ಹಾಸನ: ಕಾಂಗ್ರೆಸ್‌ನೊಂದಿಗಿನ ಮೈತ್ರಿ ಮುರಿದುಕೊಳ್ಳುವ ಚರ್ಚೆಯೇನೂ ಜೆಡಿಎಸ್‌ನಲ್ಲಿ ನಡೆದಿಲ್ಲ. ಆದರೆ, ಜೆಡಿಎಸ್‌ಗೆ ಕಾಂಗ್ರೆಸ್‌ನೊಂದಿಗೆ ಮೈತ್ರಿಯ ಅನಿವಾರ್ಯತೆಯೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡ ಮೇಲೆ ಬಿದ್ದು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡೋ ಅಗತ್ಯ ಕಾಣುತ್ತಿಲ್ಲ. ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ನಾಯಕರ ಮಟ್ಟದಲ್ಲಿ ಮೈತ್ರಿಯಾಗಿತ್ತು. ಅದು ಕಾರ್ಯಕರ್ತರ ಹಂತಕ್ಕೆ ಹೋಗಲಿಲ್ಲ. ಈ ಬೆಳಗಣಿಗೆಯೇ ಎರಡೂ ಪಕ್ಷಗಳ ನಡುವಿನ ಸಾಮರಸ್ಯಕ್ಕೆ ಹಿನ್ನಡೆಯಾಗಲು ಹಾಗೂ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸೋಲು ಅನುಭವಿಸಲು ಕಾರಣವಾಗಿದ್ದಂತೂ ಸತ್ಯ ಎಂದರು.
ರಾಜಕೀಯ ವೈರಿಗಳು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವಿನ ಆರೋಪ-ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರು, ಎರಡೂ ಪಕ್ಷಗಳ ನಾಯಕರು ಹೀಗೆ ಕಿತ್ತಾಡಬಾರದಿತ್ತು. ದೇವೇಗೌಡರು ಮೈತ್ರಿ ಕಡಿದುಕೊಳ್ಳುವ ಮಾತನಾಡಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಮಾತುಗಳು ಮುಂದಿನ ಸಂಬಂಧ ಬಗ್ಗೆ ಅನುಮಾನ ಮೂಡಿಸಿವೆ.
ಜೆಡಿಎಸ್-ಕಾಂಗ್ರೆಸ್ ಖಂಡಿತಾ ರಾಜಕೀಯವಾಗಿ ಬದ್ಧ ವೈರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಒಟ್ಟಿಗೇ ಸೇರಿ ಸರ್ಕಾರ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಅವರ ಧೋರಣೆ ನೋಡಿದರೆ ಮುಂಬರುವ ಚುನಾವಣೆಗಳಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಇರುವುದಿಲ್ಲ ಎಂಬ ಬೆಳವಣಿಗೆಗಳಾಗಿವೆ ಎಂದು ಹೇಳಿದರು.
ಮೈಸೂರು ಭಾಗ ಕಡೆಗಣನೆ: ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಳೆ ಮೈಸೂರು ಭಾಗವನ್ನು ಕಡೆಗಣಿಸಲಾಗಿದೆ. ರಾಜ್ಯದ ಕೇವಲ 11 ಜಿಲ್ಲೆಗೆ ಮಾತ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ ಎಂದು ವಿಷಾದಿಸಿದರು. ಎಚ್.ವಿಶ್ವನಾಥ್ ಸರಿಯಾಗಿ ಒಂದು ವರ್ಷ ರಾಜ್ಯಾಧ್ಯಕ್ಷರಾಗಿದ್ದರು. ಆದರೆ, ಅವರು ಜೆಡಿಎಸ್ ಕಚೇರಿ ಕಡೆಗೆ ಬಂದಿದ್ದೇ ಕಡಿಮೆ.
ತಾನು ಅಧ್ಯಕ್ಷನಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ವಿಶ್ವನಾಥ್ ಅಧ್ಯಕ್ಷರಾಗಿದ್ದಾಗಲೂ ಅವರು ಪಕ್ಷ ಸಂಘಟನೆ ಕೆಲಸ ಮಾಡಬಹುದಿತಲ್ಲ. ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಲು ಮುಕ್ತ ವಾತಾವರಣ ಇರಲಿಲ್ಲ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ, ಈಗ ಹೆಚ್ಚು ಮಾನ್ಯತೆ ಇಲ್ಲ ಎಂದು ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಕೇವಲ ಊಹಾಪೋಹ ಅಷ್ಟೇ: ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ವಿಚಾರ ಕೇವಲ ಊಹಾಪೋಹ ಅಷ್ಟೇ. ಕಾಂಗ್ರೆಸ್ ಜೊತೆ ಮೈತ್ರಿ ಭಂಗವಾಗುತ್ತಿದೆ ಎಂಬ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂದು ಭಾವಿಸಬೇಕಾಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.