ಮಕ್ಕಳ ಸಿನಿಮಾವನ್ನು ಯಾರು ನೋಡಬೇಕೆಂದರೆ ಮೊದಲು ಬರುವ ಉತ್ತರ ಮಕ್ಕಳೇ ನೋಡಬೇಕೆಂದು. ಏಕೆಂದರೆ ಮಕ್ಕಳ ತುಂಟಾಟ, ತಮಾಷೆ, ಅವರ ಪೋಕರಿತನವೆಲ್ಲವನ್ನು ದೊಡ್ಡವರಿಗಿಂತ ಮಕ್ಕಳು ಹೆಚ್ಚು ಎಂಜಾಯ್ ಮಾಡುತ್ತಾರೆ. ಮಕ್ಕಳ ಸಿನಿಮಾಗಳಿಗೆ ಮಕ್ಕಳೇ ಆಡಿಯನ್ಸ್ ಆದಾಗ ಸಿನಿಮಾ ಹೆಚ್ಚು ರೀಚ್ ಆಗುತ್ತದೆ ಕೂಡಾ. ಈಗ ಬ್ಯಾಕ್ ಟು ಬ್ಯಾಕ್ ಮೂರು ಮಕ್ಕಳ ಸಿನಿಮಾಗಳು ಬರುತ್ತಿವೆ.
ಈ ವಾರ “ಟ್ಯಾಬ್’ ಹಾಗೂ “ಕೀಟ್ಲೆ ಕೃಷ್ಣ’ ತೆರೆಕಂಡರೆ, ಜೂನ್ 2 ಕ್ಕೆ “ಎಳೆಯರು ನಾವು ಗೆಳೆಯರು’ ಚಿತ್ರ ಬಿಡುಗಡೆಯಾಗಲಿದೆ. ಶಾಲೆ ಶುರುವಾಗುವ ಸಮಯ ಹತ್ತಿರ ಬಂದಿದ್ದು, ಇನ್ನೊಂದು ವಾರದಲ್ಲಿ ಶಾಲೆ ಶುರುವಾಗುತ್ತಿದೆ. ಹಾಗಾಗಿ, ಮಕ್ಕಳ ಸಿನಿಮಾದ ಆಡಿಯನ್ಸ್ ಆಗಿರುವ ಮಕ್ಕಳು, ಶಾಲೆ ಬಿಟ್ಟು ಪಾಲಕರ ಜೊತೆ ಸಿನಿಮಾಕ್ಕೆ ಹೋಗುತ್ತಾರೆಯೇ ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇದೆ.
ಈ ಮೂರು ಮಕ್ಕಳ ಸಿನಿಮಾಗಳು ಎರಡು ವಾರ ಮುಂಚೆ ಬಿಡುಗಡೆಯಾಗಿದ್ದರೆ ಈ ಸಿನಿಮಾ ಮಕ್ಕಳಿಗೆ ರೀಚ್ ಆಗುತ್ತಿತ್ತು ಮತ್ತು ಮಾಡಿದ ಕೆಲಸಕ್ಕೆ ಹೆಚ್ಚು ಸಾರ್ಥಕತೆ ಸಿಗುತ್ತಿತ್ತು ಎಂಬ ಮಾತು ಈಗ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಆದರೆ, ಹೊಸಬರ ಸಿನಿಮಾಗಳಿಗೆ ಕಾಡುವಂತಹ ಥಿಯೇಟರ್ ಸಮಸ್ಯೆ ಸಹಜವಾಗಿಯೇ ಮಕ್ಕಳ ಸಿನಿಮಾಕ್ಕೂ ಕಾಡಿದೆ. ಈಗಷ್ಟೇ ಕನ್ನಡದಲ್ಲಿ ಮಕ್ಕಳ ಸಿನಿಮಾಕ್ಕೆ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ.
ಹಾಗಾಗಿ, ಹೆಚ್ಚು ಥಿಯೇಟರ್‌ಗಳು ಸಿಗುತ್ತಿಲ್ಲ. ಸಿಕ್ಕ ಚಿತ್ರಮಂದಿರಗಳಲ್ಲಿ ಮಕ್ಕಳಾಟ ಪ್ರದರ್ಶನಕ್ಕೆ ಚಿತ್ರತಂಡಗಳು ಮುಂದಾಗಿವೆ ಮತ್ತು ಗೆಲ್ಲುವ ವಿಶ್ವಾಸ ಕೂಡಾ ಆ ತಂಡಗಳಿಗಿವೆ. “ಟ್ಯಾಬ್’ ಚಿತ್ರದಲ್ಲಿ ಮಕ್ಕಳೇ ಮುಖ್ಯಭೂಮಿಕೆಯಲ್ಲಿದ್ದು, ಇಲ್ಲಿ “ಡೋಂಟ್ ಪ್ಲೇ ವಿತ್ ಫೀಲಿಂಗ್ಸ್’ ಎಂಬ ಟ್ಯಾಗ್‌ಲೈನ್ ಇದೆ. “ಮುಗ್ಧ ಮನಸುಗಳು’ ಎಂಬ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದ್ದು, ಮಲ್ಲಿಕಾರ್ಜುನ ಹೊಯ್ಸಳ ಈ ಸಿನಿಮಾದ ನಿರ್ದೇಶಕರು.
ಇನ್ನು, “ಕೀಟ್ಲೆ ಕೃಷ್ಣ’ ಸಿನಿಮಾವನ್ನು ನಾಗರಾಜ್ ಅರೆಹೊಳೆ ಈ ಸಿನಿಮಾದ ನಿರ್ದೇಶಕರು. ಈಗಿನ ಕಾಲದ ಮಕ್ಕಳ ಮನಸ್ಥಿತಿ, ಹಾಗೂ ಅವರ ಮೌನ ಹೇಗೆಲ್ಲಾ ಸಮಸ್ಯೆಗೀಡಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆಯಂತೆ. ಮಾ. ಹೇಮಂತ್ “ಕೀಟ್ಲೆ ಕೃಷ್ಣ’ನಾಗಿ ಕಾಣಿಸಿಕೊಂಡಿದ್ದಾರೆ.
“ಬಾಲ್ಯದಲ್ಲಿ ನಡೆದ ಒದು ಘಟನೆಯನ್ನಿಟ್ಟುಕೊಂಡು ನಿರ್ದೇಶಕರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಜೂನ್‌ನಲ್ಲಿ ಬಿಡುಗಡೆಯಾಗಲಿರುವ “ಎಳೆಯರು ನಾವು ಗೆಳೆಯರು’ ಚಿತ್ರದಲ್ಲಿ ಜೀ ವಾಹಿನಿಯ ಡ್ರಾಮಾ ಜೂನಿಯರ್ ಮೂಲಕ ಮನೆ ಮಾತಾದ ಮಕ್ಕಳು ನಟಿಸಿದ್ದಾರೆ. ಈಗಾಗಲೇ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.