ಬೆಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ತಾಯಿಗೆ ಮಗಳು ತನ್ನ ನಿಶ್ಚಿತಾರ್ಥ ರದ್ದು ಮಾಡಿಕೊಂಡು ಮೂತ್ರಪಿಂಡ ದಾನಮಾಡಿ ಜನ್ಮದಾತೆಯ ಜೀವ ಉಳಿಸಿದ್ದಾಳೆ. ಮಣಿಪಾಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಾಯಿಗೆ ಬಾಂಗ್ಲಾದೇಶದ ಅವಿವಾಹಿತ 26 ವರ್ಷ ವಯಸ್ಸಿನ ಯುವತಿಯು ತನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡಿದ್ದಾಳೆ.
ಮೂತ್ರಪಿಂಡ ನೀಡುವ ನಿರ್ಣಯವನ್ನು ವಿರೋಧಿಸಿದ ಭಾವಿ ಪತಿಯೊಂದಿಗಿನ ನಿಶ್ಚಿತಾರ್ಥವನ್ನೇ ಯುವತಿ ರದ್ದು ಮಾಡಿಕೊಂಡು ಬಂದಿದ್ದರು. ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞ ಡಾ. ಸನಕರನ್ ಸುಂದರ್ ಅವರು ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿದ್ದು, ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ಸನಕರನ್ ಸುಂದರ್, ಸಾಮಾನ್ಯವಾಗಿ ವಿವಾಹವಾಗದ ಮಹಿಳೆಯರು ಅಂಗದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಅವರ ಆರೋಗ್ಯ ಸ್ಥಿತಿ ಆಧರಿಸಿ ಅವರ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂಬ ಆತಂಕವಿರುತ್ತದೆ. ಆದರೆ, ದೃಢ ನಿಶ್ಚಯದ ಯುವತಿ, ತನ್ನ ತಾಯಿಯನ್ನು ಬದುಕಿಸಬೇಕೆಂಬ ನಿರ್ಣಯ ಕೈಗೊಂಡು ಕಿಡ್ನಿ ನೀಡಿದ್ದಾಳೆ ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಅಂಗ ಸ್ವೀಕರಿಸುವವರಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಲಿಂಗ ಸಂಬಂಧ ಅಸಮಾನತೆ ಇದ್ದು, ವಿವಾಹವಾದ ಮಹಿಳೆ ದಾನಿಯಾಗಲು ನಿರ್ಧರಿಸಿದರೂ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ, ಮದುವೆಯಾಗದ ಯುವತಿ ತನ್ನ ತಾಯಿಗಾಗಿ ಅತ್ಯಂತ ದೃಢ ನಿರ್ಣಯ ಮಾಡಿ ಮೂತ್ರಪಿಂಡ ದಾನ ಮಾಡಿದ್ದು, ಆಕೆಯ ಧೈರ್ಯವನ್ನು ಅಭಿನಂದಿಸಲೇಬೇಕು ಎಂದರು.