ಬೆಂಗಳೂರು: ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ಸಿಗುವಂತೆ ನಿರ್ಣಯಕೈಗೊಳ್ಳಬೇಕು ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಆಗ್ರಹಿಸಿದ್ದಾರೆ. ಕನ್ನಡ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕನ್ನಡ ಕಾರ್ಯಕರ್ತರ ಬಳಗ ಕಾರ್ಯಕರ್ತರು ಭಾನುವಾರ ಪುರಭವನದ ಎದುರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಪರ ನಿಲುವು ಸ್ವಾಗತಾರ್ಹ. ಆದರೆ, ಕರ್ನಾಟಕಕ್ಕೊಂದು ಅಧಿಕೃತ ಬಾವುಟ, ಕನ್ನಡಿಗರಿಗೆ ಉದ್ಯೋಗ ನೀಡುವ ಡಾ.ಸರೋಜಿನಿ ಮಹಿಷಿ ವರದಿ ಜಾರಿ ಕುರಿತು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಷ್ಟ್ರಕವಿ ಕುವೆಂಪು ರಚಿತ “ಜಯ ಭಾರತ ಜನನಿಯ ತನುಜಾತೆ’ ನಾಡಗೀತೆ ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ಧಾಟಿಯನ್ನು ನಿಗದಿಪಡಿಸುವುದು,
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದು, ಸರ್ಕಾರ ವಿಳಂಬ ನೀತಿ ಅನುಸರಿಸದೇ ಕೂಡಲೇ ಅನುಷ್ಠಾನಕ್ಕೆ ತರಬೇಕು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಪಡೆದು ಕ್ರಮಕೈಗೊಳ್ಳಬೇಕು. ಅಂತೆಯೇ ಎಲ್ಲ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿಯೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕನ್ನಡ ಕಾರ್ಯಕರ್ತರ ಬಳಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ, ಚಿಂತಕ ಡಾ.ಜಿ.ರಾಮಕೃಷ್ಣ, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಶ್ರೀಸಾಮಾನ್ಯರ ಕನ್ನಡ ಕೂಟ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ,
ಕೇಂದ್ರೀಯ ಸದನ ಕನ್ನಡ ಸಂಘ ಅಧ್ಯಕ್ಷ ಮಾ.ಚಂದ್ರಶೇಖರ್, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ ಅಧ್ಯಕ್ಷ ಆರ್.ರಾಮಸ್ವಾಮಿ, ಕರ್ನಾಟಕ ವಿಚಾರ ವೇದಿಕೆ ಪಾಲನೇತ್ರ, ಲೇಖಕ ಡಾ.ಸಂತೋಷ ಹಾನಗಲ್, ಕನ್ನಡ ಕ್ರೈಸ್ತರ ಸಂಘ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜಾ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಭುಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಮುಖ ಬೇಡಿಕೆಗಳೇನು?
-ಕರ್ನಾಟಕಕ್ಕೊಂದು ಅಧಿಕೃತ ಕನ್ನಡ ಬಾವುಟ.
-ಕನ್ನಡಿಗರಿಗೆ ಉದ್ಯೋಗ ನೀಡುವ ಡಾ.ಸರೋಜಿನಿ ಮಹಿಷಿ ವರದಿ ಜಾರಿ.
-ನಾಡಗೀತೆ ಹಾಡುವ ಕ್ರಮ, ಕಾಲಾವಧಿ ಮತ್ತು ಧಾಟಿ ನಿಗದಿಪಡಿಸುವುದು.
-ರಾಜ್ಯದಲ್ಲಿನ ಎಲ್ಲ ರೀತಿಯ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ.