ಮುಂಬಯಿ: 2023 ರಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ʼದಿ ಕೇರಳ ಸ್ಟೋರಿʼ ಕೊನೆಗೂ ಓಟಿಟಿ ರಿಲೀಸ್ ಗೆ ರೆಡಿಯಾಗಿದೆ.
2023 ರ ಮೇ. 5 ರಂದು ʼಕೇರಳ ಸ್ಟೋರಿʼ ಸಿನಿಮಾ ರಿಲೀಸ್ ಆಗಿತ್ತು. ಆರಂಭಿಕ ದಿನಗಳಲ್ಲಿ ಅಷ್ಟು ಸದ್ದು ಮಾಡದ ಸಿನಿಮಾ ವಾರದ ಬಳಿಕ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿತು.
ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ. ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ, ಇದು ಸುಳ್ಳು ಎಂದ ಬಳಿಕ ಸಿನಿಮಾ ತಂಡ 32 ಸಾವಿರ ಮಹಿಳೆಯರು ಎನ್ನುವ ದೃಶ್ಯ ಸೇರಿ ಅನೇಕ ದೃಶ್ಯವನ್ನು ತೆಗೆದು ಹಾಕಿತ್ತು.
ಹೀಗೆ ವಿವಾದದಿಂದ ಸದ್ದು ಮಾಡಿದ ಅದಾ ಶರ್ಮಾ ಅವರ ʼಕೇರಳ ಸ್ಟೋರಿʼ ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ಕಮಾಯಿ ಮಾಡಿತು. ಆದರೆ ಸಿನಿಮಾ ಎಷ್ಟು ಗಳಿಕೆ ಕಂಡಿತ್ತೋ ಕೆಲವರಿಂದ ಅಷ್ಟೇ ಟೀಕೆಗಳನ್ನೂ ಎದುರಿಸಿತು.
ಈ ಕಾರಣದಿಂದ ಸಿನಿಮಾದ ಓಟಿಟಿ ಖರೀದಿಗೆ ಯಾವ ಫ್ಲಾಟ್ ಫಾರ್ಮ್ ಮುಂದೆ ಬಂದಿರಲಿಲ್ಲ ಎನ್ನಲಾಗಿತ್ತು. ಇದೀಗ ʼಕೇರಳ ಸ್ಟೋರಿʼ ಓಟಿಟಿ ರಿಲೀಸ್ ಗೆ ದಿನ ನಿಗದಿಯಾಗಿದೆ.
ಜೀ5 ಸಿನಿಮಾದ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು, ʼದಿ ಕೇರಳ ಸ್ಟೋರಿʼ ಇದೇ ಫೆಬ್ರವರಿ 16 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಸ್ಟ್ರೀಮ್ ಆಗಲಿದೆ.
ಅದಾ ಶರ್ಮಾ,ಯೋಗಿತಾ ಬಿಹಾನಿ ,ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ʼಕೇರಳ ಸ್ಟೋರಿʼ ಚಿತ್ರತಂಡ ಮತ್ತೆ ಜೊತೆಯಾಗುತ್ತಿದ್ದು ನಕ್ಸಲರ ಕಥೆಯನ್ನೊಳಗೊಂಡ ʼಬಸ್ತಾರ್ʼ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.