ಒಂದು ಕಡೆ ಅಪರಾಧಿ, ಇನ್ನೊಂದು ಕಡೆ ಸಾಕ್ಷಿ, ಎರಡೂ ಒಬ್ಬನೇ.. ಹೇಗಿರಬೇಡ ಹೇಳಿ.. ಇಂತಹ ವಿಭಿನ್ನ ಅಂಶೊಂದಿಗೆ ತೆರೆಗೆ ಬಂದಿರುವ ಚಿತ್ರ “ದಿ ಜಡ್ಜ್ಮೆಂಟ್’. ಹೆಸರು ಕೇಳಿದ ಕೂಡಲೇ ಇದೊಂದು ಕೋರ್ಟ್ ಡ್ರಾಮಾ ಎಂದು ಗೊತ್ತಾಗುತ್ತದೆ.
ಈಗಾಗಲೇ ಕನ್ನಡದಲ್ಲಿ ಹಲವು ಕೋರ್ಟ್ ರೂಂ ಕಥೆಗಳು ಬಂದಿವೆ. ಆದರೆ, “ಜಡ್ಜ್ ಮೆಂಟ್’ ಮಾತ್ರ ಕೊಂಚ ಭಿನ್ನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಕಥೆಯಲ್ಲಿನ ತೀವ್ರತೆ. ಇಲ್ಲೊಂದು ಗಂಭೀರವಾದ ಕಥೆ ಇದೆ, ಅದಕ್ಕೊಂದು ಹಿನ್ನೆಲೆ ಇದೆ. ಜೊತೆಗೆ ಸಮಾಜದಲ್ಲಿ ನಡೆದ ಹಲವು ಪ್ರಕರಣಗಳ ರೆಫರೆನ್ಸ್ ಇದೆ. ಸುಖಾಸುಮ್ಮನೆ ಕೋರ್ಟ್ ರೂಂ ಡ್ರಾಮಾ ಮಾಡಬಾರದು, ಬದಲಾಗಿ ಒಂದಷ್ಟು ಸಂಶೋ ಧನೆ ಮಾಡಿ ಕಥೆಯ ಗಟ್ಟಿತ ನವನ್ನು ಹೆಚ್ಚಿಸಬೇಕೆಂಬ ತಂಡದ ಉದ್ದೇಶ ತೆರೆ ಮೇಲೆ ಎದ್ದು ಕಾಣುತ್ತದೆ. ಇಲ್ಲಿ ಚರ್ಚಿಸುವ, ಆಲೋ ಚಿಸುವ ಹಲವಾರು ಅಂಶಗಳು ಬಂದು ಹೋಗುತ್ತವೆ.
ಕಥೆಯ ಬಗ್ಗೆ ಹೇಳುವುದಾದರೆ ಕೊಲೆ ಕೇಸ್ ವೊಂದರಲ್ಲಿ ವಾದ ಮಾಡಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಯಶಸ್ವಿಯಾಗು ತ್ತಾರೆ. ಆದರೆ, ಈ ಕೇಸ್‌ನಲ್ಲಿ ಏನೋ ಒಂದು ಅಂಶ ಮಿಸ್ ಆಗಿದೆ, ತಾನು ಅಂದುಕೊಂಡಿದ್ದು ಸತ್ಯ ಅಲ್ಲ ಎನಿಸಿ, ಅದೇ ಪ್ರಾಸಿಕ್ಯೂಟರ್ ಆ ವ್ಯಕ್ತಿಯ ಪರ ನಿಲ್ಲುತ್ತಾನೆ. ಅದಕ್ಕೆ ಕಾರಣವೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಕಥೆ ಮುಂದೆ ಸಾಗುತ್ತಾ ಹಲವು ತಿರುವುಗಳನ್ನು ಪಡೆದುಕೊಂಡು ಕುತೂಹಲಕ್ಕೂ ಕಾರಣವಾಗುತ್ತದೆ.
ಯಾವುದೇ ಗೊಂದಲವಿಲ್ಲ ದಂತೆ ಕಥೆ, ಚಿತ್ರಕಥೆಯನ್ನು ಹೆಣೆಯುವ ಮೂಲಕ ಒಂದು ಲೀಗಲ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದರೂ, ಒಂದಷ್ಟು ಕಡೆಗಳಲ್ಲಿ ಇಂತಹ ಸಿನಿಮಾಗಳಿಗೆ ಇರಬೇಕಾದ ರೋಚಕತೆ, ಒಂದಷ್ಟು ಸ್ಪಷ್ಟತೆ ಬೇಕಿತ್ತು ಎನಿಸದೇ ಇರದು. ಚಿತ್ರದಲ್ಲಿ ರವಿಚಂದ್ರನ್ ಕರಿ ಕೋಟು ಹಾಕಿ ಮಿಂಚಿದ್ದಾರೆ. ಉಳಿದಂತೆ ದಿಗಂತ್, ಧನ್ಯಾ, ಮೇಘನಾ ಮತ್ತಿತರರು ನಟಿಸಿದ್ದಾರೆ.
ರವಿಪ್ರಕಾಶ್ ರೈ