ಬೆಂಗಳೂರು : ಬಹುಚರ್ಚಿತ, ಯಶಸ್ವಿ ಬಾಲಿವುಡ್ ಚಿತ್ರ ”ದಿ ಕಾಶ್ಮೀರ್ ಫೈಲ್ಸ್” ಕನ್ನಡಕ್ಕೆ ಡಬ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೆ ರಾಜ್ಯ ಬಿಜೆಪಿಯೂ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ನಡೆಸಿಕೊಂಡಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಬೇಕಾಗಿದೆ, ಕನ್ನಡಕ್ಕೆ ಬಂದರೆ ಉತ್ತಮ ಎಂದು ಈಗಾಗಲೇ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಯನ್ನು ಈ ಹಿಂದೆಯೇ ತೆಗೆದು ಹಾಕಬೇಕಾಗಿತ್ತು. ಕಾಂಗ್ರೆಸ್ ಪಕ್ಷ ಈ ಬಗ್ಗೆ ಯಾಕೆ ಯೋಚನೆ ಮಾಡಲಿಲ್ಲ. ಆ ಕೆಲಸವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಮಾಡಿದರು. ಕಾಂಗ್ರೆಸ್ ಈ ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದರು.
ಇನ್ನೊಂದೆಡೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು, ಚಿತ್ರ ಕನ್ನಡಕ್ಕೆ ಡಬ್ ಆಗಲೇ ಬೇಕಾಗಿದೆ. ನಾನು ಈಗಾಗಲೇ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದು, ಅವರು ಒಪ್ಪಿಗೆ ನೀಡಿದರೆ ನಾವು ಹಣ ಒಟ್ಟುಗೂಡಿಸಿ ಚಿತ್ರವನ್ನು ಡಬ್ ಮಾಡುತ್ತೇವೆ. ಕನ್ನಡಕ್ಕೆ ಬಂದರೆ ಜನರಿಗೆ ಕಾಶ್ಮೀರದಲ್ಲಿ ನಡೆದ ಘಟನೆ ಸ್ಪಷ್ಟವಾಗಿ ಅರ್ಥ ವಾಗುತ್ತದೆ ಎಂದಿದ್ದಾರೆ.
ಹಲವು ಬಿಜೆಪಿ ನಾಯಕರೂ ಕೂಡ ಚಿತ್ರವನ್ನು ಡಬ್ ಮಾಡಿಸುವಲ್ಲಿ ಆಸಕ್ತಿ ತೋರುತ್ತಿದ್ದು, ಭರ್ಜರಿ ಯಶಸ್ಸು ಪಡೆದಿರುವ ನೈಜ ಕಥಾನಕ ಕನ್ನಡ ಮಾತ್ರವಲ್ಲದೆ ಇನ್ನೂ ಹಲವು ಭಾಷೆಗಳಲ್ಲೂ ಡಬ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬಿಜೆಪಿ ಮತ್ತು ಸಂಘಪರಿವಾರ ಚಿತ್ರದ ಯಶಸ್ಸಿಗೆ ಬಹುದೊಡ್ಡ ಶ್ರಮ ವಹಿಸಿದ್ದು, ಇನ್ನಷ್ಟು ಜನರಿಗೆ ಚಿತ್ರವನ್ನು ಪರಿಣಾಮಕಾರಿಯಾಗಿ ತಲುಪಿಸಲು ಮುಂದಾಗಿದೆ.