Advertisement

ಪ್ರೇಯಸಿಯ ಸ್ನೇಹಿತನ ಕೊಂದವನಿಗೆ 10 ವರ್ಷ ಜೈಲು

12:30 PM Dec 15, 2018 | Team Udayavani |

ಬೆಂಗಳೂರು: ದೂರವಾಗಿದ್ದ ಪ್ರೇಯಸಿ ಜತೆ ಅನೂನ್ಯತೆಯಿಂದ ಇದ್ದ ಆಕೆಯ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಉತ್ತರ ಪ್ರದೇಶ ಮೂಲದ ರವಿರಾಣಾ ಸಿಂಗ್‌ ಎಂಬಾತನಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ವಿಧಿಸಿ ನಗರ ಸೆಷನ್ಸ್‌ ಕೋರ್ಟ್‌ ಆದೇಶ ನೀಡಿದೆ.

Advertisement

ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಫ್ಯಾಶನ್‌ ಡಿಸೈನ್‌ನಿಂಗ್‌ ಇಂಜಿನಿಯರ್‌ ಆಗಿದ್ದ ರವಿರಾಣಾ ಸಿಂಗ್‌ 2011ರ ಅಕ್ಟೋಬರ್‌ 16ರಂದು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿದ್ದ ತನ್ನ ಗೆಳತಿಯ ಮನೆಗೆ ತೆರಳಿ ಗಲಾಟೆ ನಡೆಸಿ ಆಕೆಗೆ ಚಾಕುವಿನಿಂದ ಇರಿದಿದ್ದ. ರಕ್ಷಿಸಲು ಬಂದ ಕೌಶಿಕ್‌ ಎಂಬಾತನಿಗೂ ಇರಿದು ಕೊಲೆ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಈ ಪ್ರಕರಣದ ವಿಚಾರಣೆ ನಡೆಸಿದ ನಗರದ 69ನೇ ಸೆಷನ್ಸ್‌ ಕೋರ್ಟ್‌  ನ್ಯಾಯಾಧೀಶರಾದ ನಂದಕುಮಾರ್‌ ಬಿ. ಅವರು,  ಪ್ರಕರಣದದಲ್ಲಿ ಆರೋಪಿ ಕೃತ್ಯ ಎಸಗಿದ್ದ ಸಂಬಂಧ ಒದಗಿಸಿದ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂಶನ್‌ ವಾದವನ್ನು ಪುರಸ್ಕರಿಸಿದ್ದಾರೆ.

ಜತೆಗೆ, ಆರೋಪಿ ರವಿರಾಣಾ ಸಿಂಗ್‌ಗೆ ಐಪಿಸಿ ಕಲಂ 304ರ ಅನ್ವಯ ( ಉದ್ದೇಶಪೂರ್ವಕವಲ್ಲದ ಕೊಲೆ) 10 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಜತೆಗೆ, ದೂರುದಾರೆಗೂ ಚಾಕುವಿನಿಂದ ಇರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ಐದು ವರ್ಷ ಜೈಲು ಹಾಗೂ 5  ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಆರೋಪಿಯು ಕಟ್ಟುವ 25 ಸಾವಿರ ರೂ. ದಂಡದ ಮೊತ್ತವನ್ನು ಮೃತ ಕೌಶಿಕ್‌  ಪೋಷಕರಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಪ್ರಶಾಂತ್‌ ಎಸ್‌.ತೋರಗಲ್‌ ವಾದಿಸಿದ್ದರು.

Advertisement

ಅನುಮಾನ ತಂದಿಟ್ಟಿತು ಸಾವು!: ಚೆನೈ ಮೂಲದ ಸ್ನೇಹಾ (ಹೆಸರು ಬದಲಿಸಲಾಗಿದೆ)  ಹಾಗೂ ಉತ್ತರ ಪ್ರದೇಶ ಮೂಲದ ರವಿರಾಣಾ ಸಿಂಗ್‌ ನಗರದಲ್ಲಿ ಕಾಲೇಜೊಂದರಲ್ಲಿ 2007ರಿಂದ 2011ರವರೆಗೆ ಜತೆಯಲ್ಲಿಯೇ ಫ್ಯಾಶನ್‌ ಡಿಸೈನಿಂಗ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ವಿದ್ಯಾಭ್ಯಾಸದ ಸಂಧರ್ಭದಲ್ಲಿ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಆದರೆ, ರವಿರಾಣಾ ಸಿಂಗ್‌ನ ಅನುಮಾನ ದೃಷ್ಟಿಗೆ ಬೇಸತ್ತು  ಸ್ನೇಹಾ ಆತನಿಂದ ದೂರಾಗಿದ್ದಳು.

ಪ್ರತಿಷ್ಠಿತ ಕಂಪೆನಿಯಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸ್ನೇಹಾ ಅವರಿಗೆ ನಗರದ ಕಾರ್ತಿಕ್‌ ಪರಿಚಯವಾಗಿ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸ್ನೇಹಾ ನೆಲೆಸಿದ್ದರು. ಸ್ನೇಹಾ ಕಾರ್ತಿಕ್‌ ಜತೆ ಸ್ನೇಹದಿಂದ ಇರುವುದನ್ನು ಕಂಡು ಸಹಿಸದ ರವಿರಾಣ ಹಲವು ಬಾರಿ ಜಗಳ ಮಾಡಿದ್ದ. 2011ರ ಅಕ್ಟೋಬರ್‌ 16ರಂದು ಸಂಜೆ 6.30ರ ಸುಮಾರಿಗೆ ಸ್ನೇಹಾಳ ಮನೆಗೆ ತೆರಳಿದ್ದ ಅಲ್ಲಿ ರವಿರಾಣಾ ಜಗಳ ಮಾಡಿ ವಾಪಾಸ್‌ ಬಂದಿದ್ದ.

ಇದಾದ ಕೆಲವೇ ಸಮಯದಲ್ಲಿ ಚಾಕು ತೆಗೆದುಕೊಂಡು ಮನೆಗೆ ಹೋದ ಆತ, ಸ್ನೇಹಾಳಿಗೆ ಇರಿಯಲು ಮುಂದಾದ, ಈ ವೇಳೆ ಅಡ್ಡಬಂದ ಕಾರ್ತಿಕ್‌ ಹೊಟ್ಟೆ ಹಾಗೂ ಎದೆಭಾಗಕ್ಕೆ ಇರಿದಿದ್ದ. ಆತನನ್ನು ಸ್ಥಳೀಯರು ಆಸ್ಪತ್ರೆಗೆ  ಸೇರಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದ. ಪ್ರಕರಣದಲ್ಲಿ ಸಾಕ್ಷಿಯಾಗಿ ಯುವತಿ ಸಹಕಾರ ನೀಡಿ ಸಾಕ್ಷ್ಯಾ ಹೇಳಿಕೆಗಳನ್ನು  ದಾಖಲಿಸಿದ್ದು ಆರೋಪಿ ವಿರುದ್ಧ ಆರೋಪಗಳು ಸಾಬೀತಾಗಲು ಅನುಕೂಲವಾಯಿತು ಎಂದು ಸರ್ಕಾರಿ ಅಭಿಯೋಜಕ ಪ್ರಶಾಂತ್‌ ತೋರಗಲ್‌ ಅಭಿಪ್ರಾಯ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next