಗಳು ಒಟ್ಟಿಗೆ ನಿಂತು, ರಾಜ ಮತ್ತು ಹಂಸಳ ಮದುವೆ ಮಾಡಿಕೊಡಬೇಕು ಎನ್ನುವಷ್ಟರಲ್ಲಿ ಒಂದು ಬಾಂಬು ಸಿಡಿಯುತ್ತದೆ. ಒಂದಾಗಬೇಕಿದ್ದ ಎರಡೂ ಕುಟುಂಬಗಳು ಒಂದು ಹೆಜ್ಜೆ ಹಿಂದೆ ಇಡಬೇಕಾಗುತ್ತದೆ. ರಾಜ-ಹಂಸ ಮದುವೆಯಾಗಬೇಕು, ಆ ಎರಡೂ ಕುಟುಂಬಗಳು ಒಂದಾಗಬೇಕು ಎಂದರೆ, ರಾಜನ ಕುಟುಂಬದವರು ಆ ಸವಾಲು ಗೆಲ್ಲಬೇಕು. ಆ ಸವಾಲೇನು ಎಂದು ಕೇಳಬೇಡಿ. ಕುತೂಹಲವಿದ್ದರೆ ಒಮ್ಮೆ ಚಿತ್ರ ನೋಡಿ.

“ರಾಜ-ಹಂಸ’ ಚಿತ್ರವು ಲವ್ವಿನಿಂದ ಶುರುವಾಗಿ, ಮದುವೆಗೆ ಮುಗಿಯುವ ಒಂದು ಕಥೆ. ರಾಜ್‌ ಎಂಬ ಆಗರ್ಭ ಶ್ರೀಮಂತ ಹುಡುಗ ಮತ್ತು ಹಂಸಾಕ್ಷಿ ಎಂಬ ಹಳ್ಳಿಯ ಹುಡುಗಿಯ ನಡುವೆ ನಡೆಯುವ ಪ್ರೇಮಕಥೆಯೇ ಈ ಚಿತ್ರದ ಆತ್ಮ. ಪ್ಯಾಟೆ ಹುಡುಗ ಮತ್ತು ಹಳ್ಳಿ ಹುಡುಗಿಯ ನಡುವಿನ ಪ್ರೇಮಕಥೆಗಳಿಗೆ ಬರವಿಲ್ಲ. ಈ ತನಕ ಸಾಕಷ್ಟು ಅಂತಹ ಚಿತ್ರಗಳು ಬಂದಿವೆ. ಆದರೆ, ಇಲ್ಲಿ ಮಗನ ಆಸೆಯನ್ನು ಈಡೇರಿಸುವುದಕ್ಕೆ, ಆತನ ಮನೆಯವರು ಏನೆಲ್ಲಾ ಮಾಡಬೇಕಾಗುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜಡೇಶ್‌ ಕುಮಾರ್‌.

ಹಾಗಾಗಿ ಚಿತ್ರದ ಮೊದಲಾರ್ಧ ಬರೀ ಹುಡುಗ-ಹುಡುಗಿಯ ಸುತ್ತ ಸುತ್ತುವ ಕಥೆಯು, ದ್ವಿತೀಯಾರ್ಧದಲ್ಲಿ ಫ್ಯಾಮಿಲಿ ಚಿತ್ರವಾಗುತ್ತದೆ. ಈ ಹಂತದಲ್ಲಿ ಪಾತ್ರಗಳು, ಟ್ವಿಸ್ಟುಗಳು, ಘಟನೆಗಳು ಎಲ್ಲವೂ ಹೆಚ್ಚಾಗುತ್ತಾ ಹೋಗಿ ಚಿತ್ರ ದೊಡ್ಡದಾಗುತ್ತಾ ಹೋಗುತ್ತದೆ. ಹಾಗಾಗಿಯೇ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧದಲ್ಲಿ ಚಿತ್ರಕ್ಕೊಂದು ವೇಗ ಬರುತ್ತದೆ. ಬಹುಶಃ ಪಾತ್ರಗಳು, ಟ್ವಿಸ್ಟುಗಳು, ಘಟನೆಗಳು ಇರದಿದ್ದರೆ, “ರಾಜ-ಹಂಸ’ ಒಂದು ಮಾಮೂಲಿ ಕಥೆಯಾಗಿಬಿಡುತಿತ್ತು.

ಏಕೆಂದರೆ, ಇದುವರೆಗೂ ಸಾಕಷ್ಟು ಲವ್‌ಸ್ಟೋರಿಗಳು ಬಂದಿವೆ ಮತ್ತು ಪ್ರೇಕ್ಷಕರು ಸಹ ಒಂದೇ ತರಹದ ಪ್ರೇಮಕಥೆಗಳನ್ನು ನೋಡಿ ಸುಸ್ತಾಗಿದ್ದಾರೆ. ಇದು ಸಹ ಹತ್ತರಲ್ಲಿ ಹನ್ನೊಂದನೆಯದಾಗಬಾರದು ಎಂದು ಚಿತ್ರತಂಡದವರು ತಾಂತ್ರಿಕವಾಗಿ ಚಿತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಎರಡ್ಮೂರು ಗುನುಗುವ ಹಾಡುಗಳು, ಕಣ್ಸೆಳೆಯುವ ದೃಶ್ಯಗಳು, ಅದ್ಭುತವಾದ ಕೆಲವು ಲೊಕೇಶನ್‌ಗಳನ್ನೆಲ್ಲಾ ಸೇರಿಸಿ ಚಿತ್ರವನ್ನು ಸಿಂಗಾರಗೊಳಿಸಲಾಗಿದೆ. ಇದೆಲ್ಲದರ ಜೊತೆಗೆ ಕೆಲವು ಮಾತುಗಳನ್ನು ಸಹ ಉದಾಹರಿಸಬಹುದು.

Advertisement

ಚಿತ್ರದಲ್ಲಿ ಹೇಗೆ ಮಾತುಗಳು ಚೆನ್ನಾಗಿವೆ ಎನಿಸುತ್ತದೋ, ಕೆಲವೊಮ್ಮೆ ಅದು ಅತಿಯಾಯಿತು ಎನಿಸುವುದೂ ಉಂಟು. ಅಷ್ಟರ ಮಟ್ಟಿಗೆ ಮಾತಿದೆ ಮತ್ತು ಪ್ರತಿ ಮಾತಿನಲ್ಲೂ ಪಂಚ್‌ ಕೊಡುವ ಪ್ರಯತ್ನವನ್ನು ಚಿತ್ರದುದ್ದಕ್ಕೂ ಮಾಡಲಾಗಿದೆ. ಹಾಗಾಗಿ ಭಾವನೆಗಳ ಮಂಟಪದಲ್ಲಿ ಆಗಬೇಕಿದ್ದ “ರಾಜ-ಹಂಸ’ರ ಮದುವೆ, ಮಾತಿನ ಮಂಟಪದಲ್ಲಾಗಿದೆ. ಬಹುಶಃ ಮಾತುಗಳಿಗೆ ಬ್ರೇಕ್‌ ಹಾಕಿ, ಚಿತ್ರವನ್ನು ಇನ್ನೊಂದಿಷ್ಟು ಚುರುಕು ಮಾಡಿದ್ದರೆ, ರಾಜ-ಹಂಸದಲ್ಲಿ ಸುಖಕರ ಪ್ರಯಾಣ ಮಾಡಿದ ಅನುಭವವಾಗುತಿತ್ತು.

ಮೊದಲೇ ಹೇಳಿದಂತೆ ಜೋಶ್ವಾ ಶ್ರೀಧರ್‌ ಅವರ ಹಾಡುಗಳು, ಆರೂರು ಸುಧಾಕರ್‌ ಅವರ ಛಾಯಾಗ್ರಹಣ ಗಮನಸೆಳೆಯುತ್ತವೆ. ಕಲಾವಿದರ ಪೈಕಿ ಇಡೀ ಚಿತ್ರವನ್ನು ಆವರಿಸಿರುವುದು ಗೌರಿಶಿಖರ್‌ ಮತ್ತು ರಂಜಿನಿ ರಾಘವನ್‌. ಈ ಪೈಕಿ ಗೌರಿಶಿಖರ್‌ ಮಾತಿಗಿಂಥ ಅಭಿನಯಕ್ಕೆ ಹೆಚ್ಚು ಗಮನ ಕೊಟ್ಟರೆ, ಭವಿಷ್ಯದಲ್ಲಿ ಒಂದಿಷ್ಟು ಮಿಂಚಬಹುದು. ಮಿಕ್ಕಂತೆ ರಾಜು ತಾಳಿಕೋಟೆ, ಬಿ.ಸಿ. ಪಾಟೀಲ್‌, ಶ್ರೀಧರ್‌, ಯಮುನಾ ಸೇರಿದಂತೆ ಹಲವರು ನಟಿಸಿದ್ದಾರೆ ಮತ್ತು ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚಿತ್ರ: ರಾಜ-ಹಂಸ
ನಿರ್ದೇಶನ: ಜಡೇಶ್‌ ಕುಮಾರ್‌
ನಿರ್ಮಾಣ: ಜನಮನ ಸಿನಿಮಾಸ್‌
ತಾರಾಗಣ: ಗೌರಿಶಿಕರ್‌, ರಂಜಿನಿ ರಾಘವನ್‌, ಶ್ರೀಧರ್‌, ಯಮುನಾ, ಬಿ.ಸಿ. ಪಾಟೀಲ್‌, ವಿಜಯ್‌ ಚೆಂಡೂರ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next