Advertisement

ರಸಭರಿತ ಕೃತಿಯ ರಸರಹಿತ ಕಾವ್ಯ

09:13 AM Apr 29, 2019 | Lakshmi GovindaRaj |

ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರಗಳು ಇತ್ತೀಚೆಗೆ ಕಡಿಮೆ ಎಂಬ ಮಾತುಗಳ ನಡುವೆಯೇ ಈ ವಾರ “ಮಹಾಕಾವ್ಯ’ ಚಿತ್ರ ತೆರೆಗೆ ಬಂದಿದೆ. ಹೆಸರೇ ಹೇಳುವಂತೆ “ಮಹಾಕಾವ್ಯ’ ಕನ್ನಡದ ಮೂರು ಕಾವ್ಯಗಳನ್ನು ದೃಶ್ಯ ರೂಪದಲ್ಲಿ ತೆರೆಮೇಲೆ ತಂದಿರುವ ಚಿತ್ರ.

Advertisement

ರನ್ನನ “ಗದಾಯುದ್ಧ’, ಪಂಪನ “ವಿಕ್ರಮಾರ್ಜುನ ವಿಜಯ’ ಮತ್ತು ಪೊನ್ನನ “ಶಾಂತಿಪುರಾಣ’ ಮೂರು ಕಾವ್ಯಗಳ ಒಂದೊಂದು ಕಥೆಯನ್ನು ಆಯ್ದುಕೊಂಡು ಅದನ್ನು ದೃಶ್ಯರೂಪದ ಮೂಲಕ ತೆರೆಮೇಲೆ ತರಲಾಗಿದೆ. ಕನ್ನಡದ ಚಿತ್ರರಂಗದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ “ಮಹಾಕಾವ್ಯ’ ಚಿತ್ರ ಒಂದು ವಿಭಿನ್ನ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗಂತ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುತ್ತದೆಯಾ ಎಂದರೆ ಅದೂ ಖಂಡಿತಾ ಇಲ್ಲ. ಯಾವುದೇ ಐತಿಹಾಸಿಕ, ಪೌರಾಣಿಕ ಕಥಾನಕವಾಗಲಿ, ಕೃತಿಗಳಾಗಲಿ, ಅದನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ತರುವಾಗ ಒಂದಷ್ಟು ಮಾರ್ಪಾಡುಗಳು ಅಗತ್ಯವಾಗಿರುತ್ತವೆ.

ಇಲ್ಲವಾದಲ್ಲಿ, ಆ ಕೃತಿಯ ಸತ್ವ ಎನ್ನುವುದು ದೃಶ್ಯರೂಪದಲ್ಲಿ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ವಿಫ‌ಲವಾಗುತ್ತದೆ. “ಮಹಾಕಾವ್ಯ’ ಚಿತ್ರದಲ್ಲೂ ಅಂತಹ ವೈಫ‌ಲ್ಯವನ್ನು ಕಾಣಬಹುದು. ನಿರ್ದೇಶಕರು ಸದುದ್ದೇಶದಿಂದ ಸರ್ವಮಾನ್ಯ ಮತ್ತು ಸಾರ್ವಕಾಲಿಕ ಕೃತಿಗಳ ಕಥಾಹಂದರವನ್ನು ಆಯ್ದುಕೊಂಡರೂ, ಅದನ್ನು ಸಿನಿಮಾದ ಚಿತ್ರಕಥೆಯ ಮೂಲಕ ದೃಶ್ಯರೂಪದಲ್ಲಿ ತೆರೆಮೇಲೆ ತರುವಲ್ಲಿ ಎಡವಿದಂತಿದೆ.

ಸಿನಿಮಾ ಎಂದರೆ ಅದು ದೃಶ್ಯ ಮಾಧ್ಯಮ. ಹಾಗಾಗಿ ಚಿತ್ರದ ಪ್ರತಿ ದೃಶ್ಯಗಳು ನೋಡುಗರನ್ನು ಸೆಳೆಯುವಂತಿರಬೇಕು. ಪ್ರತಿ ದೃಶ್ಯಗಳನ್ನೂ ತೆರೆಮೇಲೆ ಎಷ್ಟು ಸುಂದರವಾಗಿ ಕಟ್ಟಿಕೊಡಲಾಗಿದೆ ಎನ್ನುವುದರ ಮೇಲೆ ಚಿತ್ರದ ನೋಡುಗರ ಆಸಕ್ತಿ ಅವಲಂಭಿಸಿರುತ್ತದೆ.

Advertisement

ಎಷ್ಟೇ ಒಳ್ಳೆಯ ಕೃತಿಗಳಾದರೂ, ಅದನ್ನು ಕುತೂಹಲ ಹುಟ್ಟಿಸುವಂತೆ ದೃಶ್ಯ ರೂಪದಲ್ಲಿ ಹೇಳದಿದ್ದರೆ, ಅದು ನೋಡುಗರಿಗೆ ಪೇಲವವಾಗಿ ಕಾಣುತ್ತದೆ. “ಮಹಾಕಾವ್ಯ’ ಚಿತ್ರ ಕೂಡ ನೋಡುಗರಿಗೆ ಅಂಥದ್ದೇ ಅನುಭವ ನೀಡುತ್ತದೆ. ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಸಂಗೀತದಲ್ಲಿ ಬಳಸಿಕೊಂಡಿರುವ ಕಾವ್ಯದ ಸಾಲುಗಳು, ಸಂಭಾಷಣೆ ಚಿತ್ರಕ್ಕೆ ಪ್ಲಸ್‌ ಎನ್ನಬಹುದು. ಅದನ್ನು ಹೊರತುಪಡಿಸಿದರೆ, ಚಿತ್ರದ ನಿರೂಪಣೆ ಮತ್ತು ತಾಂತ್ರಿಕ ವಿಷಯಗಳಲ್ಲಿ ಚಿತ್ರದಲ್ಲಿ ಸಾಕಷ್ಟು ಕೊರತೆ ಎದ್ದು ಕಾಣುತ್ತದೆ. ಚಿತ್ರದ ಹಿನ್ನೆಲೆ ಸಂಗೀತ, ಶಬ್ದಗ್ರಹಣ ಸ್ಪಷ್ಟವಾಗಿಲ್ಲ. ಗ್ರಾಫಿಕ್ಸ್‌ ಕೆಲಸಗಳೂ ಕೂಡ ಅಪೂರ್ಣವೆನಿಸುತ್ತವೆ.

ಇನ್ನು ಚಿತ್ರದ ಛಾಯಾಗ್ರಹಣ, ಸಂಕಲನ, ವಸ್ತ್ರವಿನ್ಯಾಸ, ಕಲಾ ನಿರ್ದೇಶನ ಎಲ್ಲವೂ ನೋಡುತ್ತಿದ್ದರೆ, “ಮಹಾಕಾವ್ಯ’ವನ್ನು ಸಿನಿಮಾಕ್ಕಿಂತ, ನಾಟಕವಾಗಿ ನೋಡುವುದೇ ಹೆಚ್ಚು ಸೂಕ್ತ ಎಂಬ ಭಾವ ಮೂಡಿಸಿದರೂ ಅಚ್ಚರಿ ಇಲ್ಲ.

ಒಂದೊಳ್ಳೆ ರಸಭರಿತ ಕೃತಿಯನ್ನು ಆಯ್ಕೆ ಮಾಡಿಕೊಂಡರೂ, ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಕಲೆ ನಿರ್ದೇಶಕರಿಗೆ ಗೊತ್ತಿಲ್ಲದಿದ್ದರೆ, ಅದು ಹೇಗೆ ರಸರಹಿತವಾಗಿ ಕಾಣಬಹುದು ಎನ್ನುವುದಕ್ಕೆ ಶ್ರೀದರ್ಶನ್‌ ಅವರ “ಮಹಾಕಾವ್ಯ’ ಉತ್ತಮ ನಿದರ್ಶನ.

ಚಿತ್ರ: ಮಹಾಕಾವ್ಯ
ನಿರ್ಮಾಣ: ವಿಜಯ .ಎಸ್‌
ನಿರ್ದೇಶನ: ಶ್ರೀ ದರ್ಶನ್‌
ತಾರಾಗಣ: ಶ್ರೀದರ್ಶನ್‌, ರಶ್ಮಿ ಪ್ರಭಾಕರ್‌, ರಾಮಕೃಷ್ಣ, ಅನಂತವೇಲು, ಲಕ್ಷ್ಮೀ ಭಟ್‌, ವಲ್ಲಭ್‌, ಗಿರೀಶ್‌, ಗಣೇಶ ರಾವ್‌ ಕೇಸರ್ಕರ್‌, ಶಂಖನಾದ ಅರವಿಂದ್‌, ನಾಗರಾಜ್‌ ಭಟ್‌, ರವಿ ಭಟ್‌ ಮತ್ತಿತರರು.

* ಜಿ.ಎಸ್‌.ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next