Advertisement

ಮಹಿಳೆಯರಿಗೆ ನಾಮಫಲಕ ಬರೆಯುವ ಕೆಲಸ

03:08 PM May 02, 2022 | Team Udayavani |

ರಾಯಚೂರು: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ನಾಮಫಲಕಗಳನ್ನು ಬರೆಯುವ ಕೆಲಸವನ್ನು ಸ್ವ-ಸಹಾಯ ಗುಂಪಿನ ಸದಸ್ಯರಿಗೆ ನೀಡುವ ಮೂಲಕ ಉದ್ಯೋಗ ಸೃಜನೆಗೆ ಒತ್ತು ನೀಡಲಾಗುವುದು ಎಂದು ಜಿಪಂ ಯೋಜನಾ ನಿರ್ದೇಶಕ ಮಡೋಳಪ್ಪ ಪಿ.ಎಸ್‌ ಹೇಳಿದರು.

Advertisement

ನಗರದ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ನಾಮಫಲಕ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ನರೇಗಾದಡಿ ಕೈಗೊಳ್ಳುವ ಕಾಮಗಾರಿಗಳ ನಾಮಫಲಕಗಳನ್ನು ತಯಾರಿಸುವ ಕಾರ್ಯವನ್ನು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನರೇಗಾ ಯೋಜನೆಯ ಕಾಮಗಾರಿಗಳ ನಾಮಫಲಕಗಳ ವೆಚ್ಚವನ್ನು ಸಾಮಗ್ರಿ ಘಟಕದಲ್ಲಿ ಪಾವತಿಸಲಾಗುತ್ತದೆ. ನಾಮಫಲಕ ಗಳನ್ನು ಮಹಿಳಾ ಸದಸ್ಯರು ತಯಾರಿಸಿ, ನರೇಗಾ ತಂತ್ರಾಂಶದಲ್ಲಿ ಲೋಕಲ್‌ ವೆಂಡರ್‌ ಎಂದು ಸೇರ್ಪಡೆ ಮಾಡಿ ಕಾಮಗಾರಿಗಳ ನಾಮಫಲಕದ ವೆಚ್ಚವನ್ನು ಪಾವತಿಸಲು ಅನುಮತಿ ನೀಡಲಾಗುತ್ತದೆ. ಆದ್ದರಿಂದ ಒಕ್ಕೂಟವು ಜಿಎಸ್‌ಟಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದರು.

ಸ್ವ-ಸಹಾಯ ಗುಂಪಿನ ಸದಸ್ಯರಿಗೆ ನಾಮಫಲಕ ತರಬೇತಿ ನೀಡುತ್ತಿರುವ ರಾಜ್ಯದಲ್ಲಿ ಪ್ರಥಮ ಜಿಲ್ಲೆ ರಾಯಚೂರು ಆಗಿದ್ದು, ಆದ ಕಾರಣ ಸ್ವ-ಸಹಾಯ ಗುಂಪಿನ ಸದಸ್ಯರು ನಾಮಫಲಕ ತರಬೇತಿ ಕಾರ್ಯಾಗಾರವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

Advertisement

ನರೇಗಾ ಯೋಜನೆಯಡಿ ಕೈಗೊಳ್ಳುವ ಕೃಷಿ ಹೊಂಡ, ಬದು ನಿರ್ಮಾಣ, ಕೆರೆ ಹೂಳೆತ್ತುವುದು, ಇಂಗು ಗುಂಡಿ, ದನದ ಶೆಡ್‌ ಸೇರಿದಂತೆ ಸರ್ಕಾರದಿಂದ ಕೈಗೊಳ್ಳುವ ಕಾಮಗಾರಿಗಳಿಗೆ ನಾಮಫಲಕ ಕಡ್ಡಾಯವಾಗಿರುವುದರಿಂದ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ತರಬೇತಿ ಪಡೆದ ಮಹಿಳೆಯರಿಗೆ ನಾಮಫಲಕ ಅಳವಡಿಸುವ ಕೆಲಸ ನೀಡಲಾಗುತ್ತದೆ ಎಂದು ವಿವರಿಸಿದರು.

ನಾಮಫಲಕದಲ್ಲಿ ಜಿಲ್ಲೆ, ತಾಲೂಕು, ಇಲಾಖೆಗಳ, ಹಣದ ಮಾಹಿತಿ, ಕೂಲಿಕಾರರ ಮೊತ್ತ, ಸಾಮಗ್ರಿಗಳ ಮಾಹಿತಿ, ಕಾಮಗಾರಿಗಳ ಆರಂಭ, ಮುಕ್ತಾಯ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ನಾಮಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಸ್ವ-ಸಹಾಯ ಗುಂಪಿನ ಸದಸ್ಯರು ನಾಮಫಲಕ ತಯಾರಿಸಲು ಬೇಕಾದ ಸ್ಥಳವನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಎನ್‌.ಆರ್‌.ಎಲ್‌.ಎಂ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ, ಶ್ರೀಕಾಂತ ಬನ್ನಿಗೋಳ, ಟಿಪಿಎಂ ರಮೇಶ, ವಲಯ ಮೇಲ್ವಿಚಾರಕ ಮೌನೇಶ, ಉಮೇಶ, ಪ್ರಸಾದ, ಲೋಕೇಶ, ಪ್ರದೀಪ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next